AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಕುಸಿದ ಸೇವಂತಿಗೆ ಬೆಲೆ, ಹೂವಿನ ತೋಟ ನಾಶ ಮಾಡಿದ ರೈತ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ರೈತರ ಮೇಲಿನ ಈ ಬರೆಯ ಮೇಲೆ ಬೆಲೆ ಕುಸಿತದ ಬರ ಬಿದ್ದಿದೆ. ಬೆಲೆ ಕುಸಿತಗೊಂಡ ಹಿನ್ನೆಲೆ ಕದಂಪೂರ ಗ್ರಾಮದ ರೈತರೊಬ್ಬರು ಸೇವಂತಿಗೆ ಹೂವಿನ ಕೃಷಿಯನ್ನು ನಾಶಗೊಳಿಸಿದ್ದಾರೆ.

ಗದಗ: ಕುಸಿದ ಸೇವಂತಿಗೆ ಬೆಲೆ, ಹೂವಿನ ತೋಟ ನಾಶ ಮಾಡಿದ ರೈತ
ಬೆಲೆ ಕುಸಿದ ಪರಿಣಾಮ ಸೇವಂತಿಗೆ ಕೃಷಿ ನಾಶಗೊಳಿಸಿದ ಹೂವು ಬೆಳೆಗಾರ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi|

Updated on:Sep 24, 2023 | 5:58 PM

Share

ಗದಗ, ಸೆ.24: ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ರೈತರ ಮೇಲಿನ ಈ ಬರೆಯ ಮೇಲೆ ಬೆಲೆ ಕುಸಿತದ ಬರ ಬಿದ್ದಿದೆ. ಬೆಲೆ ಕುಸಿತಗೊಂಡ ಹಿನ್ನೆಲೆ ಕದಂಪೂರ ಗ್ರಾಮದ ರೈತರೊಬ್ಬರು ಸೇವಂತಿಗೆ (Chrysanthemums) ಹೂವಿನ ಕೃಷಿಯನ್ನು ನಾಶಗೊಳಿಸಿದ್ದಾರೆ.

ಗ್ರಾಮದ ರೈತ ಬಸಪ್ಪ ನರೇಗಲ್ ಸೇವಂತಿಗೆ ಹೂವಿನ ತೋಟ ಮಾಡಿ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದರು. ಏಕೆಂದರೆ ಶ್ರಾವಣ, ಗಣೇಶನ ಹಬ್ಬ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳಲ್ಲಿ ಹೂವಿಗೆ ಬಂಗಾರಂಥ ರೇಟ್ ಸಿಗುತ್ತದೆ ಅಂದ್ಕೊಂಡು ಹೂವು ಬೆಳೆದಿದ್ದರು. ಲಕ್ಷಾಂತರ ಖರ್ಚು ಮಾಡಿ ವಿವಿಧ ನಮೂನೆಯ ಔಷಧಿ ಸಿಂಪಡಣೆ ಮಾಡಿ ಹಳದಿ ಬಂಗಾರ ಸೇವಂತಿಗೆ ಹೂವು ಬೆಳೆದಿದ್ದರು.

ಇನ್ನೇನೂ ನನ್ನ ಕಷ್ಟ ದೂರವಾಗುತ್ತದೆ, ಭರ್ಜರಿ ಲಾಭವಾಗುತ್ತದೆ ಎಂದು ಅಂದ್ಕೊಂಡ ನೇಗಿಲಯೋಗಿಗೆ ಈಗ ಬರಸಿಡಿಲು ಬಡಿದಂತಾಗಿದೆ. ಹೌದು ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿದ್ದು, ರೈತ ಅಕ್ಷರಶಃ ಕಂಗಾಲಾಗಿದ್ದಾನೆ. ಭೀಕರ ಬರಗಾಲ ಇದ್ದರೂ ಅಲ್ಪಸ್ವಲ್ಪ ನೀರಿನಲ್ಲಿ ಎರಡೂವರೆ ಎಕರೆ ಜಮೀನಿನಲ್ಲಿ ಸೇವಂತಿಗೆ ಹೂ ಬೆಳೆದಿದ್ದರು. ಆದರೆ, ಮಾರುಕಟ್ಟೆಯಲ್ಲಿ ಈ ಸೇವಂತಿಗೆ ಬೆಲೆ ಸಿಗುತ್ತಿಲ್ಲ. ‌ಹೀಗಾಗಿ ಮಾರುಕಟ್ಟೆಗೆ ಹೋದರೂ ಹತ್ತು ರೂಪಾಯಿ ಒಂದು ಕೆಜಿ ಸೇವಂತಿಗೆ ಮಾರಾಟವಾಗಿಲ್ಲ.

ಇದನ್ನೂ ಓದಿ: ಗದಗ: ಚೆಂಡು ಹೂವು ಬೆಳೆದು ಮಗಳಿಗೆ ಬಿಇ ಓದಿಸುವ ರೈತನ ಕನಸು ನುಚ್ಚು ನೂರು

ಇದೇ ಕಾರಣಕ್ಕೆ ಸಮೃದ್ಧವಾಗಿ ಬೆಳೆದ ಸೇವಂತಿಗೆ ಕೃಷಿಯನ್ನು ತಾನೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ. ಮಕ್ಕಳಂತೆ ಸಾಕಿದ ಹೂವು ನೋವಿನಿಂದಲೇ ರೋಟರ್ ಹೊಡೆಯುವ ಮೂಲಕ ನಾಶ್ ಮಾಡಿದ್ದಾರೆ. ಆ ಸೇವಂತಿಗೆ ಇಟ್ಟುಕೊಂಡರೂ ಲಾಭ ಇಲ್ಲಾ ಎಂದು ರೈತ ಬಸಪ್ಪ ನರೇಗಲ್ ಅಳಲು ತೋಡಿಕೊಂಡಿದ್ದಾರೆ.

ಹೂವಿನ ಬೆಲೆ ಕುಸಿತಕ್ಕೆ ಕಾರಣವೇನು?

ಎರಡೂವರೆ ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆಯಲು, ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಸಾಲ ಸೂಲ ಮಾಡಿ ಸಮೃದ್ಧವಾಗಿ ಸೇವಂತಿಗೆ ಬೆಳೆದಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲವೆಂದು ಬೆಳೆ ನಾಶ ಮಾಡಿದ್ದಾರೆ. ಬರಗಾಲ ಆವರಿಸಿದ್ದರಿಂದ ಗ್ರಾಮೀಣ ಭಾಗದ ಜನರು ಹೂ ಖರೀದಿ ಮಾಡುತ್ತಿಲ್ಲ. ನಗರ ಪ್ರದೇಶದಲ್ಲಿನ ಜನರು ಕೂಡ ಹೆಚ್ಚಿಗೆ ಹೂ ಖರೀದಿ ಮಾಡುತ್ತಿಲ್ಲವಂತೆ. ಹೀಗಾಗಿ ದಿಢೀರ್ ಹೂವಿನ ಬೆಲೆ ಕುಸಿತ ಕಂಡಿದೆ.

ಬರಗಾಲದಿಂದ ಇಡೀ ಮುಂಡರಗಿ ತಾಲೂಕು ತತ್ತರಿಸಿದೆ. ಅಲ್ಪಸ್ವಲ್ಪ ನೀರಿನಲ್ಲಿ ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಅಕ್ಕಪಕ್ಕ ರೈತರು ಬಂಗಾರಂಥ ಹೂವಿನ ತೋಟ ನಾಶ ಮಾಡುತ್ತಿರುವುದನ್ನು ನೋಡಿ ತಡೆದಿದ್ದಾರೆ. ಆದರೆ ರೇಟ್ ಪಾತಾಳಕ್ಕೆ ಕುಸಿದಿದ್ದರಿಂದ ರೋಸಿಹೋದ ರೈತ ಬಸಪ್ಪ ಯಾರ ಮಾತು ಕೇಳದೇ ಇಡೀ ತೋಟ ನಾಶ ಮಾಡಿದ್ದಾರೆ.

ಭೀಕರ ಬರದಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ಉತ್ತಮ ಬೆಳೆ ಬೆಳೆದ ರೈತರ ಸಹಾಯಕ್ಕೆ ಬರಬೇಕು. ಅನ್ನದಾತ ಬೆಳೆದ ಬೆಳೆ ಬೆಂಬಲ ಬೆಲೆ ಸಿಗುವಂತ ವ್ಯವಸ್ಥೆ ಮಾಡಬೇಕು ಅಂತ ಶಾಂತಯ್ಯ‌ ಮುತ್ತಿನಪೆಂಡಿಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಬರದ ಛಾಯೆಗೆ ನೇಗಿಲಯೋಗಿ ಅಕ್ಷರಶಃ ಪತರಗುಟ್ಟಿ ಹೋಗಿದ್ದಾರೆ. ಒಂದು ಕಡೆ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ಅಲ್ಪಸ್ವಲ್ಪ ನೀರು ಬಳಸಿ ಬೆಳೆದ ರೈತರು ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರದ ರೈತರ ನೆರವಿಗೆ ಧಾವಿಸಬೇಕು. ಪರಿಹಾರ ನೀಡಿ, ರೈತರನ್ನು ಕಾಪಾಡುವ ಕೆಲಸ ಮಾಡಬೇಕು ಎನ್ನುವದು ರೈತರ ಕೂಗು.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sun, 24 September 23