ಗದಗ, ಮಂಗಳೂರಿನ ಸರ್ಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್​​ ಬೆದರಿಕೆ

ರಾಜ್ಯದಲ್ಲಿ ಬಾಂಬ್​​ ಬೆದರಿಕೆ ಇ-ಮೇಲ್​​ ಸಂದೇಶ ರವಾನೆ ಹೆಚ್ಚಾಗಿವೆ. ಇತ್ತೀಚೆಗೆ ಕೋಲಾರ ಮತ್ತು ಬೀದರ್​​ ಜಿಲ್ಲಾಧಿಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್​​ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇದೀಗ ಅದೇ ರೀತಿಯಾಗಿ ಗದಗ ಮತ್ತು ಮಂಗಳೂರಿನ ಸರ್ಕಾರಿ ಕಚೇರಿಯನ್ನು ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದಾರೆ.

ಗದಗ, ಮಂಗಳೂರಿನ ಸರ್ಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್​​ ಬೆದರಿಕೆ
ಪ್ರಾತಿನಿಧಿಕ ಚಿತ್ರ
Edited By:

Updated on: Dec 15, 2025 | 3:47 PM

ಗದಗ, ಡಿಸೆಂಬರ್​​ 15: ಗದಗ (Gadag) ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ (Bomb Threat) ಹಾಕಲಾಗಿದೆ. ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದಾರೆ. ಸದ್ಯ ಗದಗ ಜಿಲ್ಲಾಡಳಿತ ಭವನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಶ್ವಾನದಳ, ಬಾಂಬ್ ಪತ್ತೆದಳ ಸಿಬ್ಬಂದಿ ಇಂಚಿಂಚು ತಪಾಸಣೆ ಮಾಡಿದ್ದಾರೆ.

ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಬಾಂಬ್​​ ಬೆದರಿಕೆ ಹಾಕಲಾಗಿದೆ. ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಬಾಂಬ್​​ಗಳನ್ನು ಶೀಘ್ರದಲ್ಲೇ ಸ್ಫೋಟಿಸಲಾಗುವುದು. ಪಾಕಿಸ್ತಾನ-ತಮಿಳುನಾಡು ಡಿಎಂಕೆ 2026ರ ಚುನಾವಣೆಗೆ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.​​ ಸದ್ಯ ಡಿವೈಎಸ್​ಪಿ ಮುರ್ತುಜಾ ಖಾಜಿ, ಸಿಪಿಐ ಲಾಲಸಾಬ್ ಜೂಲಕಟ್ಟಿ, ಸಿದ್ದರಾಮೇಶ್​​, ಪಿಎಸ್ಐ ವ್ಹಿಜಿ ಪವಾರ ಸೇರಿದಂತೆ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ.

ಮಂಗಳೂರಿನ ಆರ್‌ಟಿಒ ಕಚೇರಿಗೂ ಬಾಂಬ್ ಬೆದರಿಕೆ

ಅದೇ ರೀತಿಯಾಗಿ ಮಂಗಳೂರಿನ ಆರ್‌ಟಿಒ ಕಚೇರಿಗೂ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಂಗಳೂರಿನ ನೆಹರು ಮೈದಾನದ ಬಳಿಯ ಆರ್‌ಟಿಒ ಕಚೇರಿಗೆ 5 ಕಡೆ ಬಾಂಬ್‌ ಸ್ಫೋಟಿಸುವುದಾಗಿ ಕಿಡಿಗೇಡಿಗಳಿಂದ ಮೇಲ್​​ ರವಾನಿಸಲಾಗಿದೆ. ಸದ್ಯ ಆರ್‌ಟಿಒ ಕಚೇರಿಗೆ ಮಂಗಳೂರು ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಇಡೀ ಕಟ್ಟಡವನ್ನು ತಪಾಸಣೆ ಮಾಡಲಾಗಿದೆ.

ಇದನ್ನೂ ಓದಿ: 13 ವರ್ಷದ ಬಾಲಕಿಯಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ: ಕಾರಣ ಕೇಳಿ ಶಾಕ್ ಆದ ಅಧಿಕಾರಿಗಳು!

ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಬಾಂಬ್​​ ಬೆದರಿಕೆ ಹಾಕಲಾಗಿದೆ. ಮೇಲ್​​​ನಲ್ಲಿ ತಮಿಳುನಾಡು ರಾಜಕೀಯ ವಿಚಾರವಾಗಿ ಕಿಡಿಗೇಡಿಗಳು ಬರೆದಿದ್ದು, ಇದು ಪಾಕಿಸ್ತಾನ ಐಎಸ್ಐ, ಎಲ್​ಟಿಟಿಇಯಿಂದ ರಿಮೋಟ್ ಆಪರೇಷನ್​. ತಮಿಳುನಾಡಿನ IPS ಅಧಿಕಾರಿಗಳ ಹೆಸರು ಮತ್ತು ಸಜ್ಜನ್ ಹೈದರ್ ಪಿಎಎಫ್​ಗೆ ಜಿಂದಾಬಾದ್ ಎಂದು ಉಲ್ಲೇಖಿಸಿದ್ದಾರೆ.

ಬೀದರ್ ಡಿಸಿ ಕಚೇರಿಗೂ ಬಾಂಬ್ ಬೆದರಿಕೆ

ಇನ್ನು ಇತ್ತೀಚೆಗೆ ಬೀದರ್​​ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದೇವೆ ಅದನ್ನ ಆದಷ್ಟು ಬೇಗ ಬ್ಲಾಸ್ಟ್ ಮಾಡಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಮೇಲ್ ಐಡಿಗೆ ಅಪರಿಚಿತರ ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು.

ಇದನ್ನೂ ಓದಿ: ಲವ್ ಒಲ್ಲೆ ಎಂದ ಯುವಕ: ಸಿಟ್ಟಿನಲ್ಲಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಅರೆಸ್ಟ್

ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದ ಹಿನ್ನಲೆ ಪೊಲೀಸರು ಹೈಅಲರ್ಟ್ ಆಗಿ, ಡಾಗ್ ಸ್ಕ್ವಾಡ್‌ನಿಂದ ಪರಿಶೀಲನೆ ನಡೆಸಿದ್ದರು. ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನ ಹೊರಹಾಕಿ, ಪೊಲೀಸರು ಪರಿಶೀಲನೆ ಮಾಡಿದ್ದರು. ಸ್ಥಳಕ್ಕೆ ಡಾಗ್‌ ಸ್ಕ್ವಾಡ್, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಎಲ್ಲಾ ಕಡೆ ತಪಾಸಣೆ ಮಾಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್​​ ಸಂದೇಶ ಇರಬಹುದೆಂದು ಪರಿಶೀಲನೆ ಕೈಬಿಟ್ಟಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:18 pm, Mon, 15 December 25