AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯವೂ ಉಸಿರುಗಟ್ಟುವ ವಾತಾವರಣದಲ್ಲಿ ಪಾಠ ಕಲಿಯುತ್ತಿದ್ದಾರೆ ಮುಳಗುಂದ ಸರ್ಕಾರಿ ಪ್ರೌಢಶಾಲೆಯ ಬಡ ಮಕ್ಕಳು! ಇಲ್ಲಿದೆ ಅಪರೂಪದ ಸಮಸ್ಯೆ!  

ಮಕ್ಕಳು ಕ್ಷಣಕ್ಷಣವೂ ಡಾಂಬರ್ ಘಟಕ ಹೊರಸೂಸುವ ಧೂಳಿನಿಂದ ನರಕಯಾತನೆ ಪಡುತ್ತಿದ್ದಾರೆ. ಪ್ರಭಾವಿಗಳ ಬೆಂಬಲ ಇರೋದ್ರಿಂದ ಅಬ್ಬಿಗೇರಿ ಅನ್ನೋ ವ್ಯಕ್ತಿ ಘಟಕ ಸ್ಥಾಪನೆ ಮಾಡಿದ್ದಾನಂತೆ. ಹೀಗಾಗಿ ಶಿಕ್ಷಕರು ಕೂಡ ಘಟಕದ ಬಗ್ಗೆ ಬಾಯಿಬಿಡುತ್ತಿಲ್ಲ. ಆದರೆ ಮಕ್ಕಳು ಈ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ.

ನಿತ್ಯವೂ ಉಸಿರುಗಟ್ಟುವ ವಾತಾವರಣದಲ್ಲಿ ಪಾಠ ಕಲಿಯುತ್ತಿದ್ದಾರೆ ಮುಳಗುಂದ ಸರ್ಕಾರಿ ಪ್ರೌಢಶಾಲೆಯ ಬಡ ಮಕ್ಕಳು! ಇಲ್ಲಿದೆ ಅಪರೂಪದ ಸಮಸ್ಯೆ!  
ನಿತ್ಯವೂ ಉಸಿರುಗಟ್ಟುವ ವಾತಾವರಣದಲ್ಲಿ ಪಾಠ ಕಲಿಯುತ್ತಿದ್ದಾರೆ ಮುಳಗುಂದ ಸರ್ಕಾರಿ ಪ್ರೌಢಶಾಲೆಯ ಬಡ ಮಕ್ಕಳು!
TV9 Web
| Updated By: ಸಾಧು ಶ್ರೀನಾಥ್​|

Updated on: Jan 18, 2023 | 2:23 PM

Share

ಅದು ಸರ್ಕಾರಿ ಪ್ರೌಢ ಶಾಲೆ (High School students). ಈ ಶಾಲೆಯಲ್ಲಿ ಮಕ್ಕಳಿಗೆ ನೆಮ್ಮದಿಯಿಂದ ಪಾಠ ಕಲಿಯುವ ಭಾಗ್ಯ ಇಲ್ಲವಾದಂತಾಗಿದೆ. ನಿತ್ಯವೂ ಉಸಿರುಗಟ್ಟಿ ಹಿಡಿದು ಮಕ್ಕಳು ಪಾಠ ಕಲಿಯುವ ದುಃಸ್ಥಿತಿ ನಿರ್ಮಾಣವಾಗಿದೆ. ಡಾಂಬರ್ ಪ್ಲಾಂಟ್ ನಿಂದ ಬರುವ ವಾಸನೆ ಮಕ್ಕಳ ಉಸಿರಾಟಕ್ಕೆ ತೊಂದರೆ ಮಾಡ್ತಾಯಿದೆ. ಪ್ರಭಾವಿ ವ್ಯಕ್ತಿಗಳ ಡಾಂಬರ್ ಪ್ಲಾಂಟ್ ಮಕ್ಕಳ ಜೀವ ಹಿಂಡುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಮಾರಕವಾಗಿದೆ. ಜೀವಕ್ಕೂ ಅಪಾಯವಾಗಿದೆ. ತಕ್ಷಣ ಡಾಂಬರ್ ಪ್ಲಾಂಟ್ (damber Asphalt production unit) ಇಲ್ಲಿಂದ ಎತ್ತಂಗಡಿ ಮಾಡಿ ನಮ್ಮ ಜೀವ ಉಳಿಸಿ ಅಂತ ಮಕ್ಕಳು ಬೇಡಿಕೊಳ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಒಳ್ಳೆಯ ವಾತಾವರಣ, ಪರಿಸರ ಬೇಕು. ಆದ್ರೆ, ಇಲ್ಲೊಂದು ಸರ್ಕಾರಿ ಶಾಲೆ ಮಕ್ಕಳು ಉಸಿರುಗಟ್ಟುವ ಕಲುಷಿತ ಪರಿಸರದಲ್ಲಿ ಬಡ ಮಕ್ಕಳು ಪಾಠ ಕಲಿಯುವಂತಾಗಿದೆ. ಪರಿಸರ ಮಾಲಿನ್ಯ ಇಲಾಖೆ (environment pollution) ಅಧಿಕಾರಿಗಳ ಗಮನಕ್ಕೆ ತಂದ್ರೂ ಡೋಂಟ್ ಕೇರ್. ಶಿಕ್ಷಣ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಕ್ಕಳ ಆಕ್ರೋಶ.

ಈ ಎಲ್ಲ ದೃಶ್ಯಗಳು ಕಂಡಿರುವುದು ಗದಗ ತಾಲೂಕಿನ ಮುಳಗುಂದ (Mulgund) ಪಟ್ಟಣದಲ್ಲಿ. ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ನಿತ್ಯವೂ ಉಸಿರಗಟ್ಟುವ ಪರಿಸರದಲ್ಲಿ ಪಾಠ ಕಲಿಯುವಂತಾಗಿದೆ. ಅಷ್ಟಕ್ಕೂ ಮಕ್ಕಳ ಉಸಿರುಗಟ್ಟುವ ಪರಿಸರಕ್ಕೆ ಕಾರಣ ಅಂದ್ರೆ, ಈ ಡಾಂಬರ್ ಪ್ಲಾಂಟ್. ಹುಬ್ಬಳ್ಳಿ ಮೂಲದ ಮುತ್ತು ಅಬ್ಬಿಗೇರಿ ಅನ್ನೋ ವ್ಯಕ್ತಿ ಈ ಶಾಲೆಯ ಪಕ್ಕದಲ್ಲೇ ಅಂದ್ರೆ 200 ಮೀಟರ್ ವ್ಯಾಪ್ತಿಯಲ್ಲಿ ಡಾಂಬರ್ ಘಟಕ ಸ್ಥಾಪನೆ ಮಾಡಿದ್ದಾರೆ.

ಡಾಂಬರ್ ಮಿಕ್ಸಿಂಗ್ ಮಾಡುವಾಗ ಬರುವ ವಾಸನೆ ಮಕ್ಕಳು ಸರಾಗವಾಗಿ ಉಸಿರಾಟ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಮಕ್ಕಳು ಕೊಠಡಿಯಲ್ಲಿ ಮೂಗು ಮುಚ್ಚಿಕೊಂಡೇ ಪಾಠ ಕಲಿಯುವಂತ ದುಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲ ಡಾಂಬರ್ ಪ್ಲಾಂಟ್ ನಿಂದ ಹೊರಸೂಸುವ ಹೊಗೆ ಕೂಡ ಶಾಲೆಯತ್ತಲೇ ತೂರುತ್ತೆ.

ಹೀಗಾಗಿ ಮಕ್ಕಳು ಕ್ಷಣಕ್ಷಣಕ್ಕೂ ವಾಸನೆ, ಹೊರ ಸೂಸುವ ಧೂಳಿನಿಂದ ನರಕಯಾತನೆ ಅನುಭವಿಸುವಂತಾಗಿದೆ. ಪ್ರಭಾವಿಗಳ ಬೆಂಬಲ ಇರೋದ್ರಿಂದ ಅಬ್ಬಿಗೇರಿ ಅನ್ನೋ ವ್ಯಕ್ತಿ ಘಟಕ ಸ್ಥಾಪನೆ ಮಾಡಿದ್ದಾನಂತೆ. ಹೀಗಾಗಿ ಶಿಕ್ಷಕರು ಕೂಡ ಘಟಕದ ಬಗ್ಗೆ ಬಾಯಿಬಿಡುತ್ತಿಲ್ಲ. ಆದರೆ ಶಾಲಾ ಮಕ್ಕಳು ಈ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ. ನಮಗೆ ಆರೋಗ್ಯ ಹದಗೆಡುತ್ತಿದೆ. ಉಸಿರಾಟ ತೊಂದರೆಯಿಂದ ಬಳಲುವಂತಾಗಿದೆ ತಕ್ಷಣ ಇದ್ರಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.

ಮುಳಗುಂದ ಪಟ್ಟಣ ಪಂಚಾಯತ್ ಕೂಡ ಅನುಮತಿ ನೀಡಿಲ್ಲವಂತೆ. ಅನುಮತಿ ಪಡೆಯದೇ ಡಾಂಬರ್ ಘಟಕ ಸ್ಥಾಪನೆ ಮಾಡಿದ್ರೂ ಕೂಡ ಯಾರೂ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ. ಪಟ್ಟಣದ ಸುತ್ತಮುತ್ತ ನಡೆಯುತ್ತಿರೋ ರಸ್ತೆ ಕಾಮಗಾರಿಗೆ ಇಲ್ಲಿಂದಲೇ ಡಾಂಬರ್ ಮಿಕ್ಸಿಂಗ್ ಆಗಿ ಹೋಗುತ್ತೆ. ಇದಕ್ಕೆ ಪಟ್ಟಣದ ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇದೆ ಅನ್ನೋ ಆರೋಪವಿದೆ. ಹೀಗಾಗಿ ಶಾಲೆಯ ಆಡಳಿತ ಮಂಡಳಿಯೂ ಧ್ವನಿ ಎತ್ತದಂತಹ ಸ್ಥಿತಿ ನಿರ್ಮಾಣವಾಗಿದೆ.

ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಮಕ್ಕಳಿಗೆ ಆಗುತ್ತಿರೋ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತ ಕಿಡಿಕಾರಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ಈ ವಿಷಯ ಬಂದಂತಿಲ್ಲ. ಈ ಬಗ್ಗೆ ಗದಗ ಡಿಡಿಪಿಐ ಬಸವಲಿಂಗಪ್ಪ ಅವ್ರನ್ನು ಕೇಳಿದ್ರೆ, ಈಗ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಡಾಂಬರ್ ಘಟಕ ಬಂದ್ ಮಾಡಿಸುತ್ತೇವೆ ಅಂತ ಹೇಳಿದ್ದಾರೆ.

ಒಳ್ಳೆಯ ಪರಿಸರದಲ್ಲಿ ಪಾಠ ಕಲಿಯಬೇಕಾದ ಮಕ್ಕಳು ಕಲುಷಿತ ವಾತಾವರಣದಲ್ಲಿ ಶಿಕ್ಷಣ ಕಲಿಯುವ ದುಃಸ್ಥಿತಿ ಬಂದಿದೆ. ಬಡ ಮಕ್ಕಳ ಗೋಳಾಟ ಕೇಳೋರಿಲ್ಲದಂತಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಮಕ್ಕಳ ಶಿಕ್ಷಣ, ಆರೋಗ್ಯದ ಮೇಲಾಗುತ್ತಿರೋ ದುಷ್ಪರಿಣಾಮಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ತಕ್ಷಣ ಡಾಂಬರ್ ಘಟಕದ ಎತ್ತಂಗಡಿ ಮಾಡಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ