ಗದಗ: 40 ವರ್ಷಗಳಿಂದ ಬಸ್ ನಿಲ್ದಾಣ (bus shelter) ನಿರ್ಮಿಸಲು ಕಾಳಜಿ ತೋರದ ಅಧಿಕಾರಿಗಳ ಮತ್ತು ಶಾಸಕರ ನಿರಾಸಕ್ತಿಯಿಂದ ಬೇಸತ್ತು, ಗ್ರಾಮಸ್ಥರೇ ತಾವೇ ಒಂದು ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಿ, ಎಮ್ಮೆಯಿಂದ ಬಸ್ ನಿಲ್ದಾಣವನ್ನು ಉದ್ಘಾಟಿಸಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ರಾಜ್ಯದ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಳೆಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 40 ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿದ್ದು, ದಶಕದ ಹಿಂದೆ ಛಾವಣಿ ಕುಸಿದು ಬಿದ್ದಿದೆ. ಜೊತೆಗೆ ಬಸ್ ತಂಗುದಾಣವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಪ್ರಯಾಣಿಕರು ಈಕಡೆ ಕುರುವುದಕ್ಕೂ ಆಗದೇ ನಿಲ್ಲುವುದಕ್ಕೂ ಆಗದೆ ಸುಡುವ ಬಿಸಿಲು ಮತ್ತು ಭಾರೀ ಮಳೆಯಲ್ಲಿ ಬಸ್‌ಗಳಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನೂ ರಾಜಕೀಯ ನಾಯಕರಿಗೆ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅವರ ಹುಸಿ ಮಾತುಗಳಿಂದ ಬೇಸತ್ತ ಗ್ರಾಮಸ್ಥರು ಆಕ್ರೋಶಗೊಂಡು ಸ್ವತಃ ತಾವೇ ಬಸ್ ತಂಗುದಾಣ ನಿರ್ಮಾಣ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
Villagers from Balehosur village of Gadag Fed up with delay in restoring the bus stand, the villagers themselves built a temporary shelter and made a buffalo inaugurate it instead of a politician. pic.twitter.com/Ke9ZFPiX79
— Vijayakumar (@vijaycam) July 20, 2022
ಹಾಲಿ ಬಿಜೆಪಿ ಶಾಸಕ ರಾಮಪ್ಪ ಲಮಾಣಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರಿಗೆ ಬಸ್ ತಂಗುದಾಣ ನಿರ್ಮಿಸುವಂತೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ರೈತ ಮುಖಂಡ ಲೋಕೇಶ ಜಾಲವಾಡಗಿ ಹೇಳಿದರು. ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದ್ದು, ಪ್ರತಿನಿತ್ಯ ನೂರಾರು ಜನ, ವಿದ್ಯಾರ್ಥಿಗಳು ಹಳ್ಳಿಯಿಂದ ಸುತ್ತಮುತ್ತಲಿನ ಪಟ್ಟಣಗಳಿಗೆ ತೆರಳುತ್ತಾರೆ ಎಂದು ವಿರೂಪಾಕ್ಷ ಇಟಗಿ ಹೇಳಿದರು.
ಇದನ್ನೂ ಓದಿ: ಕೇರಳ ಕಾಡಿನಲ್ಲಿ ಹೋಗುತ್ತಿದ್ದಾಗ ಮುಖಾಮುಖಿಯಾದ ಆನೆಯಿಂದ ಈ ಬೈಕರ್ ನ ಪ್ರಾಣವುಳಿಸಿದ್ದು ಅವರ ಸಮಯಪ್ರಜ್ಞೆ
ತೆಂಗಿನ ಕೊಂಬೆಗಳಿಂದ ಬಸ್ ತಂಗುದಾಣ ಮೇಲ್ಛಾವಣಿಯನ್ನು ನಿರ್ಮಿಸಿ ಎಮ್ಮೆಯನ್ನು ಮುಖ್ಯ ಅತಿಥಿಯನ್ನಾಗಿ ಮಾಡಿ, ಅದರಿಂದ ರಿಬ್ಬನ್ ಕತ್ತರಿಸುವ ಮೂಲಕ ಬಸ್ ತಂಗುದಾಣ ಉದ್ಘಾಟಿಸಿದರು. ಆ ಮೂಲಕ ಸರಕಾರದ ನಿರ್ಲಕ್ಷ್ಯದ ವಿರುದ್ಧ ವಿನೂತನ ರೀತಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋಗಳು ವೈರಲ್ ಆದ ಬಳಿಕ ಅಧಿಕಾರಿಗಳು ಹಾಗೂ ಶಾಸಕರು ಶೀಘ್ರವೇ ಬಸ್ ತಂಗುದಾಣ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.