ಕರ್ನಾಟಕದಲ್ಲಿ ಮಳೆ ಆರ್ಭಟ: ನಿರಂತರ ಮಳೆಗೆ ಬಾಳಿ ಬದುಕಿದ ಮನೆ ಕುಸಿತ, ಸಾವಿರಾರು ಹೆಕ್ಟೇರ್​​ ಬೆಳೆ ನಾಶ, ರೈತ ಕಂಗಾಲು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2022 | 11:09 AM

ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದು, 100 ಎಕರೆ ಕೃಷಿ ಬೆಳೆ, 700 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆಗೆ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಮಳೆ ಆರ್ಭಟ: ನಿರಂತರ ಮಳೆಗೆ ಬಾಳಿ ಬದುಕಿದ ಮನೆ ಕುಸಿತ, ಸಾವಿರಾರು ಹೆಕ್ಟೇರ್​​ ಬೆಳೆ ನಾಶ, ರೈತ ಕಂಗಾಲು
ಮಳೆಯಿಂದಾಗಿ ಕುಸಿದು ಬೀದಿ ಮನೆ
Follow us on

ಗದಗ: ನಿರಂತರ ಮಳೆಗೆ ಕ್ಷಣ ಕ್ಷಣಕ್ಕೂ ಮಣ್ಣಿನ ಮನೆಗಳು ಕುಸಿಯುತ್ತಿದ್ದು, ಮನೆ ಖಾಲಿ ಮಾಡಿದ ಕೆಲವೇ ಗಂಟೆಗಳಲ್ಲಿ ಇಡೀ ಮನೆ ಕುಸಿದಿದ್ದು, ಒಂದೇ ಕುಟುಂಬ ಆರು ಜನ ಪವಾಡ ಸದೃಶ ಬಚಾವ್​ ಆಗಿರುವಂತಹ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ. ಬಾಳಿ ಬದುಕಿದ ಮನೆ ಕುಸಿದು ಬೀದಿ ಬಿದ್ದಿದ್ದು, ಮನೆ ಮಾಲೀಕ ಶರೀಫ್ ಸಾಬ್, ಪತ್ನಿ ಹಜರತ್ ಬೀ, ಸಹೋದರ ಖಾದರ್ ಸಾಬ್, ಪತ್ನಿ ಮಮತಾಜ್ ಬೀ, ಮಕ್ಕಳಾದ ಮಹಮ್ಮದ್ ಅಲಿ, ರಿಯಾಜ್ ಅಪಾಯದಿಂದ ಪಾರಾಗಿದ್ದಾರೆ. ಆಗಸ್ಟ್ 29 ತಡರಾತ್ರಿ 12 ಗಂಟೆಗೆ ಮನೆ ಖಾಲಿ ಮಾಡಿದ್ದು, ಮನೆ ಖಾಲಿ ಮಾಡಿದ ಕೆಲವೇ ಗಂಟೆಯಲ್ಲಿ ಇಡೀ ಮನೆ ಕುಸಿತವಾಗಿದೆ.

ಇಡೀ ಕುಟುಂಬ ಬೀದಿಗೆ ಬಂದ್ರೂ ಗ್ರಾಮ ಪಂಚಾಯತಿ, ಜಿಲ್ಲಾಡಳಿತ ಡೋಂಟ್ ಕೇರ್. ಗ್ರಾಮದ ಗರಡಿ ಮನೆಯಲ್ಲಿ ಕುಟುಂಬ ಆಸರೆ ಪಡೆದಿದ್ದು, ಗ್ರಾಮಸ್ಥರು, ಸಂಬಂಧಿಕರು ನೀಡಿದ ಆಹಾರ ಸೇವಿಸಿ ಜೀವನ ಮಾಡುವಂತ್ತಾಗಿದೆ. ಬಾಳಿ ಬದುಕಿದ ಮನೆ ಕುಸಿತದಿಂದ ಇಡೀ ಕುಟುಂಬ ಕಂಗಾಲಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು, ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

100 ಎಕರೆ ಕೃಷಿ ಬೆಳೆ, 700 ಎಕರೆ ತೋಟಗಾರಿಕೆ ಬೆಳೆ ನಾಶ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದು, 100 ಎಕರೆ ಕೃಷಿ ಬೆಳೆ, 700 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆಗೆ ಸೂಚನೆ ನೀಡಿದೆ. ಮಳೆಯಿಂದ ಹೂವು, ತರಕಾರಿ, ಹಣ್ಣು, ಕೃಷಿ ಬೆಳೆಗಳು ಹಾನಿಯಾಗಿದೆ. ಮಳೆಯಿಂದಾಗಿ ಕೆರೆ ಕುಂಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲಾಡಳಿತದಿಂದ ಎಲ್ಲೆಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಡಿಸಿ ಎನ್​.ಎಂ.ನಾಗರಾಜ್ ಹೇಳಿಕೆ ನೀಡಿದರು.

ಇದನ್ನೂ ಓದಿ: Karnataka Rain: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ

ಜಿಲ್ಲೆಯಲ್ಲಿ ಒಟ್ಟು 1,110 ಹೆಕ್ಟೇರ್ ಕೃಷಿ ಬೆಳೆ ನಾಶ

ರಾಮನಗರ: ಧಾರಕಾರ ಮಳೆಯ ಪರಿಣಾಮ ಜಿಲ್ಲೆಯಲ್ಲಿ 1,110 ಹೆಕ್ಟೇರ್ ಜಮೀನನಲ್ಲಿ ಬೆಳೆ ನಾಶವಾಗಿದೆ. 600 ಹೆಕ್ಟರ್ ಕೃಷಿ ಜಮೀನು, 500 ಹೆಕ್ಟೇರ್ ತೋಟಗಾರಿಗೆ ಜಮೀನು ನಾಶವಾಗಿದೆ. ಜಿಲ್ಲೆಯಾದ್ಯಂತ ರಕ್ಕಸ ಮಳೆಯ ಅವಾಂತರಕ್ಕೆ ತೆಂಗು, ರೇಷ್ಮೆ, ಸೀಮೆಹುಲ್ಲು, ರಾಗಿ, ಭತ್ತ ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಮಳೆಯ ಅವಾಂತರದಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ.

ಕೋಡಿ ಬಿದ್ದ ನಾಯ್ಕಲ್ ಗ್ರಾಮದ ಐತಿಹಾಸಿಕ ದೊಡ್ಡ ಕೆರೆ

ಯಾದಗಿರಿ: ಜಿಲ್ಲೆಯಾದ್ಯಂತ ಕಳೆದ ವಾರ ಎರಡು ದಿನ ಬಾರಿ ಮಳೆ ಹಿನ್ನಲೆ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ ಗ್ರಾಮದ ಐತಿಹಾಸಿಕ ದೊಡ್ಡ ಕರೆ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದ ಕಾರಣಕ್ಕೆ ಅನ್ನದಾತರು ಸಂಭ್ರಮದಲ್ಲಿದ್ದು, 10 ವರ್ಷಗಳ ಬಳಿಕ ದೊಡ್ಡ ಕೆರೆ ಕೋಡಿ ಬಿದ್ದಿದೆ. ಸುಮಾರು ನೂರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕೆರೆ, ಹತ್ತು ವರ್ಷಗಳ ಬಳಿಕ ಈ ವರ್ಷ ಕೋಡಿ ಬಿದ್ದಿದ್ದಕ್ಕೆ ಸಂಭ್ರಮ ಮಾಡಲಾಗುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಬಹುದು ಎಂದು ರೈತರು ಹೇಳುತ್ತಿದ್ದಾರೆ.

ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆಗಳ ಗೋಡೆಗಳು

ಹಾವೇರಿ: ಧಾರಾಕಾರ ಮಳೆಗೆ ಮನೆ ಗೋಡೆಗಳು ಕುಸಿದು ಬಿದ್ದಿರುವಂತಹ ಘಟನೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್ ಸೇರಿ ಹಲವರಿಗೆ ಸೇರಿದ ಮನೆಗಳು ಕುಸಿತವಾಗಿದೆ. ಗೋಡೆ ಕುಸಿದಿದ್ದರಿಂದ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:07 am, Thu, 1 September 22