ಗದಗ, ಮಾ.3: ಜಿಲ್ಲೆಯಲ್ಲಿ ಭೀಕರ ಬರದ (Drought) ಹೊಡೆತಕ್ಕೆ ಜಾನುವಾರಗಳು ಅಕ್ಷರಶಃ ಕಂಗಾಲಾಗಿವೆ. ತಿನ್ನಲು ಮೇವು ಇಲ್ಲದೇ ಮೂಕ ಪ್ರಾಣಿಗಳು ಕಂಗೆಟ್ಟಿವೆ. ಸರಿಯಾದ ಆಹಾರ ಸೇವನೆ ಮಾಡದೆ ಎಲುಬುಗಳು ಕಾಣುತ್ತಿವೆ. ಮನೆ ಮಗನಂತೆ ಸಾಕಿ ಸಲುಹಿದ ಎತ್ತುಗಳ ಸ್ಥಿತಿ ಕಂಡು ಅನ್ನದಾತರು ಕಂಗಾಲಾಗಿದ್ದಾರೆ. ಮೇವಿನ ಬೆಲೆ ಗಗನಕ್ಕೇರಿದೆ. ಭೀಕರ ಬರ ಎದುರಾದರೂ ಗದಗ (Gadag) ಜಿಲ್ಲಾಡಳಿತ ಮಾತ್ರ ಗೋಶಾಲೆ, ಮೇವಿನ ವ್ಯವಸ್ಥೆ ಮಾಡದೇ ಕುಂಭಕರ್ಣ ನಿದ್ದೆಗೆ ಜಾರಿದೆ. ಇದು ರೈತರನ್ನು ಕೆರಳುವಂತೆ ಮಾಡಿದೆ. ಅಲ್ಲದೆ, ಮನಸ್ಸಿಲ್ಲದಿದರೂ ರೈತರು ಕೈಗೆ ಬಂದ ಬೆಲೆಗೆ ರಾಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಭೀಕರ ಬರ ಅನ್ನದಾತರ ಜೀವ ಹಿಂಡುತ್ತಿದೆ. ಬಿತ್ತಿದ ಬೆಳೆಗಳು ನೆಲಬಿಟ್ಟು ಎದ್ದಿಲ್ಲ. ಹೀಗಾಗಿ ಲಕ್ಷ ಲಕ್ಷಾ ಸಾಲ ಮಾಡಿ ಬಿತ್ತಿನೆ ಮಾಡಿದ ಬೆಳೆಗಳು ಕೈಕೊಟ್ಟಿದ್ದರಿಂದ ರೈತರ ಸ್ಥಿತಿ ಅಯೋಮಯವಾಗಿದೆ. ತಮ್ಮ ಸಂಸಾರದ ಬಂಡಿ ಸಾಗಿಸಲು ಕಷ್ಟ ಕಷ್ಟ ಎನ್ನುವಂತಾಗಿದೆ. ಇನ್ನೂ ರೈತ ಮಿತ್ರ ಎತ್ತುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮೇವು ಇಲ್ಲದೇ ಜಾನುವಾರಗಳು ಅಕ್ಷರಶಃ ಕಂಗಾಲಾಗಿವೆ. ಜಾನುವಾರಗಳ ಮೂಕ ರೋಧನೆ ರೈತರು ಮಮ್ಮಲ ಮರಗುವಂತೆ ಮಾಡಿದೆ.
ಇದನ್ನೂ ಓದಿ: ಗದಗ: ಶುದ್ಧ ನೀರಿನ ಹರಿಕಾರ ಎಚ್ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ
ಮೇವಿನ ಕೊರತೆಯಿಂದ ಎತ್ತುಗಳು ಅಸ್ತಿಪಂಜರದಂತೆ ಕಾಣುತ್ತಿವೆ. ದಷ್ಟಪುಷ್ಟ ಇದ್ದ ರಾಸುಗಳ ಎಲುಬುಗಳು ಈಗ ಮೇಲೆ ಎದ್ದು ಕಾಣುತ್ತಿವೆ. ಮೇವಿನ ಕೊರತೆ ವಿಪರೀತವಾಗಿದ್ದರಿಂದ ಮೇವಿನ ಬೆಲೆ ಗಗನಕ್ಕೆ ಏರಿದೆ. ಮೇವಿನ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. 3 ಸಾವಿರ ರೂಪಾಯಿಗೆ ಒಂದು ಟ್ರ್ಯಾಕ್ಟರ್ ಇದ್ದ ಮೇವಿನ ಬೆಲೆ ಈಗ 12-13 ಸಾವಿರಕ್ಕೆ ಏರಿಕೆಯಾಗಿದೆ. ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಭೀಕರ ಬರಕ್ಕೆ ಎಲ್ಲ ಬೆಳೆಗಳು ಸರ್ವನಾಶವಾಗಿದ್ದು, ಈಗ ಜಾನುವಾರಗಳಿಗೆ ಮೇವು ಖರೀದಿ ಮಾಡುವಷ್ಟು ಶಕ್ತಿ ರೈತರಿಗಿಲ್ಲ. ತೀವ್ರ ಸಂಕಷ್ಟದಲ್ಲಿ ಅನ್ನದಾತರು ಇದ್ದಾರೆ. ಹೀಗಾಗಿ ಸಾಕಿ ಸಲುಹಿದ ಎತ್ತುಗಳ ಸ್ಥಿತಿ ನೋಡೋಕೆ ಆಗದ ರೈತರು ಮಾರಾಟಕ್ಕೆ ಮುಂದಾಗಿದ್ದಾರೆ.
ಭೀಕರ ಬರ ಅನ್ನದಾತರ ಜೀವ ಹಿಂಡುತ್ತಿದೆ. ಸರ್ಕಾರ ಕೂಡ ಬರ ನಿರ್ವಹಣೆಗೆ ಕೋಟ್ಯಾಂತರ ಅನುದಾನ ನೀಡಿದೆ. ಆದರೆ, ರೈತರು ಇಷ್ಟೊಂದು ಸಂಕಷ್ಟದಲ್ಲಿ ಸಿಲುಕಿದರೂ ಗದಗ ಜಿಲ್ಲಾಡಳಿತ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಗೋಶಾಲೆ ತೆರೆದಿಲ್ಲ. ಮೇವಿನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಗದಗ ಜಿಲ್ಲಾಡಳಿತ ನಿರ್ಲಕ್ಷ್ಯ ವಿರುದ್ಧ ರೈತರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬರಿದಾಗುತ್ತಿದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಹಿಡಕಲ್ ಜಲಾಶಯ
ಮೇವು ಇಲ್ಲದೇ ಸಾಕಿದ ಜಾನುವಾರುಗಳ ಸ್ಥಿತಿ ಕಂಡು ಮಾರಾಟಕ್ಕೆ ಗದಗ ಎಪಿಎಂಸಿ ಆವರಣದ ಜಾನುವಾರಗಳ ಸಂತೆಗೆ ತಂದರೆ, ಬಾಯಿಗೆ ಬಂದ ಬೆಲೆ ಕೇಳುತ್ತಿದ್ದಾರೆ ಅಂತ ರೈತರು ಗೋಳಾಡುತ್ತಿದ್ದಾರೆ. 1 ಲಕ್ಷ 1.50 ಲಕ್ಷ ಕೊಟ್ಟು ಖರೀದಿ ಮಾಡಿದ ರಾಸುಗಳು ಈಗ 50-60 ಸಾವಿರಕ್ಕೆ ಮಾರಾಟ ಆಗುತ್ತಿವೆ. ಇದು ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ.
ಗೋಶಾಲೆ, ಮೇವಿನ ವ್ಯವಸ್ಥೆ ಮಾಡಿ ನಾವು ಬದುಕುತ್ತಿದ್ದೇವೆ. ಇಲ್ಲಾಂದರೆ ಪರಿಸ್ಥಿತಿ ಕೆಟ್ಟದಾಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ. ಜಾನುವಾರಗಳ ಮೂಕ ರೋಧನೆಗೆ ಅನ್ನದಾತರು ಮರಗುತ್ತಿದ್ದಾರೆ. ಗದಗ, ಬಾಗಲಕೋಟೆ, ಹಾವೇರಿ ಸೇರಿ ವಿವಿಧ ಜಿಲ್ಲೆಗಳ ನೂರಾರು ರೈತರು ಸಂತೆಗೆ ಆಗಮಿಸಿ ಜಾನುವಾರಗಳ ಮಾರಾಟಕ್ಕೆ ಮುಂದಾದರು.
ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ರೈತರು, ಜಾನುವಾರಗಳ ನೆರವಿಗೆ ಧಾವಿಸಬೇಕಿದೆ. ದೇವರು ವರಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೆ ಸರ್ಕಾರ ಕೋಟಿ ಕೋಟಿ ಹಣ ನೀಡಿದರೂ ಗದಗ ಜಿಲ್ಲೆಯಲ್ಲಿ ಬರಗಾಲ ಕಾಮಗಾರಿ, ಗೋಶಾಲೆ, ಮೇವಿನ ವ್ಯವಸ್ಥೆಯಾಗದಿರುವುದು ವಿಪರ್ಯಾಸವೇ ಸರಿ. ಸರ್ಕಾರ ನಿರ್ಲಕ್ಷ್ಯ ತೋರಿದ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸುವ ಮೂಲಕ ಸಂಕಷ್ಟದಲ್ಲಿರೋ ಅನ್ನದಾತರು ಹಾಗೂ ಜಾನುವಾರಗಳ ನೆರವಿಗೆ ಧಾವಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ