ಅವರೆಲ್ಲರೂ ರೈತರು, ಅನ್ಯಾಯವಾದಾಗ ಧ್ವನಿ ಎತ್ತುಲು ಒಂದು ರೈತ ಸಂಘದ ಸದಸ್ಯತ್ವ ಪಡೆದಿದ್ರು. ಆದ್ರೆ ಆ ಸಂಘದ ರಾಜ್ಯಾಧ್ಯಕ್ಷರಿಂದ ಮೋಸಕ್ಕೆ ಒಳಗಾಗಿದ್ದಾರೆ. ಅನ್ನದಾತರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೌದು ರಾಷ್ಟ್ರೀಯ ರೈತ ಸಂಘದ ಹೆಸರಿನಲ್ಲಿ ನಕಲಿ ರಾಜ್ಯಾಧ್ಯಕ್ಷ ಮೋಸ ಮಾಡಿದ್ದಾನೆ ಅಂತ ಅನ್ನದಾತರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲಾ ಗದಗ ಎಸ್ಪಿ ಅವರಿಗೆ ದೂರು ನೀಡಿ ಸೂಕ್ತವಾದ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಎಸ್.. ರೈತರಿಗೆ ಅನ್ಯಾಯವಾದಾಗ ಅದರ ವಿರುದ್ಧ ಹೋರಾಟ ಮಾಡಲು ಒಂದು ವೇದಿಕೆ ಬೇಕಾಗಿತ್ತು. ಹೀಗಾಗಿ ಗದಗ ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮ ಸೇರಿದಂತೆ ಜಿಲ್ಲೆಯ ಅನೇಕ ರೈತರು ರೈತ ಸಂಘಕ್ಕೆ (Bharat Krishak Samaj, New Delhi) ಸೇರ್ಪಡೆಯಾಗಿದ್ರು. ಈವಾಗ ಆ ಸಂಘದ ರಾಜ್ಯಾಧ್ಯಕ್ಷರೆ ಅವರಿಗೆ ಮೋಸ ಮಾಡಿದ್ದಾರಂತೆ..
ಹೌದು ಭಾರತೀಯ ಕೃಷಿಕ ಸಮಾಜ ನವದೆಹಲಿ, ರಾಷ್ಟ್ರೀಯ ರೈತ ಸಂಘಟನೆ ಅದು.. ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ಕೃಷನ್‌ಬಿರ್ ಚೌಧರಿ ಇದ್ದಾರೆ. ಬೆಂಗಳೂರು ಮೂಲದ ರಾಘುರಾಮರೆಡ್ಡಿ ಅವ್ರಿಗೆ ರಾಜ್ಯದಲ್ಲಿ ಸಂಘಟನೆಯ ಜವಾಬ್ದಾರಿ ನೀಡಿದ್ದಾರಂತೆ. ರಾಜ್ಯಾದ್ಯಂತ ನಾನಾ ಭಾಗಗಳಲ್ಲಿ ಸಂಘಟನೆ ಮಾಡಿದ್ದಾರೆ. ಪ್ರತಿಯೊಬ್ಬ ರೈತನಿಂದ ಗುರುತಿನ ಚೀಟಿ ಹಾಗೂ ಸದಸ್ಯತ್ವ ಫೀ ಅಂತ 1,100 ರೂಪಾಯಿ ವಸೂಲಿ ಮಾಡಿದ್ದಾರೆ.
ಜೊತೆಗೆ ಈ ವರ್ಷವೂ ಅಷ್ಟೇ ಹಣವನ್ನು ನೀಡಬೇಕು, ನಿಮಗೆ ಮತ್ತೊಮ್ಮೆ ಗುರುತಿನ ಚೀಟಿ ಬರುತ್ತದೆ ಎಂದು ಹೇಳಿದಾಗ, ರೈತರಿಗೆ ಅನುಮಾನ ಬಂದಿದೆ. ನೇರವಾಗಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇತರೆ ರಾಷ್ಟ್ರೀಯ ಸಂಘದ ಸದಸ್ಯರಿಗೆ ಕಾಲ್ ಮಾಡಿ ವಿಚಾರಣೆ ಮಾಡಿದ್ದಾರೆ.
ಆಗ ಇಲ್ಲಿನ ರೈತರಿಂದ ದೆಹಲಿಗೆ ಯಾವುದೇ ಹಣ ಬಂದಿಲ್ಲಾ. ನಮ್ಮ ಸಂಘದ ಸದಸ್ಯತ್ವ ಪಡೆಯಲು ಕೇವಲ 250 ರೂಪಾಯಿ ಮಾತ್ರ ಅಂತಾ ಹೇಳಿದ್ದಾರೆ. ನಾವು ಕರ್ನಾಟಕ ರಾಜ್ಯಕ್ಕೆ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ, ರಘುರಾಮರೆಡ್ಡಿ ಅವರನ್ನು ಯೂತ್ ಕಮಿಟಿ ಜೋಡಣೆ ಮಾಡಲು ಬಿಡಲಾಗಿದೆ. ಅವರು ರಾಜ್ಯಾಧ್ಯಕ್ಷರು ಅಲ್ಲ ಎಂದು ಹೇಳಿದ್ದಾರಂತೆ. ಆಗ ರೈತರಿಗೆ ಮೋಸ ಆಗಿರೋದು ಗೊತ್ತಾಗಿ ಗದಗ ಎಸ್ಪಿ ಅವರಿಗೆ ಮೋಸದ ಕುರಿತು ದೂರು ನೀಡಿದ್ದಾರೆ.
ಇನ್ನು ಗದಗ ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮದ ಹಲವು ರೈತರು, ನಕಲಿ ರಾಜ್ಯಾಧ್ಯಕ್ಷ ರಾಘುರಾಮರಡ್ಡಿ ಅವರಿಗೆ ಪೋನ್ ಪೇ ಮೂಲಕ 76,900 ರೂಪಾಯಿ ಹಾಕಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಗೆ ಬಂದಾಗ 63,900 ನಗದು ರೂಪದಲ್ಲಿ ಹಣವನ್ನು ನೀಡಿದ್ದಾರೆ.
ಇದಾದ ಮೇಲೆ ಒಂದು ವರ್ಷ ಕಳೆದ ಮೇಲೆ ಪುನಃ 1,100 ರೂಪಾಯಿ ಸಂದಾಯ ಮಾಡಿ, ಗುರುತಿನ ಚೀಟಿ ನವೀಕರಣ ಮಾಡ್ಬೇಕು ಅಂತಾ ರೈತರಿಗೆ ಹೇಳಿದ್ದಾರೆ. ಆಗ ವಿಚಾರಣೆ ಮಾಡಿದ ಸತ್ಯ ಬಹಿರಂಗವಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಾಗ ನೀವು ಕಾನೂನು ಕ್ರಮಕ್ಕೆ ಮುಂದಾಗಿ ಅಂತಾ ಹೇಳಿದ್ದಾರಂತೆ. ಹೀಗಾಗಿ ರೈತರು ಗದಗ ಎಸ್ಪಿ ದೂರು ನೀಡಿದ್ದಾರೆ. ನಾವು ಮೋಸ ಹೋಗಿದ್ದೇವೆ. ಅಷ್ಟೇ ಅಲ್ಲ ಅಕ್ಕಪಕ್ಕ ಜಿಲ್ಲೆಯ ಸಾವಿರಾರು ರೈತರು ಕೂಡಾ ಮೋಸಕ್ಕೆ ಒಳಗಾಗಿದ್ದಾರಂತೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.