AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರು ರಸ್ತೆಯಲ್ಲೇ, ಜೀವ ಪಣಕ್ಕಿಟ್ಟು ನೀರು ತರುವ ಮಹಿಳೆಯರ ಪಾಡು ಹೀಗಿದೆ ನೋಡಿ: ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ 

ಈ ಗ್ರಾಮಕ್ಕೆ ಬಂದ್ರೆ ಸಾಕು ಅಯ್ಯೋ ಇದು ಭತ್ತದ ಗದ್ದೆಯೋ ಅಥವಾ ಗ್ರಾಮವೋ ಎನ್ನುವಂತಾಗಿದೆ. ಬಳಗಾನೂರ ಗ್ರಾಮದಲ್ಲಿ ಜನ್ರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಗ್ರಾಮಸ್ಥರು ಕೆರೆ ನೀರು ನಂಬಿಯೇ ಜೀವನ ಮಾಡ್ತಾಯಿದ್ದಾರೆ.

ಕೆಸರು ರಸ್ತೆಯಲ್ಲೇ, ಜೀವ ಪಣಕ್ಕಿಟ್ಟು ನೀರು ತರುವ ಮಹಿಳೆಯರ ಪಾಡು ಹೀಗಿದೆ ನೋಡಿ: ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ 
ಕೆಸರಿನ ರಸ್ತೆಯಲ್ಲೇ, ಜೀವ ಪಣಕ್ಕಿಟ್ಟು ನೀರು ತರುವ ಮಹಿಳೆಯರ ಪಾಡು
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​|

Updated on:Jul 26, 2023 | 1:55 PM

Share

ನರಗುಂದ (ಗದಗ) ಜುಲೈ 26: ಕಳೆದ ಹಲವು ದಿನಗಳಿಂದ ಜಿಟಿಜಿಟಿ ಮಳೆ ಆಗ್ತಾಯಿದೆ. ಹಳ್ಳಿ ಜನ್ರ ಗೋಳ ಹೇಳತೀರದ್ದಾಗಿದೆ. ಇಡೀ ಗ್ರಾಮದ ರಸ್ತೆಗಳು ಕೆಸರು ಗದ್ದೆಯಾಗಿವೆ (Muddy Road). ಅಜ್ಜಿಯರು, ಮಹಿಳೆಯರು ಪ್ರಾಣ ಪಣಕ್ಕಿಟ್ಟು ನಿತ್ಯ ಜೀವನ ನಡೆಸ್ತಾಯಿದ್ದಾರೆ. ರಸ್ತೆಯಲ್ಲಿ ಒಂದು ಅಡಿಯಷ್ಟು ಕೆಸರು ತುಂಬಿಕೊಂಡಿದೆ. ಇಂತಹ ಅದ್ವಾನದ ರಸ್ತೆಯಲ್ಲಿ ಮಹಿಳೆಯರು, ವೃದ್ಧೆಯರು ಕೆರೆಯಿಂದ ನೀರು (Drinking Water) ಹೊತ್ತು ತರ್ತಾಯಿದ್ದಾರೆ. ಸ್ವಲ್ಪ ಯಾಮಾರಿದ್ರೂ ಸಾಕು ಕೈ, ಕಾಲು ಮುರಿದುಕೊಂಡು ಮನೆ ಸೇರಬೇಕು. ನಮ್ಮ ಪಾಲಿಗೆ ಊರಿನ ಹಿರಿಯರು ಸತ್ತು ಹೋಗಿದ್ದಾರೆ ಅಂತ ಮಹಿಳೆಯರು ಕೆಂಡ ಕಾರಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ. ಅಷ್ಟಕ್ಕೂ ಮಹಿಳೆಯರು ರೊಚ್ಚಿಗೇಳಲು ಕಾರಣ ಏನೂ ಅಂತೀರಾ ಈ ಸ್ಟೋರಿ ನೋಡಿ… ಹೌದು ಇಂಥ ಕೆಸರು ಗದ್ದೆಯ ರಸ್ತೆಗಳು ಇರೋದು ಗದಗ ತಾಲೂಕಿನ ಬಳಗಾನೂರ ಗ್ರಾಮದಲ್ಲಿ (Nargund, Gadag).

ಈ ಗ್ರಾಮಕ್ಕೆ ಬಂದ್ರೆ ಸಾಕು ಅಯ್ಯೋ ಇದು ಭತ್ತದ ಗದ್ದೆಯೋ ಅಥವಾ ಗ್ರಾಮವೋ ಎನ್ನುವಂತಾಗಿದೆ. ಬಳಗಾನೂರ ಗ್ರಾಮದಲ್ಲಿ ಜನ್ರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಗ್ರಾಮಸ್ಥರು ಕೆರೆ ನೀರು ನಂಬಿಯೇ ಜೀವನ ಮಾಡ್ತಾಯಿದ್ದಾರೆ. ಇಡೀ ಗ್ರಾಮದ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಇಂಥ ಅದ್ವಾನ ರಸ್ತೆಯಲ್ಲೇ ವೃದ್ಧರು, ಮಹಿಳೆಯರು ಅರ್ಧ ಕಿಲೋಮೀಟರ್ ದೂರದ ಕೆರೆಯಿಂದಲೇ ನೀರು ಹೊತ್ತು ತರಬೇಕು. ಸ್ವಲ್ಪ ಯಾಮಾರಿದ್ರೂ ಕೈ ಕಾಲು ಮುರಿದುಕೊಳ್ಳೋದು ಗ್ಯಾರಂಟಿ. ಆದ್ರೆ, ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಸಿ ಪಾಟೀಲ್, ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಹಿರಿಯರು ಇಲ್ಲಿನ ಜನ್ರ ಗೋಳು ಕೇಳ್ತಾಯಿಲ್ಲ ಅಂತ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.

ನಾವು ಬಿದ್ದು ಸತ್ರು ನಮ್ಮನ್ನು ಯಾರೂ ನೋಡೋರು ದಾದಿಲ್ಲ ಅಂತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಇಂಥ ಕೆಸರು ಗದ್ದೆಯಾದ ರಸ್ತೆಯಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಹೋಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿಗೆ ರೋಸಿ ಹೋದ ಮಹಿಳೆಯರು ಹಾಗೂ ಪುರುಷರಿಂದ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಕೆಂಡಕಾರಿದ್ದಾರೆ. ಈ ಗ್ರಾಮದ ಕೆಲವು ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಗಳು ಇಲ್ಲಾ, ಮೊದಲೇ ಕಪ್ಪು ಮಿಶ್ರಿತ ಮಣ್ಣು ಇರೋದರಿಂದ ರಸ್ತೆಗಳು ಕೆಸರು ಗದ್ದೆಯಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಸಿ ಸಿ ರೋಡ್ ಮಾಡಿಸಲು ಗ್ರಾಮ ಪಂಚಾಯತ್ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ರು. ಆದ್ರೂ ಈವರಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿಲ್ಲಾ.‌ ಕಳೆದ 15 ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದೆ. ಇಂತಹ ರಸ್ತೆಯಲ್ಲಿಯೇ ನೀರು ತರುವಂತೆ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಮಹಿಳೆ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಗಾನೂರು ಗ್ರಾಮದ ಕುರುಬರ ಓಣಿಯಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ನಿತ್ಯ ಕೆಸರು ಗದ್ದೆಯ ರಸ್ತೆಯಲ್ಲೇ ಸಂಚಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಶಾಲಾ ಕಾಲೇಜು ಹೋಗುವ ಮಕ್ಕಳು ಕೂಡಾ ಪರದಾಟ ನಡೆಸಿದ್ದಾರೆ. ಮಹಿಳೆಯರು ದೈನಂದಿನ ಕೆಲಸಕ್ಕೆ‌ ಹೋಗಲು ಸಂಕಷ್ಟ ಅನುಭವಿಸುವಂತಾಗಿದೆ.‌ ಅದರಲ್ಲೂ ಕುಡಿಯುವ ನೀರು ತರಲು ಕೆರೆಗೆ ಹೋಗಬೇಕು, ಆ ಕೆರೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿದೆ. ಅದೇ ರಸ್ತೆಯಲ್ಲಿ ಮಹಿಳೆಯರು ನೀರು ತರುವಂತಹ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಬಾರಿ ಮನವಿ ಮಾಡಿದ್ರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೇರ್ ಮಾಡಿಲ್ಲಾ.‌ ಹೀಗಾಗಿ ಎಲ್ಲಾ ಮಹಿಳೆಯರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ರು, ಜನರನ್ನು ಕಂಡ ಸಿಬ್ಬಂದಿಗಳು ಕೂಡಾ ನಾಪತ್ತೆಯಾಗಿದ್ರು. ಎಲ್ಲಾ ಕಾಮಗಾರಿ ಬಿಟ್ಟು ಮೊದಲು ಕಾಂಕ್ರೀಟ್ ರಸ್ತೆ ಮಾಡ್ಬೇಕು ಎಂದು ಒತ್ತಾಯ ಮಾಡಿದ್ದಾರೆ ಮಹಿಳೆ ಈರಮ್ಮ ಕಿಡಿಕಾರಿದ್ದಾರೆ.

ಜಿಟಿಜಿಟಿ ಮಳೆಯಿಂದ ಕೆಸರು ಗದ್ದೆಯಾಗಿವೆ ಬಳಗಾನೂರು ಗ್ರಾಮದ ರಸ್ತೆಗಳು. ಮಕ್ಕಳು, ಮಹಿಳೆಯರು ವಯಸ್ಸಾದ ಹಿರಿಯ ನಾಗರಿಕರು ನಿತ್ಯ ಪರದಾಟ ನಡೆಸಿದ್ದಾರೆ. ಅದರಲ್ಲೂ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು ಶೌಚಾಲಯ ಇಲ್ಲದೆ ಈ ಜನ್ರ ಸಂಕಷ್ಟ ಹೇಳತಿರದ್ದು, ಇನಾದ್ರು ಅಧಿಕಾರಿಗಳು ಹಾಗೂ ಈ ಭಾಗದ ಶಾಸಕ ಸಿ ಸಿ ಪಾಟೀಲ್ ಎಚ್ಚತ್ತುಕೊಂಡು ಈ ಜನರಿಗೆ ಮೂಲ ಸೌಕರ್ಯ ಒದಗಿಸಿಕೊಡಬೇಕಾಗಿದೆ.

ಗದಗ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Wed, 26 July 23