ಗದಗ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಗರ್ಭಿಣಿಯರು, ಮಹಿಳೆಯರ, ಮಕ್ಕಳ ಆಹಾರ ಲೂಟಿ ನಡೆಸಿದ ಆರೋಪ ಕೇಳಿ ಬಂದಿದೆ. ಜೊತೆಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಬದಲಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಗೋಧಿಯಲ್ಲಿ ನುಸಿಗಳು ಕಾಣಿಸುತ್ತಿದ್ದು, ಇಂಥಹ ಆಹಾರ ತಿಂದರೆ ನಮ್ಮ ಮಕ್ಕಳ ಗತಿ ಏನೂ ಅಂತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಅಂಗನವಾಡಿಯೊಂದರಲ್ಲಿ ನಡೆದ ಘಟನೆ. ಜಿಲ್ಲೆಯಲ್ಲಿ ಮಕ್ಕಳ, ಗರ್ಭಿಣಿಯರ, ಬಾಣಂತಿಯರ ಪೌಷ್ಟಿಕ ಆಹಾರದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಮಕ್ಕಳಿಗೆ ಗರ್ಭಿಣಿಯರಿಗೆ ಸಲ್ಲಬೇಕಾಗಿದ್ದ ಪೌಷ್ಟಿಕ ಆಹಾರ, ದವಸ ಧಾನ್ಯಗಳು ಅಧಿಕಾರಿಗಳ ಜೇಬು ತುಂಬುವಂತ ಹಗರಣವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರತಿ ತಿಂಗಳು ಸರಕಾರದ ಯೋಜನೆಯಂತೆ ಅಂಗನವಾಡಿಗಳಿಗೆ ವಿತರಣೆಯಾಗಬೇಕಿದ್ದ ರೇಷನ್ ಬೇಡಿಕೆಗಿಂತಲೂ ಕಡಿಮೆ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ.
ಮುಂಡರಗಿ ತಾಲೂಕಿನಲ್ಲಿ ಅಧಿಕಾರಿಗಳು ದವಸ ಧಾನ್ಯಗಳು, ಮೊಟ್ಟೆ, ಪೌಷ್ಟಿಕ ಆಹಾರಗಳು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಕೊರೊನಾ ಮೂರನೇ ಅಲೆಯ ಸಂಕಷ್ಟದಲ್ಲೂ ಮಕ್ಕಳು, ಗರ್ಭಿಣಿರಯರು ಪೌಷ್ಟಿಕ ಆಹಾರ ಇಲ್ಲದೆ ಪರದಾಡುತ್ತಿದ್ದಾರೆ. ಮೂರು ತಿಂಗಳಿಂದ ಮೊಟ್ಟೆ ಕೊಟ್ಟಿಲ್ಲ. ಜೊತೆಗೆ ಯಾವ ಪದಾರ್ಥವೂ ಪೂರ್ಣ ನೀಡುತ್ತಿಲ್ಲ ಅಂತ ಮಂಜುಳಾ ಕಿಡಿಕಾರಿದ್ದಾರೆ.
ಒಂದು ಕಡೆ ಈ ಪರಿಸ್ಥಿತಿಯಾದರೆ, ಇನ್ನೊಂದೆಡೆ ಗೋಧಿ ಪೌಷ್ಟಿಕ ಆಹಾರದಲ್ಲಿ ನುಸಿಗಳು ಬುಸುಗುಡುತ್ತಿವೆ. ಮತ್ತೊಂದಡೆ ಅಕ್ಕಿಯಲ್ಲೂ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಗೊಡಾನ್ನಲ್ಲಿ ನೂರಾರು ಮೂಟೆಗಳು ಸ್ಟಾಕ್ ಇದ್ದರೂ ಅಂಗನವಾಡಿಗಳಿಗೆ ರೇಷನ್ ಸರಿಯಾಗಿ ತಲುಪುತ್ತಿಲ್ಲ. ಆಗಸ್ಟ್ ತಿಂಗಳಲ್ಲಿ ಶೇ.50 ರಷ್ಟು ಮಾತ್ರ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ಉಳಿದ ಶೇ.50 ರಷ್ಟು ಮಕ್ಕಳು, ಗರ್ಭಿಣಿಯರ ಹೊಟ್ಟೆ ಸೇರಬೇಕಿದ್ದ ಪೌಷ್ಟಿಕ ಆಹಾರ ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮುಂಡರಗಿ ಸಿಡಿಪಿಓ ಲಲಿತಾ ಅಳವಂಡಿಯವರನ್ನ ಕೇಳಿದರೆ, ಏನೂ ಆಗಿಲ್ಲ. ಎಲ್ಲವೂ ಸರಿ ಇದೆ. ಮೊಟ್ಟೆ ಹಣ ಕೂಡ ನೀಡಲಾಗಿದೆ. ಎಲ್ಲವೂ ಸರಿ ಇದೆ ಅಂತಾರೆ.
ಇದನ್ನೂ ಓದಿ
ಬೇರೆ ಬೇರೆ ಮದುವೆಯಾದರೂ ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ
(Gadag Women and Child Development Department has been accused of corruption)