AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದ ಮುಸ್ಲಿಂ ಕುಟುಂಬವೊಂದರಿಂದ ಲಕ್ಷ್ಮೀ ದೇವಿಯ ಆರಾಧನೆ; 3 ತಲೆಮಾರುಗಳಿಂದ ದೀಪಾವಳಿಗೆ ವಿಶೇಷ ಪೂಜೆ

ಧರ್ಮದ ಗಡಿ ಮೀರಿದ ಭಾವೈಕ್ಯತೆಗೆ ಗದಗ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಮಾದರಿಯಾಗಿದೆ. ರೋಣ ತಾಲೂಕಿನ ಜಕ್ಕಲಿ ಗ್ರಾಮದ ಕುತ್ಬುದ್ದೀನ್ ಗಡಾದ ಕುಟುಂಬ ಕಳೆದ 35 ವರ್ಷಗಳಿಂದ ದೀಪಾವಳಿಯಂದು ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುತ್ತಿದೆ. ಮೂರು ತಲೆಮಾರುಗಳಿಂದ ಮುಂದುವರಿದಿರುವ ಈ ಅಪರೂಪದ ಸಂಪ್ರದಾಯ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಪ್ರೀತಿ, ನಂಬಿಕೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತಿರುವ ಕುಟುಂಬದ ವಿಶೇಷ ಆಚರಣೆಯ ಸಂಪೂರ್ಣ ವರದಿ ಇಲ್ಲಿದೆ.

ಗದಗದ ಮುಸ್ಲಿಂ ಕುಟುಂಬವೊಂದರಿಂದ ಲಕ್ಷ್ಮೀ ದೇವಿಯ ಆರಾಧನೆ; 3 ತಲೆಮಾರುಗಳಿಂದ ದೀಪಾವಳಿಗೆ ವಿಶೇಷ ಪೂಜೆ
ಕುತ್ಬುದ್ದೀನ್ ಕುಟುಂಬ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Nov 10, 2026 | 12:18 PM

Share

ಮುಖ್ಯಾಂಶಗಳು

  • ಗದಗದ ಮುಸ್ಲಿಂ ಕುಟುಂಬದಿಂದ 35 ವರ್ಷಗಳಿಂದ ದೀಪಾವಳಿಗೆ ಲಕ್ಷ್ಮೀ ಪೂಜೆ.
  • ಮೂರು ತಲೆಮಾರುಗಳಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಪ್ರದಾಯ ಮುಂದುವರಿಕೆ.
  • ಉರುಸ್, ಮೊಹರಂ ಆಚರಣೆಗಳಿಗೂ ಹಿಂದೂ ಬಾಂಧವರನ್ನು ಪ್ರೀತಿಯಿಂದ ಆಹ್ವಾನಿಸುವ ಕುಟುಂಬ.

ಗದಗ, ನವೆಂಬರ್ 10: ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ದ್ವೇಷದ ಗೋಡೆಗಳು ನಿರ್ಮಾಣವಾಗುತ್ತಿರುವ ಇಂದಿನ ಕಾಲದಲ್ಲಿ, ಗದಗ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಪ್ರೀತಿಯೇ ಶ್ರೇಷ್ಠ ಧರ್ಮ ಎಂಬ ಸಂದೇಶ ಸಾರುತ್ತಿದೆ. ದೀಪಾವಳಿ ಹಬ್ಬದಂದು ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಳೆದ 35 ವರ್ಷಗಳಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪರಂಪರೆಯನ್ನು ಈ ಕುಟುಂಬ ಮುಂದುವರಿಸಿಕೊಂಡು ಬಂದಿದೆ. ಮೂರು ತಲೆಮಾರುಗಳಿಂದ ನಡೆದುಕೊಂಡು ಬರುತ್ತಿರುವ ಈ ಅಪರೂಪದ ಸಂಪ್ರದಾಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

35 ವರ್ಷಗಳಿಂದ ಲಕ್ಷ್ಮೀ ಆರಾಧನೆ

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಕುತ್ಬುದ್ದೀನ್ ಗಡಾದ ಕುಟುಂಬವೇ ಈ ಸೌಹಾರ್ದತೆಯ ಸಂಕೇತ. ಜಕ್ಕಲಿ ಬಸ್ ನಿಲ್ದಾಣದ ಬಳಿ ಸೈಕಲ್ ಅಂಗಡಿ ನಡೆಸುತ್ತಿರುವ ಕುತ್ಬುದ್ದೀನ್, ದೀಪಾವಳಿ ಹಬ್ಬ ಬಂದರೆ ಸಾಕು ತಮ್ಮ ಅಂಗಡಿಯನ್ನು ಮಂಟಪ, ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸುತ್ತಾರೆ. ಲಕ್ಷ್ಮೀದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹೊಸ ಸೀರೆ ಉಡಿಸಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸುತ್ತಾರೆ.

ಹಿಂದೂ ಸ್ವಾಮಿಗಳನ್ನು ಆಹ್ವಾನಿಸಿ ಮಂತ್ರೋಚ್ಚಾರಣೆ, ಆರತಿ ಮೂಲಕ ಲಕ್ಷ್ಮೀ ಪೂಜೆ ನೆರವೇರಿಸುತ್ತಾರೆ. ಕುಟುಂಬದ ಸದಸ್ಯರು, ಗ್ರಾಮದ ಹಿಂದೂ ಬಾಂಧವರು ಹಾಗೂ ವ್ಯಾಪಾರಸ್ಥರು ಒಟ್ಟಾಗಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ಪೂಜೆಯ ಬಳಿಕ ಕಡುಬು, ಪಲ್ಯ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಎಲ್ಲರಿಗೂ ವಿಶೇಷ ಭೋಜನದ ಆತಿಥ್ಯ ನೀಡುತ್ತಾರೆ.

ಮೂರು ತಲೆಮಾರುಗಳಿಂದ ಮುಂದುವರಿದ ಸಂಪ್ರದಾಯ

ಈ ಆಚರಣೆಯ ಮತ್ತೊಂದು ವಿಶೇಷವೆಂದರೆ ಇದು ಕೇವಲ ಕುತ್ಬುದ್ದೀನ್ ಅವರಿಗೆ ಸೀಮಿತವಾಗಿಲ್ಲ. ಪತ್ನಿ ರಜಮಾ ಬೇಗಂ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಸಂಭ್ರಮದಿಂದ ಲಕ್ಷ್ಮೀ ಪೂಜೆಯಲ್ಲಿ ಭಾಗಿಯಾಗುತ್ತದೆ. ಹಿರಿಯರು ಆರಂಭಿಸಿದ ಸಂಪ್ರದಾಯವನ್ನು ಮುಂದಿನ ತಲೆಮಾರುಗಳೂ ಅಷ್ಟೇ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದಿವೆ.

ಇನ್ನು ಕುಟುಂಬವು ಹಿಂದೂಗಳ ಹಬ್ಬಗಳಿಗೆ ಮಾತ್ರ ಸೀಮಿತವಾಗಿ ಸೌಹಾರ್ದತೆ ತೋರುತ್ತಿಲ್ಲ. ದರ್ಗಾದ ಉರುಸ್, ಮೊಹರಂ ಸೇರಿದಂತೆ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಿಗೂ ಹಿಂದೂ ಬಾಂಧವರನ್ನು ಆತ್ಮೀಯವಾಗಿ ಆಹ್ವಾನಿಸಿ ಭಾಗಿಯಾಗುವಂತೆ ಮಾಡುತ್ತದೆ. ಪರಸ್ಪರರ ಧರ್ಮ, ನಂಬಿಕೆ ಹಾಗೂ ಆಚರಣೆಗಳಿಗೆ ಗೌರವ ನೀಡುವುದೇ ಈ ಕುಟುಂಬದ ವಿಶೇಷತೆ.

ಒಟ್ಟಿನಲ್ಲಿ, ಧರ್ಮಕ್ಕಿಂತ ಮಾನವೀಯತೆ ದೊಡ್ಡದು, ಪ್ರೀತಿಗಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಜಕ್ಕಲಿಯ ಕುತ್ಬುದ್ದೀನ್ ಕುಟುಂಬ ಸಾಬೀತುಪಡಿಸಿದೆ. 35 ವರ್ಷಗಳಿಂದ ಬೆಳಗುತ್ತಿರುವ ಈ ಭಾವೈಕ್ಯತೆಯ ಹಣತೆ, ಸಮಾಜದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆಯ ಬೆಳಕನ್ನು ಪಸರಿಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More