Sign In

By signing in or creating an account, you agree with Associated Broadcasting Company's Terms & Conditions and Privacy Policy.

Chit cheat: ನಮ್ಮ ಜನ ಲಕ್ಷಗಳಲ್ಲಿ ಮೋಸ ಹೋದರೂ ಮತ್ತೆ ಮತ್ತೆ ಉಂಡೆನಾಮ ತಿಕ್ಕಿಸಿಕೊಳ್ತಾರೆ! ಹಣದ ಬಗ್ಗೆ ಈ ಕಕ್ಕುಲತೆ, ನಿರ್ಲಕ್ಷತೆ ಯಾಕೋ!?

ಚೀಟಿ ವ್ಯವಹಾರದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಲಕ್ಷ ಲಕ್ಷ ಹಣ ಹೂಡಿಕೆ...! ಮುಂದೆ ದೊಡ್ಡ ಮೊತ್ತದ ಹಣ ಸಂಗ್ರಹವಾದ್ರೆ ಮಕ್ಕಳ ಮದುವೆ, ಶಿಕ್ಷಣ, ಹೊಸ ಮನೆ ಕನಸು ಕಂಡವ್ರಿಗೆ ಶಾಕ್! ನಾಲ್ಕೈದು ಕೋಟಿ ಹಣ ಸಂಗ್ರಹ ಮಾಡಿ ಎಸ್ಕೇಪ್ ಆದ ವಂಚಕ!

Chit cheat: ನಮ್ಮ ಜನ ಲಕ್ಷಗಳಲ್ಲಿ ಮೋಸ ಹೋದರೂ ಮತ್ತೆ ಮತ್ತೆ ಉಂಡೆನಾಮ ತಿಕ್ಕಿಸಿಕೊಳ್ತಾರೆ! ಹಣದ ಬಗ್ಗೆ ಈ ಕಕ್ಕುಲತೆ, ನಿರ್ಲಕ್ಷತೆ ಯಾಕೋ!?
ನಮ್ಮ ಜನ ಲಕ್ಷಗಳಲ್ಲಿ ಮೋಸ ಹೋದರೂ ಮತ್ತೆ ಮತ್ತೆ ಉಂಡೆನಾಮ ತಿಕ್ಕಿಸಿಕೊಳ್ತಾರೆ!
Follow us
ಸಾಧು ಶ್ರೀನಾಥ್​
|

Updated on: May 30, 2023 | 11:19 AM

ಅವ್ರೆಲ್ಲಾ ಸಣ್ಣಪುಟ್ಟ ವ್ಯಾಪಾರಿಗಳು. ನಿತ್ಯವೂ ದುಡಿದರೆ ಮಾತ್ರವೇ ಹೊಟ್ಟೆಗೆ, ಬಟ್ಟೆಗೆ ಆದೀತು. ಹನಿ ಹನಿ ಗೂಡಿದ್ರೆ ಹಳ್ಳ ಅನ್ನೋ ಹಾಗೆ ನಿತ್ಯ ದುಡಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಹಣ ಚೀಟಿ ವ್ಯವಹಾರದಲ್ಲಿ (Chit) ಇನ್ವೆಸ್ಟ್ ಮಾಡಿದ್ರು. ಮುಂದೆ ಇದು ದೊಡ್ಡ ಮೊತ್ತ ಆದ್ರೆ ಮಕ್ಕಳ ಮದುವೆ, ಹೊಸ ಮನೆ, ಸೈಟ್ ಖರೀದಿಸುವ ಕನಸು ಕಂಡಿದ್ರು. ಮತ್ತೊಬ್ರು ಮಕ್ಕಳ ಶಿಕ್ಷಣಕ್ಕೆ ಅಂತ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದರು. ಆದ್ರೆ, ಆ ಐನಾತಿ ಖದೀಮ ಕೋಟ್ಯಾಂತರ ಹಣ ಸಂಗ್ರಹಿಸಿ ಎಲ್ಲರಿಗೂ ಉಂಡೆನಾಮ ಹಾಕಿ (Fraud) ಎಸ್ಕೇಪ್ ಆಗಿದ್ದಾನೆ. ಮದುವೆ, ಹೊಸ ಮನೆ ಕನಸು ಕಂಡವ್ರು ಕಂಗಾಲಾಗಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಏನಿದು ಚೀಟಿ ವ್ಯವಹಾರ ಅಂತೀರಾ ಈ ಸ್ಟೋರಿ ನೋಡಿ…

ಚೀಟಿ ವ್ಯವಹಾರದಲ್ಲಿ ನೂರಾರು ಸಣ್ಣಪುಟ್ಟ ವ್ಯಾಪಾರಸ್ಥರು ಲಕ್ಷ ಲಕ್ಷ ಹಣ ಹೂಡಿಕೆ…! ದೊಡ್ಡ ಮೊತ್ತದ ಹಣ ಸಂಗ್ರಹವಾದ್ರೆ ಮಕ್ಕಳ ಮದುವೆ, ಶಿಕ್ಷಣ, ಹೊಸ ಮನೆ ಕನಸು ಕಂಡವ್ರಿಗೆ ಶಾಕ್…! ನಾಲ್ಕೈದು ಕೋಟಿ ಹಣ ಸಂಗ್ರಹ ಮಾಡಿ ಎಸ್ಕೇಪ್ ಆದ ವಂಚಕ…! ಉಂಡೂ ಹೋದ ಕೊಂಡು ಹೋದ ಐನಾತಿ ಮೋಸಗಾರ ವಿರುದ್ಧ ವ್ಯಾಪಾರಿಗಳ ಆಕ್ರೋಶ…! ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಾಪಾರಸ್ಥರು…!

ಹೂಡಿಕೆ ಮಾಡಿ, ಉಂಡೆ ನಾಮ ತಿಕ್ಕಿಸಿಕೊಂಡ ಸಣ್ಣಪುಟ್ಟ ವ್ಯಾಪಾರಸ್ಥರು ಇದೀಗ ಸಪ್ಪೆ ಮುಖ ಮಾಡಿಕೊಂಡು ನಿಂತಿದ್ದಾರೆ. ಲಕ್ಷ ಲಕ್ಷ ಹಣ ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ನಿತ್ಯ ಬೆವರು ಹರಿಸಿ ದುಡಿದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ನೂರಾರು ವ್ಯಾಪಾರಸ್ಥರಿಗೆ ಸುಮಾರು ನಾಲ್ಕೈದು ಕೋಟಿ ಪಂಗನಾಮ ಹಾಕಿ ಎಸ್ಕೇಪ್ ಆದ ಐನಾತಿ ಕುಟುಂಬದ ಕಥೆ. ಹೌದು ಈ ಮಹಾಮೋಸ ನಡೆದಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ (Gajendragad, Gadag). ಫೋಟೋದಲ್ಲಿ ಇರೋ ಖದೀಮರೇ ನೂರಾರು ಜನ್ರಿಗೆ ಕೋಟ್ಯಾಂತರ ರೂಪಾಯಿ ಉಂಡೆನಾಮ ಹಾಕಿ ಎಸ್ಕೇಪ್ ಆದವ್ರು. ಶಂಕರಸಾ ಶಿಂಗ್ರಿ, ಪರಶುರಾಮ ಶಿಂಗ್ರಿ ಸಹೋದರರೇ ಚೀಟಿ ವ್ಯವಹಾರದಲ್ಲಿ ಜನ್ರಿಗೆ ಉಂಡೆನಾಮ ಹಾಕಿದವ್ರು.

ಈ ವ್ಯಾಪಾರಸ್ಥರೆಲ್ಲಾ ಗಜೇಂದ್ರಗಡ ಪಟ್ಟಣದಲ್ಲಿ ಸಣ್ಣಪುಟ್ಟ ವ್ಯಾಪಾರ, ಬೈಕ್ ರಿಪೇರಿ ಗ್ಯಾರೇಜ್, ಬೀದಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡವ್ರು. ನಿತ್ಯ ದುಡಿದ್ರೆ ಇವ್ರಿಗೆ ಹೊಟ್ಟೆ ಬಟ್ಟೆ ಎಲ್ಲ. ಇಲ್ಲಾಂದ್ರೆ ಕಷ್ಟದ ಬದುಕು. ನಿತ್ಯ 800-1000 ಸಾವಿರ ವ್ಯಾಪಾರ ಮಾಡಿದ್ರೆ, ಇದ್ರಲ್ಲಿ ಚೀಟಿ ವ್ಯವಹಾರದಲ್ಲಿ 500-600 ರೂಪಾಯಿ ಹೂಡಿಕೆ ಮಾಡ್ತಾಯಿದ್ರು. ಶಂಕರಸಾ ಶಿಂಗ್ರಿ, ಪರಶುರಾಮ ಶಿಂಗ್ರಿ ಸಹೋದರರು ಸುಮಾರು 20 ವರ್ಷಗಳಿಂದ ಚೀಟಿ (ಬಿಸಿ) ವ್ಯವಹಾರ ಮಾಡುತ್ತಿದ್ದಾರೆ.

ಸುಮಾರು ವರ್ಷ ಜನ್ರ ಜೊತೆಗೆ ಒಳ್ಳೆಯ ವ್ಯವಹಾರ ಮಾಡಿ ಜನ್ರ ನಂಬಿಕೆ ಗಳಿಸಿದ್ದಾರೆ. ಹೀಗಾಗಿ ಜನ್ರು ಕೂಡ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ, ನಾಲ್ಕೈದು ತಿಂಗಳಿಂದ ವಂಚಕ ಶಂಕರಸಾ ಶಿಂಗ್ರಿ ವರ್ತನೆ ಬದಲಾಗಿದೆ. ಹೀಗಾಗಿ ಜನ್ರು ನಮ್ಮ ಹಣ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಇವತ್ತು ಕೊಡ್ತೀನಿ.. ನಾಳೆ ಕೊಡ್ತೀನಿ ಅಂತ ಹೇಳಿ ಈಗ ಶಂಕರಸಾ ಶಿಂಗ್ರಿ ಏಕಾಏಕಿ ಊರು ಬಿಟ್ಟು ಹೋಗಿದ್ದಾನೆ. ಈ ವಿಷಯ ಬಡ ವ್ಯಾಪಾರಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಹಗಲು ರಾತ್ರಿ ದುಡಿದು ಚೀಟಿ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿ ಕಂಗಲಾಗಿದ್ದಾರೆ. ನೂರಾರು ಜನ್ರ ಕೋಟ್ಯಾಂತರ ಹಣ ಲೂಟಿ ಮಾಡಿ ಎಸ್ಕೇಪ್ ಆಗಿದ್ದು, ಹಣ ಕೊಟ್ಟ ಜನ್ರು ಗೋಳಾಡುತ್ತಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೇಟ್ಟಿಲು ಏರಿದ್ದಾರೆ.

ಗಜೇಂದ್ರಗಡ ಪಟ್ಟಣದಲ್ಲಿ ಭಾಷಾ ಸಾಬ್ ಎಂಬಾತ ಬೈಕ್ ಗ್ಯಾರೇಜ್ ಮಾಡಿ ನಿತ್ಯವೂ 500-1000 ಸಾವಿರ ರೂಪಾಯಿ ಗಳಿಸುತ್ತಿದ್ದ. ತಂಗಿ ಮದುವೆಗೆ ಬಂದಿದ್ದಾಳೆ. ಹೀಗಾಗಿ ಅದ್ಧೂರಿಯಾಗಿ ತಂಗಿಯ ಮದುವೆ ಮಾಡಬೇಕು ಅಂತ ಈ ಐನಾತಿ ಶಂಕರಸಾ ಶಿಂಗ್ರಿ ಬಳಿ ಚೀಟಿಗೆ ಹಣ ಹೂಡಿಕೆ ಮಾಡಿದ್ದಾರೆ. ದುಡಿದ ಸಾವಿರ ರೂಪಾಯಿಯಲ್ಲಿ 500-600 ರೂಪಾಯಿ ಹೂಡಿಕೆ ಮಾಡಿದ್ದಾರೆ. ಕಳೆದ ವಾರ ತಂಗಿ ಮದುವೆ ಇತ್ತು. ಶಂಕರಸಾಗೆ ಹಣ ಕೊಡುವಂತೆ ದುಂಬಾಲು ಬಿದ್ದಿದ್ದಾನೆ. ಆದ್ರೆ, ಇವತ್ತು ಕೊಡ್ತೀನಿ, ನಾಳೆ ಕೊಡ್ತೀನಿ ಸತಾಯಿಸಿದ್ದಾನೆ. ಇವತ್ತಿಲ್ಲ ನಾಳೆ ಹಣ ಬರುತ್ತೆ ಅಂತ ಸಾಲ ಮಾಡಿ ತಂಗಿ ಮದುವೆ ಮಾಡಿದ್ದಾನೆ. ಸುಮಾರು 2 ಲಕ್ಷ ಹಣ ಬರಬೇಕು. ಆದ್ರೆ, ಈ ಐನಾತಿ ಶಂಕರಸಾ ಎಸ್ಕೇಪ್ ಆಗಿದ್ದು, ಭಾಷಾಸಾಬ್ ಕಂಗಾಲಾಗಿದ್ದಾನೆ. ಈತ ಒಬ್ಬನೇ ಅಲ್ಲ ಹಲವಾರು ವ್ಯಾಪಾರಸ್ಥರು ಮನೆ ನಿರ್ಮಾಣ ಮಾಡಬೇಕು, ಸೈಟ್ ಖರೀದಿ ಮಾಡಬೇಕು. ಮಕ್ಕಳ ಶಿಕ್ಷಣಕ್ಕಾಗಿ ಅಂತೆಲ್ಲಾ ಚೀಟಿಗೆ ಲಕ್ಷ ಲಕ್ಷ ಹಾಕಿ ಕಂಗಾಲಾಗಿದ್ದಾರೆ. ಈಗ ನೂರಾರು ವ್ಯಾಪಾರಿಗಳು ವಂಚಕ ಶಂಕರಸಾ ಶಿಂಗ್ರಿ ಮನೆಗೆ ಹೋಗಿ ಕೇಳಿದ್ರೆ, ಆತನ ತಮ್ಮ ಪರಶುರಾಮ್ ಶಿಂಗ್ರಿ ನನಗೆ ಗೊತ್ತಿಲ್ಲ ಅಂತಿದ್ದಾನೆ. ಆದ್ರೆ, ಇಬ್ಬರೂ ಸಹೋದರರು ಕೂಡಿಯೇ ಜನ್ರ ಬಳಿ ಹಣ ವಸೂಲಿ ಮಾಡಿದ್ದಾರೆ. ಆದ್ರೆ, ಈಗ ನಾಟಕ ಆಡ್ತಾಯಿದ್ದಾರೆ. ಹೀಗಾಗಿ ನೂರಾರು ವ್ಯಾಪಾರಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ಶಂಕರಸಾ ಶಿಂಗ್ರಿ, ಪರಶುರಾಮ ಶಿಂಗ್ರಿ ಸಹೋದರರು ಗಜೇಂದ್ರಗಡ ಪಟ್ಟಣದಲ್ಲಿ ಸುಮಾರು 20 ವರ್ಷಗಳಿಂದ ಅಕ್ರಮವಾಗಿ ಈ ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಆರಂಭದಲ್ಲಿ ಜನ್ರ ಜೊತೆಗೆ ಒಳ್ಳೆಯ ವ್ಯವಹಾರ ಮಾಡಿ ವಿಶ್ವಾಸ ಗಳಿಸಿದ್ದಾರೆ. ಆದ್ರೆ, ಈಗ ನಾಲ್ಕೈದು ಕೋಟಿಯಷ್ಟು ಹಣ ಜನ್ರಿಂದ ಸಂಗ್ರಹ ಮಾಡಿದ್ದಾರೆ. ದೊಡ್ಡ ಮೊತ್ತದ ಹಣ ಸಂಗ್ರಹ ಮಾಡಿ ಜನ್ರಿಗೆ ಉಂಡೆನಾಮ ಹಚ್ಚಿ ಶಂಕರಸಾ ಎಸ್ಕೇಪ್ ಆಗಿದ್ದಾನೆ. ಉಂಡೂ ಹೋದ ಕೊಂಡು ಹೋದ ಐನಾತಿ ಮೋಸಗಾರ ವಿರುದ್ಧ ಬಡ ವ್ಯಾಪಾರಿಗಳು ಕೆಂಡಕಾರಿದ್ದಾರೆ. ಹಗಲು, ರಾತ್ರಿ ದುಡಿದ ಹಣ ಅಂತ ಗೋಳಾಡುತ್ತಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೇಟ್ಟಿಲೇರಿದ್ದು, ಮುಂದೆನಾಗುತ್ತೋ ಕಾದು ನೋಡಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ