ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ಹಣ ಲೂಟಿಗೆ ಮುಂದಾದ ಗದಗ-ಬೆಟಗೇರಿ ನಗರಸಭೆ: ಕಾಂಗ್ರೆಸ್, ಬಿಜೆಪಿ ಸದಸ್ಯರಿಂದಲೇ ಅಕ್ರಮ ಬಯಲು

| Updated By: ಆಯೇಷಾ ಬಾನು

Updated on: Nov 06, 2022 | 1:40 PM

ಗದಗ-ಬೆಟಗೇರಿ ನಗರಸಭೆಯ ಮತ್ತೊಂದು ರಾದ್ಧಾಂತ ಬಿಜೆಪಿ ಸದಸ್ಯರೇ ಬಯಲು ಮಾಡಿದ್ದಾರೆ. ಅಹ್ಮದಾಬಾದ್ ಮೂಲದ M/S C M Infra Project pvt, Ltd ಕಂಪನಿಗೆ ಯುಜಿಡಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡಲು ನಕಲಿ ಠರಾವು ಮಾಡಿದ್ದಾರೆ.

ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ಹಣ ಲೂಟಿಗೆ ಮುಂದಾದ ಗದಗ-ಬೆಟಗೇರಿ ನಗರಸಭೆ: ಕಾಂಗ್ರೆಸ್, ಬಿಜೆಪಿ ಸದಸ್ಯರಿಂದಲೇ ಅಕ್ರಮ ಬಯಲು
ಗದಗ-ಬೆಟಗೇರಿ ನಗರಸಭೆ
Follow us on

ಗದಗ: ಗದಗ-ಬೆಟಗೇರಿ ನಗರಸಭೆಯಲ್ಲಿ ಸರ್ಕಾರಕ್ಕೆ ಮಂಕುಬೂದಿ ಎರಚುವ ಕೆಲಸ ನಡೆದಿದೆ. ಪೌರಾಯುಕ್ತರು, ಅಧ್ಯಕ್ಷರು ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ಹಣ ಲೂಟಿಗೆ ಪ್ಲಾನ್ ಮಾಡಿದ್ದಾರಾ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಬಿಜೆಪಿ ಆಡಳಿತದ ಗದಗ-ಬೆಟಗೇರಿ ನಗರಸಭೆಯ ಮತ್ತೊಂದು ರಾದ್ಧಾಂತ ಬಿಜೆಪಿ ಸದಸ್ಯರೇ ಬಯಲು ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸದಸ್ಯರು ನಗರಸಭೆ ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ನಕಲಿ ಠರಾವು ಸೃಷ್ಠಿಸಿದವ್ರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಡಿಸಿ ದೂರು ನೀಡಿದ್ದಾರೆ.

ಗದಗ-ಬೆಟಗೇರಿ ನಗರಸಭೆ ಆಡಳಿತಕ್ಕೆ ಹೇಳೋರೋ ಕೇಳೋರೋ ಯಾರೂ ಇಲ್ಲದಂತಾಗಿದೆ. ಇಲ್ಲಿ ಸರ್ಕಾರಕ್ಕೆ ಕೋಟಿ ಕೋಟಿ ನಾಮಹಾಕುವ ಕೆಸಲ ನಡೆದಿದೆ. ಕಾನೂನು ಬಾಹಿರ ಕೆಲಸಗಳಿಗೆ ಬ್ರೇಕ್ ಹಾಕಬೇಕಿದ್ದ ಪೌರಾಯುಕ್ತರು, ಅಧ್ಯಕ್ಷರೇ ಇಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಹೀಗಾಗಿ ಇವ್ರ ವಿರುದ್ಧ ಬಿಜೆಪಿ, ಕಾಂಗ್ರೆಸ್ ಸದಸ್ಯರು ಈಗ ಸಿಡಿದೆದ್ದಿದ್ದಾರೆ. ಸಾಮಾನ್ಯ ಸಭೆಯಲ್ಲಿ ಯಾವುದೇ ಚರ್ಚೆಯಾಗದೇ, ಠರಾವು ಆಗದೇ ಇದ್ರೂ ಈ ನಕಲಿ ಠರಾವು ಎಲ್ಲಿಂದ ಬಂತು ಅಂತ ಗರಂ ಆಗಿದ್ದಾರೆ. ಒಳಚರಂಡಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡುವ ವಿಚಾರದಲ್ಲಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಅಧ್ಯಕ್ಷೆ ಉಷಾ ದಾಸರ ನಕಲಿ ಠರಾವು ಸೃಷ್ಟಿ ಮಾಡಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಅಹ್ಮದಾಬಾದ್ ಮೂಲದ M/S C M Infra Project pvt, Ltd ಕಂಪನಿಗೆ ಯುಜಿಡಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡಲು ನಕಲಿ ಠರಾವು ಮಾಡಿದ್ದಾರೆ. ತಕ್ಷಣ ನಿರ್ವಹಣೆ ಗುತ್ತಿಗೆಯನ್ನು ರದ್ದು ಮಾಡಬೇಕು ಅಂತ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಎರಡು ಟೀಮ್ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಗದಗ ಜಿಲ್ಲಾಧಿಕಾರಿ ವೈಶಾಲಿ ಅವ್ರಿಗೆ ಲಿಖಿತವಾಗಿ ದೂರು ನೀಡಿದ್ದಾರೆ.

ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಹಾಗೂ ಪೌರಾಯುಕ್ತ ರಮೇಶ್ ಸುಣಗಾರ ಅವ್ರಿಗೆ ಬಿಜೆಪಿ ಸದಸ್ಯರಾದ ಚಂದ್ರು ತಡಸದ ಅನುಮೋದನೆ, ಜಿ ಎಚ್ ಮೂಸಿಗೇರಿ ಸೂಚಕರಾಗಿ ಸಹಿ ಮಾಡಿ ಸಾಥ್ ನೀಡಿದ್ದಾರೆ ಅಂತ ಸದಸ್ಯರು ಆರೋಪಿಸಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ M/S C M Infra Project pvt, Ltd ಕಂಪನಿ 158.70 ಕೋಟಿ ಮೊತ್ತದ ಯುಜಿಡಿ ಕಾಮಗಾರಿ ಮಾಡಿದೆ. ಆದ್ರೆ, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಅನ್ನೋ ಗಂಭೀರ ಆರೋಪ ಈ ಕಂಪನಿ ಮೇಲಿದೆ. ಅಷ್ಟೇ ಅಲ್ಲ ಥರ್ಡ್ ಪಾರ್ಟಿ ಪರಿಶೀಲನೆ ಇನ್ನೂ ಆಗಿಲ್ಲ. ನಗರಸಭೆ ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರ ಆಗಿಲ್ಲ. ಹೀಗಿರುವಾಗ ನಿರ್ವಹಣೆ ಕೊಡುವ ಪ್ರಶ್ನೆಯೇ ಇಲ್ಲ. ಈ ನಡುವೆ ಪೌರಾಯುಕ್ತರು, ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚೆ ಮಾಡದೇ ಪ್ರತಿವರ್ಷ 3.84 ಕೋಟಿ ಮೊತ್ತಕ್ಕೆ ಕಾನೂನು ಬಾಹಿರ ನಿರ್ವಹಣೆಗೆ ಗುತ್ತಿಗೆ ನೀಡಿದ್ದಾರೆ. 15-08-2021 ರಿಂದ 31-03-26 ಐದು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ ಅಂತ ಠರಾವು ಪಾಸ್ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಮನವಿ: ಅವಕಾಶ ಕೊಟ್ರೆ ಸಂಘರ್ಷಕ್ಕೆ ದಾರಿಯಾದೀತು ಎಂದು ಎಚ್ಚರಿಸಿದ ಮುತಾಲಿಕ್

ವಿಪರ್ಯಾಸ ಅಂದ್ರೆ ಆಗಸ್ಟ್‌ 15, 2021 ರಲ್ಲಿ ಬಿಜೆಪಿ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ. ಇದು ಕಾಂಗ್ರೆಸ್, ಬಿಜೆಪಿ ಸದಸ್ಯರ ಕೋಪಕ್ಕೆ ಕಾರಣವಾಗಿದೆ. ಇದೆಲ್ಲವೂ ನೋಡಿದ್ರೆ ನಿರ್ವಹಣೆ ಹೆಸರಲ್ಲಿ ದೊಡ್ಡ ಲೂಟಿಗೆ ಆಡಳಿತ ಪ್ಲಾನ್ ಮಾಡಿದೆ ಅಂತ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಆರೋಪಿಸಿದ್ದಾರೆ. ನಗರಸಭೆ ಉಪಾಧ್ಯೆಕ್ಷೆ ಸುನಂದಾ ಬಾಕಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನಗರಸಭೆ ರಾದ್ಧಾಂತದ ಬಗ್ಗೆ ಡಿಸಿ ವೈಶಾಲಿ ಅವ್ರನ್ನು ಕೇಳಿದ್ರೆ, ಯುಜಿಡಿ ಕಾಮಗಾರಿಗೆ ಬಗ್ಗೆ ಸಾಕಷ್ಟು ದೂರು ಬಂದಿವೆ. ಥರ್ಟ್ ಪಾರ್ಟಿ ಪರಿಶೀಲನೆ ಆಗದೇ ನಗರಸಭೆ ಹಸ್ತಾಂತರ ಮಾಡಿಕೊಳ್ಳಬಾರದು ಅಂತ ತಿಳಿಸಲಾಗಿದೆ. ಎಲ್ಲ ಸದಸ್ಯರ ಬಾರದೇ ನಿರ್ಣಯ ಆಗದೇ ಠರಾವು ಆಗಿದೆ ಅಮತ ದೂರು ಬಂದಿದೆ. ತಕ್ಷಣ ತಡೆ ಹಿಡಿಯುವಂತೆ ನಿರ್ದೇಶನ ಮಾಡಲಾಗಿದೆ ಎಂದ್ರು.

ನಗರಸಭೆಗೆ ಸಂಬಂಧ ಇಲ್ಲದವ್ರೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಭಾರಿ ಹಣದ ವ್ಯವಹಾರ ನಡೆಸಿರೋ ಅನುಮಾನ ಅಂತ ಕಾಂಗ್ರೆಸ್, ಬಿಜೆಪಿ ಸದಸ್ಯರ ಆರೋಪಿಸಿದ್ದಾರೆ. ಈ ಬಗ್ಗೆ ದೂರು ಬಂದ್ರೆ ತನಿಖೆ ಮಾಡಿಸುವುದಾಗಿ ಡಿಸಿ ಮೇಡಂ ಹೇಳಿದ್ದಾರೆ. ಅವಳಿ ನಗರದ ಅಭಿವೃದ್ಧಿ ಮಾಡಿ ಅಂತ ಅವಳಿ ನಗರದ ಜನ್ರು ಮತ ಹಾಕಿ ಅಧಿಕಾರ ನೀಡಿದ್ರೆ. ಆಡಳಿತ ಮಾಡೋರು ಭರ್ಜರಿ ಹಣ ಲೂಟಿ ನಿಂತಿರೋದು ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಸಚಿವರು, ಶಾಸಕರು, ಅಧಿಕಾರಿಗಳು ಹಾದಿ ತಪ್ಪುತ್ತಿರೋ ನಗರಸಭೆ ಆಡಳಿತಕ್ಕೆ ಪಾಠ ಮಾಡಬೇಕು ಅಂತ ಅವಳಿ ನಗರದ ಜನ್ರು ಒತ್ತಾಯಿಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 1:40 pm, Sun, 6 November 22