ಬಟನ್​ ಒತ್ತಿ ಸಮಸ್ಯೆ ಹೇಳಿ! ಗದಗದಲ್ಲಿ ಪ್ರಭುವಿನೆಡೆಗೆ ಪ್ರಭುತ್ವ, ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಸ್ಪಂದಿಸುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ‘ಪ್ರಭುವಿನೆಡೆಗೆ ಪ್ರಭುತ್ವ’ ಎಂಬ ಹೊಸ ಪರಿಕಲ್ಪನೆಯನ್ನು ಜಾರಿ ಮಾಡಲಾಗಿದೆ. ಇದು ದೇಶದಲ್ಲೇ ಮೊದಲು ಎಂದು ಜಿಲ್ಲಾಡಳಿತ ಹೇಳಿದೆ. ಜನರು ಇದನ್ನು ಬಳಸುವುದು ಹೇಗೆ, ಅವರ ಸಮಸ್ಯೆಗೆ ಪರಿಹಾರ ಹೇಗೆ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ಬಟನ್​ ಒತ್ತಿ ಸಮಸ್ಯೆ ಹೇಳಿ! ಗದಗದಲ್ಲಿ ಪ್ರಭುವಿನೆಡೆಗೆ ಪ್ರಭುತ್ವ, ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ
ಪ್ರಭುವಿನೆಡೆಗೆ ಪ್ರಭುತ್ವ
Updated By: ಗಂಗಾಧರ​ ಬ. ಸಾಬೋಜಿ

Updated on: Aug 18, 2025 | 8:51 AM

ಗದಗ, ಆಗಸ್ಟ್​ 18: ಈ ಆಧುನಿಕ ಕಾಲದಲ್ಲಿ ಅನೇಕ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಕಷ್ಟ. ಹೀಗಾಗಿ ‘ಪ್ರಭುವಿನೆಡೆಗೆ ಪ್ರಭುತ್ವ’ (Prabhuvindege Prabhutva) ಎನ್ನುವ ಪರಿಕಲ್ಪನೆ ತರಲಾಗಿದೆ. ಆ ಮೂಲಕ ವಿದ್ಯುನ್ಮಾನ ಯಂತ್ರದ ಮುಂದೆ ಸಮಸ್ಯೆ ಹೇಳಿಕೊಂಡರೆ ಸಾಕು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಾರೆ. ಗದಗ (Gadag) ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರಂಭಗೊಳ್ಳುತ್ತಿದ್ದು, ಈ ರೀತಿಯ ಪರಿಕಲ್ಪನೆ ಇಡೀ ದೇಶದಲ್ಲೇ ಪ್ರಥಮ ಎಂದು ಜಿಲ್ಲಾಡಳಿತ ಹೇಳಿದೆ

‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಇಡೀ ದೇಶದಲ್ಲಿ ಮೊದಲ ಭಾರಿಗೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಆರಂಭ ಮಾಡಲಾಗಿದೆ.‌ ಅಂದಹಾಗೇ ಈ ಹಿಂದೆ ರಾಜ್ಯ ಮಹಾರಾಜರ ಕಾಲದಲ್ಲಿ ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಗಂಟೆಯನ್ನು ಬಾರಿಸುತ್ತಿದ್ದರು. ಆದರೆ ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾಗಿ ವಿದ್ಯುನ್ಮಾನ ಯಂತ್ರವನ್ನು ಅಳವಡಿಕೆ ‌ಮಾಡಲಾಗಿದೆ.

ಜನ ಬಳಕೆ ಹೇಗೆ?

ಈ ಯಂತ್ರದಲ್ಲಿನ ಬಟನ್ ಒತ್ತುವ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಜನರು ಬಟನ್ ಒತ್ತಿದ ಕೂಡಲೇ ಅದು‌ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕಂಟ್ರೋಲ್​ ರೂಂಗೆ ಕಾಲ್ ಹೋಗುತ್ತದೆ. ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾರೆ. ನಂತರ ಸಂಬಂಧಿಸಿದ ಇಲಾಖೆಗೆ ಅದರ ಮಾಹಿತಿ ನೀಡುತ್ತಾರೆ. ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಹೀಗಾಗಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುವುದರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಸಿಗುವ ನಂಬಿಕೆಯಿದೆ. ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಜಾರಿ ಮಾಡಲಾಗಿದೆ ಎಂದು ಸಚಿವ ಎಚ್​.ಕೆ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆಯೇ ಇಲ್ಲ! ಪ್ರಯಾಣಿಕರ ಆಕ್ರೋಶ

ಗದಗ ಜಿಲ್ಲೆಯಾದ್ಯಂತ 10 ವಿದ್ಯುನ್ಮಾನ ಯಂತ್ರವನ್ನು ಅಳವಡಿಕೆ ‌ಮಾಡಲು ಜಿಲ್ಲಾಡಳಿತ ಪ್ಲ್ಯಾನ್​ ಮಾಡಿದೆ. ಆ ಪೈಕಿ ನಗರದ ಕೆ.ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣ, ಜವಳ ಗಲ್ಲಿ, ತೆಂಗಿನಕಾಯಿ ಬಜಾರಿನಲ್ಲಿ ಅಳವಡಿಕೆ ‌ಮಾಡಲಾಗಿದೆ.‌ ಮುಂದಿನ ದಿನಗಳಲ್ಲಿ ಜಿಲ್ಲೆಯ ಏಳು ತಾಲೂಕಿನಲ್ಲಿ ಅನುಷ್ಠಾನ ಮಾಡಲು ನಿರ್ಧಾರ ಮಾಡಲಾಗಿದೆ.

ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಅಕ್ರಮ ಮದ್ಯ ಮಾರಾಟ, ಅಪರಾಧದ ಮಾಹಿತಿ, ರಸ್ತೆ ಸಮಸ್ಯೆ, ಯಾವುದೇ ಕೆಲಸಕ್ಕೆ ತಳಮಟ್ಟದ ಅಧಿಕಾರಿಗಳು ಕಾಲ‌ಹರಣ ಮಾಡುತ್ತಿದ್ದರೆ, ಅದನ್ನು ಕೂಡ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಇದರಿಂದ ಪಾರದರ್ಶಕ ಆಡಳಿತ ಸಿಕ್ಕತ್ತಾಗುತ್ತದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಬರುವುದರಿಂದ ಸಮಸ್ಯೆ ಕೂಡಲೇ ಇತ್ಯರ್ಥ ಆಗುತ್ತದೆ. ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಬಡ ಜನರಿಗೆ ನ್ಯಾಯ ಸಿಗುವ ನಂಬಿಕೆಯಿದೆ ಎಂಬ ಮಾತು ಸಾರ್ವಜನಿಕರದ್ದು.

ಇದನ್ನೂ ಓದಿ: ಸೀರೆಯಲ್ಲಿ ‘ಆಪರೇಷನ್ ಸಿಂಧೂರ’ ಶೌರ್ಯ ನೇಯ್ದ ಗದಗಿನ ನೇಕಾರ

ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಲು ಇದೊಂದು ಒಳ್ಳೆಯ ಪರಿಕಲ್ಪನೆ ಆಗಿದೆ. ಇಡೀ ದೇಶದಲ್ಲಿ ಮೊಲದ ಭಾರಿಗೆ ‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಜಾರಿ ಮಾಡಲಾಗಿದೆ. ಆಗಸ್ಟ್ 15 ರಿಂದ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಯಾವ ರೀತಿ ಉಪಯೋಗವಾಗಲಿದೆ ಕಾದು ನೋಡಬೇಕಿದೆ.

ಇನ್ನು ಇದೇ ತರಹದ ಯೋಜನೆಗಳು ಹಲವೆಡೆ ಜಾರಿಯಲ್ಲಿದೆ. ಇತ್ತೀಚೆಗೆ ಬೆಂಗಳೂರು ಪೊಲೀಸರು “ಸುರಕ್ಷತಾ ದ್ವೀಪ” ಅಡಿ ಹೊಸ ತಂತ್ರಜ್ಞಾನವನ್ನು ನಗರಕ್ಕೆ ಪರಿಚಯಿಸಿದ್ದರು. ಸಂಕಷ್ಟದಲ್ಲಿರುವವರು ತುರ್ತು ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗದೆ ಇದ್ದರೇ ಈ ತಂತ್ರಜ್ಞಾನದ ಮೊರೆ ಹೋಗಬಹುದಾಗಿದೆ. 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:45 am, Mon, 18 August 25