ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆಯೇ ಇಲ್ಲ! ಪ್ರಯಾಣಿಕರ ಆಕ್ರೋಶ
ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ ಮಾರ್ಗಕ್ಕೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಆದರೆ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆಯೇ ಇಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿರಿಯರು, ವಿದ್ಯಾರ್ಥಿಗಳು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಆಗಸ್ಟ್ 18: ನಮ್ಮ ಮೆಟ್ರೋ ಯೆಲ್ಲೋ ಲೈನ್ (Namma Metro Yellow Line), ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ವರೆಗಿನ ರೈಲು ಸಂಚಾರಕ್ಕೆ ಚಾಲನೆ ನೀಡಿ 8 ದಿನ ಕಳೆದಿವೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತು ಕೊಳ್ಳಲು ಒಂದೇ ಒಂದು ಕುರ್ಚಿ, ಬೆಂಚ್ ವ್ಯವಸ್ಥೆ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಐದರಿಂದ ಏಳು ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡುತ್ತಿವೆ. ಆದರೆ ಯೆಲ್ಲೋ ಲೈನ್ನಲ್ಲಿ 25 ರಿಂದ 30 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡುತ್ತಿವೆ. ಇಷ್ಟೊಂದು ಹೊತ್ತು ಕಾಯುವಾಗ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗುತ್ತಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಬರುವ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ.
ಟಿಕೆಟ್ ದರ ಮಾತ್ರ ಹೆಚ್ಚಿಸುತ್ತಾರೆ. ಸೂಕ್ತ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಪ್ರಯಾಣಿಕರು ಕುಳಿತುಕೊಳ್ಳಲು ಒಂದು ಚೇರ್ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಪ್ರಯಾಣಿಕ ರಾಜೇಶ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಯಾವ ಸ್ಟೇಷನ್ಗಳಲ್ಲಿಯೂ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ಸ್ಟೇಷನ್ಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ ಯೆಲ್ಲೋ ಲೈನ್ ನಿಲ್ದಾಣಗಳಲ್ಲಿ ಮಾತ್ರ ಸರಿಯಾದ ವ್ಯವಸ್ಥೆ ಇಲ್ಲ ಎಂದು ಹಿರಿಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 5 ಗಂಟೆಗೇ ಆರಂಭವಾದ ಯೆಲ್ಲೋ ಲೈನ್ ಮೆಟ್ರೋ ಸಂಚಾರ
ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳ ರಜೆಯ ಹಿನ್ನೆಲೆ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದ ಜನರು ಬೆಂಗಳೂರಿಗೆ ವಾಪಸಾಗುವ ಕಾರಣ, ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ 6-30 ರ ಬದಲಾಗಿ ಸೋಮವಾರ ಬೆಳಗ್ಗೆ 5 ಗಂಟೆಯಿಂದ ಸಂಚಾರ ಆರಂಭವಾಗಿದೆ. ಮಂಗಳವಾರ ಎಂದಿನಂತೆ ಬೆಳಿಗ್ಗೆ 6-30 ರಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗದಲ್ಲಿ ಎಂದಿನಂತೆ ಬೆಳಿಗ್ಗೆ 4:15 ರಿಂದಲೇ ರೈಲುಗಳು ಸಂಚಾರ ಆರಂಭಿಸಿವೆ.
ಇದನ್ನೂ ಓದಿ: ಗುಡ್ ನ್ಯೂಸ್: ಹಳದಿ ಮಾರ್ಗದ ಮೆಟ್ರೋ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು
ಒಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಯೆಲ್ಲೋ ಲೈನ್ ಮಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಒಂದೇ ಒಂದು ಚೇರ್, ಬೆಂಚ್ ವ್ಯವಸ್ಥೆ ಮಾಡದಿರುವ ಬಿಎಂಆರ್ಸಿಎಲ್ ವಿರುದ್ಧ ಇದೀಗ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



