ಗದಗ: ವೈದ್ಯೋನಾರಾಯಣ ಹರಿ ಎನ್ನುವುದು ಒಂದು ಮಾತಿದೆ. ದೇವರು ಕಾಪಾಡುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ವೈದ್ಯರು(Doctor) ಮಾತ್ರ ಆಪತ್ ಕಾಲದಲ್ಲಿ ಜೀವ ಉಳಿಸುವ ಕಣ್ಣಿಗೆ ಕಾಣುವ ದೇವರು ಎಂದು ಭಾವಿಸುತ್ತೇವೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ(Hospital) ತದ್ವಿರುದ್ಧವಾಗಿ ವೈದ್ಯರು ನಡೆದುಕೊಂಡಿದ್ದಾರೆ. ರೋಗಿಯೊಬ್ಬರನ್ನು ಚಿಕಿತ್ಸೆ(Treatment) ನೀಡಿ ಆರೈಕೆ ಮಾಡುವ ಬದಲು ನೀನು ಸಾಯ್ತಿಯಾ ನಾವು ಚಿಕಿತ್ಸೆ ನೀಡುವುದಿಲ್ಲ ಎಂದು ಅಮಾನೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ 15 ದಿನದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಅಲೆದಾಡಿಸಿ ಸತಾಯಿಸುತ್ತಿದ್ದಾರೆ.
ಗದಗ ಜಿಮ್ಸ್ ಆಸ್ಪತ್ರೆ ಬಡವರ ಸಂಜೀವಿನಿ ಎಂದು ಕರೆಯುತ್ತಾರೆ. ಸರಕಾರ ಬಡ ರೋಗಿಗಳ ಆರೈಕೆಗೆ ಕೋಟಿ ಕೋಟಿ ಖರ್ಚು ಮಾಡುತ್ತದೆ. ಎಲ್ಲಾ ರೀತಿಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದೆ. ಆದರೆ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಅನ್ನೋ ರೀತಿಯಲ್ಲಿ ಇಲ್ಲಿನ ವೈದ್ಯರು ನಡೆದುಕೊಳ್ತಿದ್ದಾರೆ. ಅಂದಹಾಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ರವಿ ಬಾಕಳೆ ಎಂಬ ವ್ಯಕ್ತಿಗೆ ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಬೆಳೆದಿದೆ. ಸುಮಾರು ನಾಲ್ಕೈದು ಕೇಜಿಗಿಂತ ಹೆಚ್ಚು ಗಡ್ಡೆ ಅವರ ಹೊಟ್ಟೆಯಲ್ಲಿ ಇದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಬಂದಿದ್ದಾರೆ. ಆದರೆ ಇಲ್ಲಿನ ವೈದ್ಯರು ಮಾತ್ರ ಶಸ್ತ್ರಚಿಕಿತ್ಸೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 15 ದಿನದಿಂದ ಆಸ್ಪತ್ರೆಯಿಂದ ಮನೆಗೆ ಮನೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದಾರೆ. ಇಂದು ಬಾ ನಾಳೆ ಬಾ ಎಂದು ಅಲೆದಾಡಿಸಿ ಕೊನೆಗೆ ಆಸ್ಪತ್ರೆಗೆ ಬರುವುದು ಬಿಡಬೇಕು ಎಂಬ ಪರಿಸ್ಥಿತಿ ತಂದೊಡ್ಡಿದ್ದಾರೆ. ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಸಾಯ್ತಾನೆ ಅಂತ ರೋಗಿಗೆ ಭಯ ಹುಟ್ಟಿಸಿದ್ದಾರೆ ಎಂದು ಸಂಬಂಧಿ ಯಲ್ಲಪ್ಪ ಬಾಕಳೆ ಆರೋಪಿಸಿದ್ದಾರೆ.
ಇನ್ನು ರವಿ ಬಾಕಳೆಗೆ ಕಳೆದ ಒಂದು ವರ್ಷದಿಂದ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ. ಆದರೆ ಇತ್ತೀಚಿಗೆ ಗಡ್ಡೆ ದೊಡ್ಡದಾಗಿ ಅನಿವಾರ್ಯವಾಗಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕು ಇಲ್ಲದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುತ್ತದೆ. ಆದರೆ ಇಲ್ಲಿ ನೋಡಿದರೆ ಜಿಮ್ಸ್ ವೈದ್ಯರು ಆಪರೇಷನ್ ಮಾಡಿದರೆ ರೋಗಿ ಸಾಯುತ್ತಾನೆ ಎಂದು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೈ ಮರೆತು ಮಾತನಾಡುತ್ತಿದ್ದಾರೆ.
ಸಾಲದ್ದಕ್ಕೆ ಇಂದು ಓಪಿಡಿಯಲ್ಲಿ ವೈದ್ಯರೇ ಇಲ್ಲ. ಓಪಿಡಿ ಮುಂದೆ ಗಂಟೆಗಟ್ಟಲೇ ಕಾಯ್ದರೂ ವೈದ್ಯರು ಬಂದಿರಲಿಲ್ಲ. ಎರಡೂ ಓಪಿಡಿಗಳು ಬಾಗಿಲು ಬಂದ್ ಆಗಿದ್ದವು. ಓಪಿಡಿಗಳ ಮುಂದೆ ರೋಗಿಗಳು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿದ್ದರು. ಹೀಗಾಗಿ ಇಲ್ಲಿ ವೈದ್ಯರಿಗೆ ಹೇಳುವವರು ಕೇಳುವವರು ಇಲ್ಲ ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ ಎಂದು ರೋಗಿ ಸಂಬಂಧಿ ರೋಹಿತ್ ಬಾಕಳೆ ಹೇಳಿದ್ದಾರೆ.
ಇನ್ನು ಈ ಸಂಬಂಧ ಗದಗ ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿಯವರನ್ನು ಸಂಪರ್ಕ ಮಾಡಿದಾಗ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಗಳು ಇದೊಂದೇ ಅಲ್ಲ. ದಿನನಿತ್ಯ ಒಂದಿಲ್ಲಾ ಒಂದು ಘಟನೆಗಳು ನಡಿಯುತ್ತಲೇ ಇರುತ್ತವೆ. ವೈದ್ಯರ ಯಡವಟ್ಟುಗಳು ಸಾಮಾನ್ಯವಾಗಿ ಬಿಟ್ಟಿವೆ. ಹೀಗಾಗಿ ಸರಕಾರ ವೈದ್ಯರ ಅಮಾನವೀಯ ನಡೆಗೆ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಮನವಿಯಾಗಿದೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ:
ಮಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ವಿಡಿಯೋ ಗೇಮ್ ಆಡುವುದರಲ್ಲಿ ಬ್ಯುಸಿ; ವೈದ್ಯರ ನಿರ್ಲಕ್ಷ್ಯ ಆರೋಪ
ಗದಗದಲ್ಲೂ ಶುರುವಾಗಿದೆ ಬೆಡ್ಗಾಗಿ ಹಾಹಾಕಾರ.. ಜಿಮ್ಸ್ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆದ್ರೆ ಮಾತ್ರ ಸೋಂಕಿತರಿಗೆ ಬೆಡ್
Published On - 9:01 am, Tue, 1 February 22