13 ವರ್ಷದ ಬಾಲಕಿಯಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ: ಕಾರಣ ಕೇಳಿ ಶಾಕ್ ಆದ ಅಧಿಕಾರಿಗಳು!
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ. ತಮಿಳುನಾಡಿನ 13 ವರ್ಷದ ಬಾಲಕಿಯೊಬ್ಬಳು ಈ ಇಮೇಲ್ ಕಳುಹಿಸಿದ್ದಳು ಎಂಬುದು ಗೊತ್ತಾಗಿದ್ದು, ಆಕೆ ಈ ಕೃತ್ಯ ಎಸಗಲು ಕಾರಣವಾದ ವಿಚಾರ ಮಾತ್ರ ಆತಂಕಕಾರಿಯಾಗಿದೆ.

ಕೋಲಾರ, ಡಿಸೆಂಬರ್ 13: ಕೋಲಾರ (Kolar) ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಬಂದಿದ್ದ ಅನಾಮಧೇಯ ಬಾಂಬ್ ಬೆದರಿಕೆ (Bomb Threat) ಇಮೇಲ್ ಜಿಲ್ಲಾಡಳಿತವನ್ನು ಕೆಲಕಾಲ ತಲ್ಲಣಗೊಳಿಸಿತು. ಕೋಲಾರ ಹಾಗೂ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಒಂದೇ ಸಮಯದಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಆಡಳಿತ ಯಂತ್ರ ಫುಲ್ ಅಲರ್ಟ್ ಆಗುವಂತೆ ಮಾಡಿತು. ಬೆಳಿಗ್ಗೆ ಸುಮಾರು 6 ಗಂಟೆಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸುಮಾರು ಮೂರು ಗಂಟೆಗಳ ಬಳಿಕ ಈ ವಿಚಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅಗ್ನಿಶಾಮಕ ದಳ ಹಾಗೂ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ಸಿಬ್ಬಂದಿಯನ್ನು ತುರ್ತಾಗಿ ಹೊರಗೆ ಕಳುಹಿಸಿ, ಇಂಚಿಂಚೂ ಪರಿಶೀಲನೆ ನಡೆಸಲಾಯಿತು. ಕಚೇರಿಯ ವಿವಿಧ ವಿಭಾಗಗಳು, ಕೊಠಡಿಗಳು, ವಿ.ಸಿ ಚೇಂಬರ್ ಸೇರಿದಂತೆ ಸಂಪೂರ್ಣ ಜಿಲ್ಲಾಡಳಿತ ಭವನವನ್ನು ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ತಜ್ಞರು ತಪಾಸಣೆ ನಡೆಸಿದರು. ಈ ವೇಳೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೆಲಕಾಲ ಭಯ ಮತ್ತು ಆತಂಕದ ವಾತಾವರಣ ಆವರಿಸಿತ್ತು.
ಅಪಘಾತವಶಾತ್, ಅದೇ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಿ.ಸಿ ಚೇಂಬರ್‌ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೂಡ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳೊಂದಿಗೆ ಹೊರಬಂದು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಹಕಾರ ನೀಡಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಪರಿಸ್ಥಿತಿಯ ನಿಗಾ ವಹಿಸಿ, ತಪಾಸಣಾ ಕಾರ್ಯವನ್ನು ಮೇಲ್ವಿಚಾರಣೆ ನಡೆಸಿದರು. ಕೆಲ ಗಂಟೆಗಳ ಪರಿಶೀಲನೆಯ ನಂತರ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತು ಪತ್ತೆಯಾಗದೇ ಇದ್ದುದರಿಂದ ಜಿಲ್ಲಾಡಳಿತ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.
ಬಾಂಬ್ ಬೆದರಿಕೆ ಹಿಂದಿನ ಅಸಲಿಯತ್ತೇನು?
ಪೊಲೀಸ್ ತನಿಖೆಯ ವೇಳೆ, ಈ ಬಾಂಬ್ ಬೆದರಿಕೆ ಇಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿಯಿಂದ ಬಂದಿರುವುದು ಗೊತ್ತಾಗಿದೆ. ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಈ ಇಮೇಲ್ ಕಳುಹಿಸಿದ್ದಾಳೆ ಎನ್ನಲಾಗಿದೆ. ಮೇಲ್‌ನಲ್ಲಿ ಬಾಲಕಿ ಮೊದಲಿಗೆ ‘ಆರ್‌ಡಿಎಕ್ಸ್’ ಎಂಬ ಪದ ಬಳಸಿದ್ದು, ನಂತರ ತನಗಾಗಿರುವ ಅನ್ಯಾಯವನ್ನು ವಿವರವಾಗಿ ಬರೆದಿದ್ದಾಳೆ. ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕೋಲಾರ ಎಸ್‌ಪಿ ನಿಖಿಲ್ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ‘ಇದು ನಿಜವಾದ ಬಾಂಬ್ ಬೆದರಿಕೆ ಅಲ್ಲ. ಆದರೂ ಪ್ರೋಟೋಕಾಲ್ ಪ್ರಕಾರ ಸಂಪೂರ್ಣ ಜಿಲ್ಲಾಧಿಕಾರಿ ಕಚೇರಿಯನ್ನು ಪರಿಶೀಲನೆ ಮಾಡಲಾಗಿದೆ. ಸಾರ್ವಜನಿಕರು ಆತಂಕಪಡಬೇಕಾಗಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಳಂದ ಮತಗಳ್ಳತನ ಪ್ರಕರಣ: ಪ್ರಭಾವಿ ನಾಯಕ ಸೇರಿ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಸಿಐಡಿ
ಒಟ್ಟಾರೆ, ‘ಬಾಂಬ್’ ಬೆದರಿಕೆಯ ಒಂದುಇಮೇಲ್ ಕೋಲಾರ ಜಿಲ್ಲಾಡಳಿತವನ್ನು ಕೆಲಕಾಲ ಗೊಂದಲಕ್ಕೆ ದೂಡಿತ್ತು. ಪರಿಶೀಲನೆ ಬಳಿಕ ಸತ್ಯಾಸತ್ಯತೆ ತಿಳಿದು ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.




