ಖರೀದಿ ಕೇಂದ್ರವಿದ್ದರೂ ವ್ಯಾಪಾರವಿಲ್ಲ: ಸರ್ಕಾರದ ವಿರುದ್ಧ ಸಿಡಿದೆದ್ದ ಮೆಕ್ಕೆಜೋಳ ರೈತರು

ಗದಗ ಜಿಲ್ಲೆಯ ಮೆಕ್ಕೆಜೋಳ ಬೆಳೆದ ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘೋಷಿತ ಖರೀದಿ ಕೇಂದ್ರಗಳು ಕೇವಲ ಕಾಗದದಲ್ಲಿ ಉಳಿದಿದ್ದು, ವಾಸ್ತವದಲ್ಲಿ ಮೆಕ್ಕೆಜೋಳ ಖರೀದಿ ನಡೆಯುತ್ತಿಲ್ಲ. ಬೆಂಬಲ ಬೆಲೆ ಇಲ್ಲದೆ ರೈತರು ಕ್ವಿಂಟಾಲ್‌ಗೆ ನೂರಾರು ರೂ. ನಷ್ಟ ಅನುಭವಿಸುತ್ತಿದ್ದು, ಪರಿಸ್ಥಿತಿ ಸುಧಾರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಖರೀದಿ ಕೇಂದ್ರವಿದ್ದರೂ ವ್ಯಾಪಾರವಿಲ್ಲ: ಸರ್ಕಾರದ ವಿರುದ್ಧ ಸಿಡಿದೆದ್ದ ಮೆಕ್ಕೆಜೋಳ ರೈತರು
ಖರೀದಿ ಕೇಂದ್ರವಿದ್ದರೂ ಮಾರಾಟವಾಗದೆ ಹಾಗೆ ಉಳಿದ ಬೆಳೆ

Updated on: Jan 02, 2026 | 10:27 AM

ಗದಗ, ಜನವರಿ 02: ಗದಗ (Gadag) ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು ಮತ್ತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟದ ಬಳಿಕ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದ್ದರೂ, ವಾಸ್ತವದಲ್ಲಿ ಖರೀದಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಖರೀದಿ ಕೇಂದ್ರ ಆರಂಭವಾಗಿದೆ ಎನ್ನುವ ಮಾತು ಕೇವಲ ಕಾಗದದಲ್ಲೇ ಉಳಿದಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆಯೇ?

ಲಕ್ಷ್ಮೇಶ್ವರ ಹಾಗೂ ಮುಳಗುಂದ ಪ್ರದೇಶಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಕೆಲವೇ ಕೆಲವು ರೈತರ ಹೆಸರು ಮಾತ್ರ ನೋಂದಣಿಯಾಗಿದ್ದು, ಬೆಂಬಲ ಬೆಲೆಯಲ್ಲಿ ಒಂದೇ ಒಂದು ಕ್ವಿಂಟಾಲ್ ಮೆಕ್ಕೆಜೋಳವೂ ಖರೀದಿಯಾಗಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾವಿರಾರು ರೂ. ನಷ್ಟ ಅನುಭವಿಸುತ್ತಿರುವ ರೈತರು

ಜಿಲ್ಲೆಯಲ್ಲಿ ಸುಮಾರು 1.44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಹೆಕ್ಟೇರ್‌ಗೆ ಸರಾಸರಿ 30 ರಿಂದ 40 ಕ್ವಿಂಟಲ್ ಇಳುವರಿ ಬಂದಿದೆ. ಒಟ್ಟು 45 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಉತ್ಪಾದನೆಯಾಗಿದ್ದರೂ, ಕೇವಲ 2 ಸಾವಿರದಷ್ಟು ರೈತರ ಹೆಸರು ಮಾತ್ರ ಖರೀದಿ ಕೇಂದ್ರದಲ್ಲಿ ನೋಂದಣಿಯಾಗಿದೆ. ಬಹುತೇಕ ರೈತರು ನೋಂದಣಿಯಿಂದ ಹೊರಗುಳಿದಿದ್ದಾರೆ.

ಇದೀಗ ಮಾರುಕಟ್ಟೆಯಲ್ಲಿ ರೈತರು ಕ್ವಿಂಟಲ್‌ಗೆ 1500 ರಿಂದ 1700 ರೂಪಾಯಿಗೆ ಮೆಕ್ಕೆಜೋಳ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರತಿ ಕ್ವಿಂಟಲ್‌ಗೆ 500 ರಿಂದ 700 ರೂಪಾಯಿ ನಷ್ಟವಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.