ಗದಗ, ಜ.07: ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಬಳಿಯ ವಿಜಯನಗರ ಸಕ್ಕರೆ ಕಾರ್ಖಾನೆ(Vijayanagara Sugar Factory)ಯು ಶಿರಹಟ್ಟಿ ತಾಲೂಕಿನ ಕಬ್ಬು ಬೆಳೆಗಾರರ(sugar cane growers) ಜೀವ ಹಿಂಡುತ್ತಿದೆ. ಶಿರಹಟ್ಟಿ ತಾಲೂಕಿನ ರೈತರ(Farmers) ಕಬ್ಬನ್ನು, ಕಾರ್ಖಾನೆ ಕಟಾವು ಮಾಡದೇ ಸತಾಯಿಸುತ್ತಿದೆ. ಕಬ್ಬು ಕಡಿಯುವ ಗ್ಯಾಂಗ್ಗಳಿಗೆ ಕಟಾವು ಕೂಲಿ ಮೊತ್ತ ಮುಗಿಸಿದರೂ ರೈತರ ಜಮೀನುಗಳಿಗೆ ಕಟಾವು ಗ್ಯಾಂಗ್ ಕಾರ್ಖಾನೆ ಕಳಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಕಬ್ಬು ಕಟಾವು ಗ್ಯಾಂಗ್ ಇವತ್ತು ಬರುತ್ತೆ, ನಾಳೆ ಬರುತ್ತದೆ ಎಂದು ರೈತರ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಅಷ್ಟೇ ಅಲ್ಲ ಗ್ಯಾಂಗ್ಗಳ ಮೂಲಕ ಮತ್ತೆ ಹೆಚ್ಚುವರಿಯಾಗಿ 1 ಟನ್ಗೆ 500 ರಿಂದ 700ರೂಪಾಯಿ ವಸೂಲಿಗೆ ಕಾರ್ಖಾನೆ ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಎರಡು ತಿಂಗಳು ಕಳೆದರೂ ಕಟಾವು ಮಾಡುತ್ತಿಲ್ಲ. ಹೀಗಾಗಿ ಶಿರಹಟ್ಟಿ ತಾಲೂಕಿನ ಸಾಸರವಾಡ, ಕಲ್ಲಾಗನೂರ, ತೊಳಲಿ, ಇಟಗಿ ಗ್ರಾಮದ ರೈತರ ನೂರಾರು ಎಕರೆ ಕಬ್ಬು ಜಮೀನಿನಲ್ಲೇ ಒಣಗುತ್ತಿದ್ದು, ಇದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಕಬ್ಬಿನ ತೋಟಕ್ಕೆ ನೀರು ಹರಿಸುವುದು ರೈತರು ನಿಲ್ಲಿಸಿದ್ದಾರೆ. ಹೀಗಾಗಿ ಕಬ್ಬು ಒಣಗುತ್ತಿದೆ. ಹೀಗೆ ಕಬ್ಬು ಒಣಗಿದ್ರೆ ತೂಕದಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಕಾರ್ಖಾನೆಗೆ ಲಾಭವಾಗುತ್ತದೆ. ಆದರೆ, ನಮಗೆ ಹಾನಿಯಾಗುತ್ತದೆ ಎಂದು ರೈತರು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಭೀಕರ ಬರಗಾಲದಿಂದ ತತ್ತರಿಸಿದ ಕಬ್ಬು ಬೆಳೆಗಾರರು: ಸಕ್ಕರೆ ಉದ್ಯಮಕ್ಕೂ ಸಂಕಷ್ಟ?
ಒಂದುವರೆ ತಿಂಗಳಿಂದ ವಿಜಯನಗರ ಶುಗರ್ಸ್ ಅಧಿಕಾರಿಗಳು ಕಟಾವು ಮಾಡುವುದಾಗಿ ಆಡವಾಡುತ್ತಿದ್ದಾರೆ. ಹೀಗಾಗಿ ಅರ್ಧದಷ್ಟು ಇಳುವರಿಯಲ್ಲಿ ಕುಂಠಿತವಾಗುತ್ತದೆ. ರೈತರ ಅಸಾಯಕತೆ ದುರ್ಬಳಕೆ ಮಾಡಿಕೊಂಡು ರೈತರಿಂದ ಹಣ ಸುಲಿಗೆಗೆ ಕಾರ್ಖಾನೆ ನಿಂತಿದೆ. ಜಿಲ್ಲಾಧಿಕಾರಿಗಳು ರೈತರು ಕಾರ್ಖಾನೆ ಸಭೆಯಲ್ಲಿ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಕಾರ್ಖಾನೆಗೆ ತಾಕೀತ್ತು ಮಾಡಿದೆ. ಆದರೂ ವಿಜಯನಗರ ಶುಗರ್ಸ್ ಕಂಪನಿ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಈ ವಿಷಯ ಜಿಲ್ಲಾಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಕೂಡ ರೈತರ ನೆರವಿಗೆ ಬರುತ್ತಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ಈ ಬಗ್ಗೆ ವಿಜಯನಗರ ಸಕ್ಕರೆ ಕಾರ್ಖಾನೆ ಎಜಿಎಂ ಮಂಜುನಾಥ್ ರೈತರ ಆರೋಪಗಳೆಲ್ಲ ಅಲ್ಲಗಳೆದಿದ್ದಾರೆ. ಸರ್ಕಾರದ ಆದೇಶದಂತೆ ಈ ವರ್ಷ ಕಾರ್ಖಾನೆ ಒಂದು ತಿಂಗಳ ತಡವಾಗಿ ಆರಂಭವಾಗಿದೆ. ಹೀಗಾಗಿ ಕಟಾವು ವಿಳಂಬವಾಗಿದೆ. ಯಾವ ರೈತರಿಂದಲೂ ಹೆಚ್ಚಿನ ಹಣ ವಸೂಲಿ ಮಾಡಿಲ್ಲ ಎಂದಿದ್ದಾರೆ. ಗದಗ ಜಿಲ್ಲೆಯ ಕಬ್ಬು ಬೆಳೆದ ರೈತರಿಗೆ ಅನ್ಯಾಯ, ಸಕ್ಕರೆ ಕಾರ್ಖನೆ ಕಬ್ಬು ಕಟಾವಿಗೆ ವಿಳಂಬ ಮಾಡಿದ್ರೆ ತಕ್ಷಣ ಸ್ಪಂದಿಸಲು ಮೂರು ತಂಡ ಜಿಲ್ಲಾಧಿಕಾರಿಗಳು ರಚನೆ ಮಾಡಿದ್ದಾರೆ. ಆದ್ರೆ, ಈ ತಂಡಗಳು ಎಸಿ ಕಚೇರಿಯಲ್ಲೇ ಕುಳಿತಿವೆ. ಯಾವೊಬ್ಬ ಅಧಿಕಾರಿಗಳು ತಾಲೂಕುಗಳಲ್ಲಿ ಸಂಚಾರ ಮಾಡಿ ಕಬ್ಬು ಬೆಳೆಗಾರರಿಗೆ ಆಗುತ್ತಿರೋ ಅನ್ಯಾಯ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ರೈತರಿಗೆ ಬಂಡವಾಳ ಶಾಹಿಗಳಿಂದ ನಿರಂತರ ಶೋಷಣೆಯಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಬ್ಬು ಬೆಳೆಗಾರರಿಗೆ ಕಾರ್ಖಾನೆಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ