ಗದಗ, ಅ.05: ಗದಗ-ಬೆಟಗೇರಿ(Gadag-Betageri)ಅವಳಿ ನಗರದಲ್ಲಿ ಅಕ್ರಮ ಲೇಔಟ್ಗಳ ಹಾವಳಿ ಮಿತಿಮೀರಿದೆ. ಸರ್ಕಾರದ ಎಲ್ಲ ನಿಯಮ ಗಾಳಿಗೆ ತೂರಿ ಲೇಔಟ್ ಮಾಲೀಕರು ಹಣ ಕಮಾಯಿ ಮಾಡುವ ಕೆಲಸ ನಡೆಸಿದ್ದಾರೆ. ಒಂದು ಲೇಔಟ್ ಪೂರ್ಣ ಆಗಬೇಕಾದರೆ ರಸ್ತೆ, ಯುಜಿಡಿ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಆ ಬಳಿಕ ಗದಗ-ಬೆಟಗೇರಿ ಅಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡುತ್ತದೆ. ತದನಂತರವೇ ನಗರಸಭೆ ಫಾರ್ಮ್-3 ನೀಡಬೇಕು. ಅಂದಾಗ ಮಾತ್ರ ಮುಂದೆ ಖರೀದಿ ಆಗುತ್ತದೆ. ಆದ್ರೆ, ನಗರಸಭೆ ಅಧಿಕಾರಿಗಳು ಸರ್ಕಾರದ ಎಲ್ಲ ಕಾನೂನು ಉಲ್ಲಂಘಿಸಿ ರಿಯಲ್ ಎಸ್ಟೆಟ್ ಕುಳಗಳು ನೀಡುವ ಹಣ ಪಡೆದು ಫಾರ್ಮ್-3 ನೀಡಿದ್ದಾರೆ. ಅದೇ ನಗರಸಭೆ ಈಗ ಸೈಟ್ ಖರೀದಿ ಮಾಡಿದ ಬಡ, ಸಾಮಾನ್ಯ ಜನರಿಗೆ ಫಾರ್ಮ್-3 ನೀಡುತ್ತಿಲ್ಲ.
ಅಷ್ಟೇ ಅಲ್ಲ, ಮನೆ ನಿರ್ಮಾಣಕ್ಕೆ ಅನುಮತಿ ಕೂಡ ನೀಡುತ್ತಿಲ್ಲ.ಈ ಕುರಿತು ಪ್ರಶ್ನಿಸಿದರೆ, ನಿಮ್ಮ ಲೇಔಟ್ ಪೂರ್ಣ ಆಗಿಲ್ಲ. ಹೀಗಾಗಿ ನೀಡುವುದಿಲ್ಲ ಅಂತಿದ್ದಾರೆ. ಇದು ಸೈಟ್ ಖರೀದಿ ಮಾಡಿದ ಅವಳಿ ನಗರದ ಅಮಾಯಕ ಜನರು ಕಂಗಾಲಾಗುವಂತೆ ಮಾಡಿದೆ. ಸರ್ಕಾರದ ಎಲ್ಲ ಕಾನೂನು ಗಾಳಿಗೆ ತೂರಿ ರೀಯಲ್ ಎಸ್ಟೇಟ್ ಮಾಲೀಕರು ಬೇಕಾಬಿಟ್ಟಿ ಮಾರಾಟ ನಡೆಸಿದ್ದಾರೆ. ಯಾವುದೇ ಲೇಔಟ್ಗಳಲ್ಲಿ ಕನಿಷ್ಠ ಸೌಲಭ್ಯವನ್ನು ರಿಯಲ್ ಎಸ್ಟೇಟ್ ಮಾಲೀಕರು ನೀಡಿಲ್ಲ. ಅನುಮೋದನೆ ಇಲ್ಲದ ಅಕ್ರಮ ಲೇಔಟ್ ಮಾಲೀಕರಿಗೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಾಥ್ ನೀಡಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದ ಅವಳಿ ನಗರದ ಜನರ ಕನಸು ಕನಸಾಗಿಯೇ ಉಳಿದಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಅವಳಿ ನಗರದ ಜನ ಗೋಳಾಡುವಂತಾಗಿದೆ ಎಂದು ಜನ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಅಕ್ರಮ ಆಸ್ತಿಗೆ ತೆರಿಗೆ; ಬಿಬಿಎಂಪಿ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ
ಗದಗ-ಬೆಟಗೇರಿ ಅಭಿವೃದ್ಧಿ ಪ್ರಾಧಿಕಾರ ಪ್ರಕಾರ ಗದಗ-ಬೆಟಗೇರಿ ಅವಳಿ ನಗರದ 260ಕ್ಕೂ ಅಧಿಕ ಲೇಔಟ್ಗಳಲ್ಲಿ ಸುಮಾರು 60 ಲೇಔಟ್ಗಳಿಗೆ ಮಾತ್ರ ಅಂತಿಮ ಅನುಮೋದನೆ ಹೊಂದಿವೆ. ಹೀಗಾಗಿ ಸೈಟ್ ಖರೀದಿ ಮಾಡಿದ ಅಮಾಯಕ ಸಾವಿರಾರು ಜನರು ಈಗ ಕಂಗಾಲಾಗಿದ್ದಾರೆ. ಲೇಔಟ್ ಮಾಲೀಕರು ಕಾನೂನು ಮೀರಿ ಮಾರಾಟಕ್ಕೆ ನಗರಸಭೆ ಅಧಿಕಾರಿಗಳು ಸಾಥ್ ನೀಡಿದ್ದು, ದಾಖಲೆಗಳಲ್ಲಿ ಗೊತ್ತಾಗಿದೆ. ಅಷ್ಟಕ್ಕೇ ಸುಮ್ಮನಾಗದ ನಗರಸಭೆ, ಸಿಸಿ ಇಲ್ಲದ ಲೇಔಟ್ಗಳಲ್ಲಿ ಮನೆಗಳ ಕಟ್ಟಡಕ್ಕೂ ಅನುಮತಿ ನೀಡಿದೆ.
ರಿಯಲ್ ಎಸ್ಟೇಟ್ ಮಾಲೀಕರ ಎಂಜಲು ಕಾಸಿಗೆ ಅವಳಿ ನಗರದ ಸಾವಿರಾರು ಜನರಿಗೆ ಅಧಿಕಾರಿಗಳು ಮೋಸ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಮನೆ ಕಟ್ಟಿದ, ಸೈಟ್ ಖರೀದಿ ಮಾಡಿದ ಸಾವಿರಾರು ಜನರು ಈಗ ವಿಲವಿಲ ಅಂತಿದ್ದಾರೆ. ಇಷ್ಟೊಂದು ದೊಡ್ಡ ಮಾಫಿಯಾ ಅವಳಿ ನಗರದಲ್ಲಿ ನಡೆದರೂ ಗದಗ-ಬೆಟಗೇರಿ ಅಭಿವೃಧ್ಧಿ ಪ್ರಾಧಿಕಾರ ಡೋಂಟ್ ಕೇರ್ ಅಂತಿದೆ. ಎರಡು ವರ್ಷದ ಹಿಂದೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾನೂನು ಮೀರಿದ ಲೇಔಟ್ ಮಾಲೀಕರಿಗೆ ನೋಟಿಸ್ ನೀಡಿತ್ತು. ಆದ್ರೆ, ವರ್ಷಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ.
ಲೇಔಟ್ ಮಾಲೀಕರು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯಿಸಿದ್ದಾರೆ. ಗದಗ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿ ಗಪ್ ಚುಪ್ ಆಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಾಮಾನ್ಯ ಜನರಿಗೆ ಆಗುತ್ತಿರುವ ಅನ್ಯಾಯ ಸರಿ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Sat, 5 October 24