ಕೇರಳ ಕಾಡಿನಲ್ಲಿ ಹೋಗುತ್ತಿದ್ದಾಗ ಮುಖಾಮುಖಿಯಾದ ಆನೆಯಿಂದ ಈ ಬೈಕರ್ ನ ಪ್ರಾಣವುಳಿಸಿದ್ದು ಅವರ ಸಮಯಪ್ರಜ್ಞೆ

ವೈರಲ್ ಆಗಿರುವ ಈ ಭಯಾನಕ ವಿಡಿಯೋ ನೋಡಿದರೆ ಡಾಟ್ಸನ್ ಏನು ಮಾಡಿದರು ಅನ್ನೋದು ಗೊತ್ತಾಗುತ್ತದೆ. ಆನೆ ನಿಧಾನವಾಗಿ ನಡೆದು ಬಂದು ಬೈಕ್ ಮೇಲೆ ಕುಳಿತ ಡಾಟ್ಸನ್ ರನ್ನು ಒಮ್ಮೆ ದಿಟ್ಟಿಸಿ ನೋಡಿ ಘೀಳಿಸುತ್ತದೆ. ಬಳಿಕ ತನ್ನ ದಂತಗಳಿಂದ ಬೈಕ್ ಮುಂಭಾಗಕ್ಕೆ ಸಣ್ಣದಾಗಿ ಗುದ್ದಿ ತಾನು ಬಂದ ದಾರಿಗೆ ವಾಪಸ್ಸು ಹೋಗುತ್ತದೆ.

ಕೇರಳ ಕಾಡಿನಲ್ಲಿ ಹೋಗುತ್ತಿದ್ದಾಗ ಮುಖಾಮುಖಿಯಾದ ಆನೆಯಿಂದ ಈ ಬೈಕರ್ ನ ಪ್ರಾಣವುಳಿಸಿದ್ದು ಅವರ ಸಮಯಪ್ರಜ್ಞೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2022 | 3:03 PM

ತ್ರಿಸ್ಸೂರ್, ಕೇರಳ: ಕಾಡುರಸ್ತೆಯೊಂದರಲ್ಲಿ (forest route) ನೀವು ಬೈಕಲ್ಲಿ ನಿಮ್ಮ ಫೇವರಿಟ್ ಹಾಡನ್ನು ಗುನುಗುನಿಸುತ್ತಾ ಪ್ರಕೃತಿ ಸೌಂದರ್ಯದ ನಡುವೆ ಸವಾರಿಯನ್ನು ಎಂಜಾಯ್ ಮಾಡುತ್ತಾ ಹೋಗುತ್ತಿರುವಾಗ ನಿಮ್ಮೆದಿರು ಬೃಹತ್ ಗಾತ್ರದ ಆನೆಯೊಂದು (elephant) ಧುತ್ತನೆ ಪ್ರತ್ಯಕ್ಷವಾದರೆ ಏನು ಮಾಡುತ್ತೀರಿ? ನಾವೆಲ್ಲ ಮಾಡೋದು ಒಂದೇ, ಬೈಕಿಂದ ಇಳಿದು ಬದುಕಿದೆನೋ ಸತ್ತೆನೋ ಅಂತ ಓಡೋದು. ಪ್ರಾಣ ಉಳಿಸಿಕೊಳ್ಳುವುದೊಂದೇ ನಮ್ಮ ಗುರಿಯಾಗಿರುತ್ತದೆ. ಕೇರಳದ ತ್ರಿಸ್ಸೂರ್ ನಿವಾಸಿ ಡಾಟ್ಸನ್ (Datsun) ಅಂತಿರಾಪಲ್ಲಿ-ವಲಪರೈ ನಡುವಿನ ಕಾಡುರಸ್ತೆಯಲ್ಲಿ ಬೈಕ್ ರೈಡ್ ಮಾಡಿಕೊಂಡು ಹೋಗುವಾಗ ಇಂಥದ್ದೇ ಸನ್ನಿವೇಶ ಎದುರಾಗಿದೆ. ಆದರೆ ಡಾಟ್ಸನ್ ಮಾಡಿದ್ದು ಮಾತ್ರ ಭಿನ್ನ ಮತ್ತು ನಮ್ಮ ಯೋಚನೆಗೆ ತದ್ವಿರುದ್ಧವಾದದ್ದು!

ವೈರಲ್ ಆಗಿರುವ ಈ ಭಯಾನಕ ವಿಡಿಯೋ ನೋಡಿದರೆ ಡಾಟ್ಸನ್ ಏನು ಮಾಡಿದರು ಅನ್ನೋದು ಗೊತ್ತಾಗುತ್ತದೆ. ಆನೆ ನಿಧಾನವಾಗಿ ನಡೆದು ಬಂದು ಬೈಕ್ ಮೇಲೆ ಕುಳಿತ ಡಾಟ್ಸನ್ ರನ್ನು ಒಮ್ಮೆ ದಿಟ್ಟಿಸಿ ನೋಡಿ ಘೀಳಿಸುತ್ತದೆ. ಬಳಿಕ ತನ್ನ ದಂತಗಳಿಂದ ಬೈಕ್ ಮುಂಭಾಗಕ್ಕೆ ಸಣ್ಣದಾಗಿ ಗುದ್ದಿ ತಾನು ಬಂದ ದಾರಿಗೆ ವಾಪಸ್ಸು ಹೋಗುತ್ತದೆ. ಡಾಟ್ಸನ್ ಹಿಂದೆ ಇದ್ದ ಬೈಕ್ ಸವಾರರು ತಮ್ಮ ಮೊಬೈಲ್ ನಲ್ಲಿ ಮೈಯಲ್ಲಿ ನಡುಕ ಹುಟ್ಟಿಸುವ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ ಮತ್ತು ಕೆಲ ಟಿವಿ ಚ್ಯಾನೆಲ್ ಗಳಲ್ಲಿ ಬಿತ್ತರಗೊಂಡಿದೆ.

ಇದನ್ನು ರೆಕಾರ್ಡ್ ಮಾಡಿದ ಬೈಕರ್ ಗಳು ‘ಅಲ್ಲಿಂದ ಓಡು’ ಅಂತ ಜೋರಾಗಿ ಅರಚುವುದು ಕೇಳಿಸುತ್ತದೆ. ಆದರೆ ಡಾಟ್ಸನ್ ಮಾತ್ರ ತಮ್ಮ ಬೈಕ್ ಮೇಲೆ ಕದಲದೆ ಕುಳಿತುಬಿಡುತ್ತಾರೆ.

ಅದೃಷ್ಟವಶಾತ್ ಅವರ ನಿರ್ಧಾರ ಫಲ ನೀಡುತ್ತದೆ ಮತ್ತು ಪ್ರಾಣಾಪಾಯದಿಂದ ಪಾರಾಗುತ್ತಾರೆ.

ವೃತ್ತಿಯಿಂದ ಟೈಲ್ ಕೆಲಸಗಾರನಾಗಿರುವ ಡಾಟ್ಸನ್ ಟಿವಿ ಚ್ಯಾನೆಲೊಂದರ ಜೊತೆ ಮಾತಾಡಿ, ಅಂತಿರಾಪಲ್ಲಿ-ವಲಪರೈ ಕಾಡುರಸ್ತೆಯಲ್ಲಿ ರಸ್ತೆಯ ಒಂದು ತಿರುವಿನಲ್ಲಿ ಇದ್ದಕ್ಕಿದ್ದಂತೆ ಆನೆಯೊಂದು ನನ್ನ ಬೈಕ್ ಗೆ ಕೆಲವೇ ಮೀಟರ್ ಗಳಷ್ಟು ಅಂತರದಲ್ಲಿ ಪ್ರತ್ಯಕ್ಷವಾಯಿತು. ಕೂಡಲೇ ನಾನು ನನ್ನ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಎಂಜಿನ್ ಆಫ್ ಮಾಡಿದೆ ಎಂದು ಹೇಳಿದ್ದಾರೆ.

‘ನನ್ನ ಮುಂದೆ ಇಳುಕಲು ರಸ್ತೆ ಇದ್ದುದ್ದರಿಂದ ನನಗೆ ಮುಂದೆ ಹೋಗುವುದಾಗಲಿಲ್ಲ ಮತ್ತು ಹಿಂದಕ್ಕೂ ಹೋಗುವುದು ಸಾಧ್ಯವಿರಲಿಲ್ಲ. ಅಸಲಿಗೆ ನಾನೇನೂ ಮಾಡಲಾಗದ ಸ್ಥಿತಿ ಅದು. ಹಾಗಾಗಿ ಬೈಕನ್ನು ಆಫ್ ಮಾಡಿ ಕದಲದೆ ಅದರ ಮೇಲೆ ಕುಳಿತು ಬಿಟ್ಟೆ,’ ಎಂದು ಡಾಟ್ಸನ್ ಹೇಳಿದ್ದಾರೆ.

ಡಾಟ್ಸನ್ ರನ್ನು ನೋಡಿದ ಆನೆಯು ಅವರೆಡೆ ಬಂದು ತನ್ನ ದಂತಗಳಿಂದ ಬೈಕ್ ಗೆ ನಿಧಾನವಾಗಿ ಎರಡು ಬಾರು ಗುದ್ದಿದೆ, ನಂತರ ಸೊಂಡಿಲನ್ನು ಬೈಕ್ ಮತ್ತು ಅವರ ಮೇಲೆ ಹಗುರವಾಗಿ ಆಡಿಸಿದೆ. ತನ್ನಿಂದ ಆನೆಗೆ ಯಾವುದೇ ಅಪಾಯವಿಲ್ಲ ಎಂಬಂತೆ ಡಾಟ್ಸನ್ ತಮ್ಮ ಬಲ ಅಂಗೈಯನ್ನು ಅದಕ್ಕೆ ತೋರಿಸಿದ್ದಾರೆ. ಆಗ ಆನೆ ತಾನು ಬಂದ ದಾರಿಗೆ ವಾಪಸ್ಸು ಹೋಗಿದೆ, ಎಂದು ಅವರು ಹೇಳಿದ್ದಾರೆ.

‘ನಾನೇನಾದರೂ ಬೈಕನ್ನು ಬಿಟ್ಟು ಓಡುವ ಪ್ರಯತ್ನ ಮಾಡಿದ್ದರೆ ಆನೆ ನನ್ನ ಬೆನ್ನಟ್ಟಿ ತುಳಿದು ಸಾಯಿಸಿ ಬಿಡುತ್ತಿತ್ತು. ನಿಶ್ಚಲನಾಗಿ ಕುಳಿತುಬಿಡುವ ನನ್ನ ನಿರ್ಧಾರವೇ ನನ್ನ ಪ್ರಾಣ ಉಳಿಸಿತು. ಆತಂಕಕ್ಕೆ ಒಳಗಾಗದೆ ಯಾವುದೇ ರೀತಿಯ ಪ್ರತಿಕ್ರಿಯೆ ತೋರದೆ ಹೋಗಿದ್ದು ಬಹಳ ಸಹಾಯ ಮಾಡಿತು,’ ಎಂದು ಡಾಟ್ಸನ್ ನಿಶ್ಚಿತ ಸಾವಿನಿಂದ ಪಾರಾಗಿ ಬಂದ ಅನುಭವವನ್ನು ವಿವರಿಸಿದ್ದಾರೆ.

‘ಸಲಗ ನನ್ನೆಡೆ ಬೆನ್ನು ಹಾಕಿ ವಾಪಸ್ಸು ಹೋದ ಮೇಲೆ ನಾನು ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟೆ. ಆನೆ ನನ್ನತ್ತ ನೋಡಿ ತನ್ನ ಸೊಂಡಿಲೆತ್ತಿ ಪೊಡಮಟ್ಟಿತಲ್ಲದೆ ಒಮ್ಮೆ ಘೀಳಿಟ್ಟಿತು,’ ಎಂದು ಡಾಟ್ಸನ್ ಹೇಳಿದ್ದಾರೆ.

‘ನನ್ನ ಹಿಂದಿದ್ದ ಬೈಕರ್ ಗಳು ತಾವು ಮಾಡಿದ ವಿಡಿಯೋವನ್ನು ಕಳಿಸಿದಾಗ ಅದನ್ನು ನೋಡಿದ ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ನೀವು ಬದುಕುಳಿದಿದ್ದು ದೇವರ ಕೃಪೆಯಲ್ಲದೆ ಮತ್ತೇನೂ ಅಲ್ಲ ಅಂದರು,’ ಅಂತ ಡಾಟ್ಸನ್ ಟಿವಿಗೆ ತಿಳಿಸಿದ್ದಾರೆ.