ಗದಗ, ಜುಲೈ 27: ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಚರಂಡಿಗಳು ಬ್ಲಾಕ್ ಆಗಿ ಅವಾಂತರ ಸೃಷ್ಠಿ ಆಗುತ್ತಿವೆ. ವಾರ್ಡ್ ಸದಸ್ಯ ಹಾಗೂ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೊಚ್ವಿಗೆದ್ದ ಸ್ಥಳೀಯರು, ಮಹಿಳೆಯರು ನಗರಸಭೆ (municipal council) ಸದಸ್ಯನನ್ನು ಕೂಡಿ ಹಾಕಿ ಬಿಸಿ ಮುಟ್ಟಿಸಿದ್ದಾರೆ. ನಗರದ ಬೆಟಗೇರಿಯ ಬಣ್ಣದನಗರದ ಮೂರನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ.
ಮೂರನೇ ವಾರ್ಡ್ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ. ಕೂಡಿ ಹಾಕಿ ನಾಲ್ಕು ಗಂಟೆಯಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆಸರು ರಸ್ತೆಯಲ್ಲೇ, ಜೀವ ಪಣಕ್ಕಿಟ್ಟು ನೀರು ತರುವ ಮಹಿಳೆಯರ ಪಾಡು ಹೀಗಿದೆ ನೋಡಿ: ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ
ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದರೂ ಅವರು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ವಾರ್ಡ್ ನಲ್ಲಿ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಹದಗೆಟ್ಟಿವೆ. ಈ ಕುರಿತು ಸದಸ್ಯನಿಗೆ ಹಲವಾರು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೇಳಿ ಬಂದವು.
ಹೀಗಾಗಿ ಇವತ್ತು ವಾರ್ಡ್ಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ. ಜನರು ಆಕ್ರೋಶಕ್ಕೆ ಸದಸ್ಯ ಮಾಧುಸಾ ಕಂಗಾಲಾಗಿದ್ದಾನೆ. ಮತ ಪಡೆದು ಜನ ಸೇವೆ ಮಾಡಬೇಕಾದ ಸದಸ್ಯ ಅಧಿಕಾರ ಅನುಭವಿಸಿಕೊಂಡು ಹಾಯಾಗಿದ್ದ. ಆದರೆ ಇವತ್ತು ಮಹಿಳೆಯರು, ವಾರ್ಡ್ ಜನರು ಪಕ್ಕಾ ಪಾಠ ಕಲಿಸಿದ್ದಾರೆ. ಈ ಮೂಲಕ ನಗರಸಭೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.