ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ: ಹಿಂಗಾರು, ಮುಂಗಾರು ಬೆಳೆಯೂ ಇಲ್ಲದೇ ಕಂಗಾಲು

| Updated By: Ganapathi Sharma

Updated on: Oct 27, 2023 | 7:45 PM

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಈರುಳ್ಳಿ ಸೇರಿ 66 ಸಾವಿರ ಹೇಕ್ಟರ್ ನಲ್ಲಿ ಹಾನಿಯಾಗಿದ್ದು, ಒಟ್ಟು ಮೊತ್ತ 61ಕೋಟಿ ರೂ. ಒಟ್ಟಾರೆ ಗದಗ ಜಿಲ್ಲೆಯಲ್ಲಿ 258.59 ಕೋಟಿ ರೂ. ಹಾನಿಯಾಗಿದೆ. ಹಾನಿಯ ಸಮಗ್ರ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಅಂತ ಕೃಷಿ ಇಲಾಖೆ ಜಂಟಿ ನಿರ್ದಶಕಿ ತಾರಾಮಣಿ ತಿಳಿಸಿದ್ದಾರೆ.

ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ: ಹಿಂಗಾರು, ಮುಂಗಾರು ಬೆಳೆಯೂ ಇಲ್ಲದೇ ಕಂಗಾಲು
ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ
Follow us on

ಗದಗ, ಅಕ್ಟೋಬರ್ 27: ಭೀಕರ ಬರಗಾಲದ ಹೊಡೆತಕ್ಕೆ ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅದ್ರಲ್ಲೂ ಭೀಕರ ಬರ (Drought) ಗದಗ (Gadag) ಜಿಲ್ಲೆಯ ರೈತರ ಜೀವ ಹಿಂಡುತ್ತಿದೆ. ಬಿತ್ತಿದ ಬೆಳೆಗಳೆಲ್ಲವೂ ಬಿಸಿಲಿಗೆ ಸುಟ್ಟು ಹೋಗಿವೆ. ಬಿತ್ತನೆ ಮಾಡಿದ 2.03 ಲಕ್ಷ ಹೇಕ್ಟರ್​​ನಲ್ಲಿ 1.88 ಹೆಕ್ಟರ್ ಬೆಳೆ ಸಂಪೂರ್ಣ ಹಾನಿಯಾಗಿದೆ. ಹೀಗಾಗಿ ಭೀಕರ ಬರ ನೇಗಿಲಯೋಗಿಯ ಅನ್ನವನ್ನೆ ಕಸಿಕೊಂಡಿದ್ದು, ಅನ್ನದಾತರು ವಿಲವಿಲ ಅಂತಿದ್ದಾರೆ. ಒಣ ಬೆಸಾಯಿ ಹಾಗೂ ತೋಟಗಾರಿಕೆ ಬೆಳೆ ಸೇರಿ ಒಟ್ಟು ಗದಗ ಜಿಲ್ಲೆಯಲ್ಲಿ 258 ಕೋಟಿ ಹಾನಿಯಾಗಿದ್ದು, ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅನ್ನದಾತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ಆರಂಭದಲ್ಲಿ ಮುಂಗಾರು ಮಳೆ ಅಲ್ಪಸ್ವಲ್ಪ ಚೆನ್ನಾಗಿಯೇ ಆಗಿತ್ತು. ಹೀಗಾಗಿ ಖುಷಿ ಪಟ್ಟ ಅನ್ನದಾತರು ಮುಂಗಾರು ಬೆಳೆಗಳಾದ ಹೆಸರು, ಶೇಂಗಾ, ಗೋವಿನ ಜೋಳ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳು ಬಿತ್ತನೆ ಮಾಡಿದ್ರು. ಆದ್ರೆ, ವರುಣದೇವ ನೇಗಿಲಯೋಗಿ ಬದುಕಿಗೆ ಕೊಳ್ಳಿ ಇಟ್ಟುಬಿಟ್ಟಿದ್ದಾನೆ. ಹನಿ ಮಳೆಯೂ ಆಗದೇ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಭೂಮಿಯಲ್ಲೇ ಸುಟ್ಟು ಹೋಗಿವೆ. ನೆಲಬಿಟ್ಟು ನಾಟಿಯಾಗಿಲ್ಲ. ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2.03 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದ್ರೆ, 1.88 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ನಾಟಿಯೂ ಆಗದೇ ಎಲ್ಲ ಬೆಳೆಯೂ ಹಾನಿಯಾಗಿದೆ ಅಂತ ಕೃಷಿ ಇಲಾಖೆ ವರದಿಯಲ್ಲಿ ಬಹಿರಂಗವಾಗಿದೆ. ಒಣ ಬೇಸಾಯ ಬೆಳೆಗಳಾದ ಹೆಸರು, ಶೇಂಗಾ, ಗೋವಿನ ಜೋಳ ಸೇರಿ ಒಟ್ಟು 1.88 ಲಕ್ಷ ಹೇಕ್ಟರ್ ಹಾನಿಯಾಗಿದ್ದು, ಒಟ್ಟು ಮೊತ್ತ 1.97.45 ಕೋಟಿ ಹಾನಿ ಅಂದಾಜು ಮಾಡಲಾಗಿದೆ.

ಇನ್ನೂ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಈರುಳ್ಳಿ ಸೇರಿ 66 ಸಾವಿರ ಹೇಕ್ಟರ್ ನಲ್ಲಿ ಹಾನಿಯಾಗಿದ್ದು, ಒಟ್ಟು ಮೊತ್ತ 61ಕೋಟಿ ರೂ. ಒಟ್ಟಾರೆ ಗದಗ ಜಿಲ್ಲೆಯಲ್ಲಿ 258.59 ಕೋಟಿ ರೂ. ಹಾನಿಯಾಗಿದೆ. ಹಾನಿಯ ಸಮಗ್ರ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಅಂತ ಕೃಷಿ ಇಲಾಖೆ ಜಂಟಿ ನಿರ್ದಶಕಿ ತಾರಾಮಣಿ ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಒಟ್ಟು 258.59 ಕೋಟಿ ರೂ. ಮೌಲ್ಯದ ವಿವಿಧ ಬೆಳೆಗಳು ಹಾನಿಯಾಗಿದ್ದು, ಒಟ್ಟು 1 ಲಕ್ಷ 69 ಸಾವಿರ ರೈತರಿಗೆ ಪರಿಹಾರಕ್ಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಈ ವರ್ಷ ಎಂದೂ ಕಂಡಿರಿಯದ ಬರಗಾಲ ಎದುರಾಗಿದ್ದು, ಅನ್ನದಾತರಿಗೆ ಬರಸಿಡಿಲು ಬಡಿದಂತಾಗಿದೆ. ಹಿಂಗಾರು, ಮಂಗಾರು ಎರಡು ಬೆಳೆಗಳು ಈ ವರ್ಷ ಜಿಲ್ಲೆಯಲ್ಲಿ ಶೇಕಡಾ 90ರಷ್ಟು ಹಾನಿಯಾಗಿದೆ. ಹೀಗಾಗಿ ಅನ್ನದಾತರು ನಮ್ಮ ಮುಂದಿನ ಬದುಕು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಕೃಷಿ ಮಾಡಿಯೇ ಬದುಕು ಸಾಗಿಸುವ ರೈತರ ಕುಟುಂಬಗಳ ಗೋಳು ದೇವರಿಗೆ ಪ್ರೀತಿ ಎಂಬಂತಾಗಿದೆ. ಸರ್ಕಾರ ಬರಗಾಲ ಅಂತ ಘೋಷಣೆ ಮಾಡಿದೆ. ಆದ್ರೆ, ಇನ್ನೂ ರೈತರಿಗೆ ಯಾವುದೇ ರೀತಿಯ ಸಹಾಯಕ್ಕೆ ಮುಂದೆ ಬಂದಿಲ್ಲ. ಈ ನಡುವೆ ನಾವೂ ಹೇಗಾದ್ರೂ ಬದುಕ್ತೀವಿ. ಆದ್ರೆ, ದನ, ಕರುಗಳ ಚಿಂತಿ ರೈತರನ್ನು ಕಾಡುತ್ತಿದೆ. ಮೇವು ಇಲ್ಲದೇ ಜಾನುವಾರಗಳು ದಿನಗಳು ಕಳೆದಂತೆ ಸೊರಗುತ್ತಿವೆ. ಅನ್ನದಾತರು ಸಾಕಿಬೆಳೆಸಿದ ಜಾನುವಾರಗಳ ಗೋಳಾಟ ನೋಡೋಕೆ ಆಗ್ಥಾಯಿಲ್ಲ ಅಂತ ಗೋಳು ತೋಡಿಕೊಂಡಿದ್ದಾರೆ. ಸರ್ಕಾರ ಕನಿಷ್ಠ ಬರಗಾಲ ಕಾಮಗಾರಿ ಆರಂಭ ಮಾಡೋದು ಇರಲಿ. ದನ, ಕರುಗಳಿಗೆ ಕನಿಷ್ಠ ಮೇವಿನ ವ್ಯವಸ್ಥೆಯೂ ಮಾಡಿಲ್ಲ ಅಂತ ರೈತರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಕ್ಕಿ ಕಳ್ಳರ ವಿರುದ್ಧ ಸಮರ ಸಾರಿದ ಆಹಾರ ಇಲಾಖೆ, ಅಕ್ರಮ ಅಕ್ಕಿ ಸಾಗಾಟಗಾರರ ಗಡಿಪಾರಿಗೆ ಪ್ಲ್ಯಾನ್​​

ಅನ್ನದಾತರ ಬದುಕು ಮಳೆ ಬಂದ್ರೂ ಕಷ್ಟ, ಮಳೆ ಬರದಿದ್ರೂ ಕಷ್ಟ ಎಂಬಂತಾಗಿದೆ. ಕಳೆದ ಎರಡ್ಮೂರು ವರ್ಷ ಅತಿಯಾದ ಮಳೆಗೆ ರೈತರ ಬೆಳೆಗಳು ಮುಳುಗಿದ್ರೆ. ಈ ಬಾರಿ ಭೀಕರ ಬರಕ್ಕೆ ಸುಟ್ಟು ಹೋಗಿವೆ. ಸರ್ಕಾರ, ಜನಪ್ರತಿನಿಧಿಗಳೂ ರೈತರ ಬಗ್ಗೆ ಮಾತಾಡ್ತಾರೆ. ರೈತರ ದೇಶದ ಬೆನ್ನುಲುಬು ಅಂತಾರೆ. ಆದ್ರೆ, ನಮ್ಮ ಮೇಲೆ ನಿಜವಾದ ಕಾಳಜಿ ಯಾರೂ ತೋರುತ್ತಿಲ್ಲ ಅಂತ ಅನ್ನದಾತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಸಂಕಷ್ಟದಲ್ಲಿರೋ ರೈತರು ಹಾಗೂ ಜಾನುವಾರಗಳ ರಕ್ಷಣೆ ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ