
ಗದಗ, (ಜನವರಿ 15): ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10ರಂದು ನಿಧಿ (lakkundi Gold Treasure) ಪತ್ತೆಯಾದ ಬೆನ್ನಲ್ಲೇ ಇದೀಗ ಉತ್ಖನನ ನಡೆಸಲು ಪುರಾತತ್ವ ಇಲಾಖೆ ಮುಂದಾಗಿದೆ. ಹೌದು.. ನಾಳೆಯಿಂದ ಅಂದರೆ ಜನವರಿ 16ರಿಂದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಶುರುವಾಗಲಿದ್ದು, ಮೊದಲಿಗೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 48 ಸಿಬ್ಬಂದಿಯಿಂದ ಉತ್ಖನನ ನಡೆಯಲಿದೆ. ಹೀಗಾಗಿ ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಸ್ವತಃ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ಕೆ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ 10ರಂದು ರಿತ್ತಿ ಕುಟುಂಬ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದನಿಧಿ ಪತ್ತೆಯಾಗಿತ್ತು. ಕುಟುಂಬ ಕೂಡಾ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಚಿನ್ನವನ್ನು ಹಸ್ತಾಂತರ ಮಾಡಿದೆ. ಇದರ ಬೆನ್ನಲ್ಲೇ ನಾಳೆಯಿಂದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನಕ್ಕೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇನ್ನು ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳಿವೆ. ಹೀಗಾಗಿ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಪ್ರಮಾಣದ ನಿಧಿಯಿದೆ ಎನ್ನಲಾಗುತ್ತಿದೆ. ಹೀಗಾಗಿ ಲಕ್ಕುಂಡಿ ಗ್ರಾಮವನ್ನು ಸ್ಥಳಾಂತರ ಮಾಡಬೇಕು. ಆಗ ಮಾತ್ರ ಲಕ್ಕುಂಡಿ ಗ್ರಾಮದಲ್ಲಿ ನಿಧಿ ರಹಸ್ಯ ಬಯಲಾಗುತ್ತದೆ. ಇದರಿಂದ ಗ್ರಾಮವನ್ನ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಚ್ಕೆ ಪಾಟೀಲ್ ಹೇಳಿದ್ದಾರೆ.
ಗ್ರಾಮದಲ್ಲಿರುವ ಒಂದೊಂದು ದೇವಸ್ಥಾನಕ್ಕೆ ಸೇರಿದ ಆವರಣಗಳಿವೆ. ಹೀಗಾಗಿ ಇಡೀ ಗ್ರಾಮವನ್ನು ಸ್ಥಳಾಂತರ ಮಾಡಿದ್ರೆ ಅಪಾರ ಸಂಪತ್ತು ಸಿಗುತ್ತೇ ಅಂತಾರೆ ಲಕ್ಕುಂಡಿ ಗ್ರಾಮಸ್ಥರು. ಇನ್ನು ಲಕ್ಕುಂಡಿ ಗ್ರಾಮದಲ್ಲಿ ಈ ಹಿಂದೆ ಸಹ ಸಾಕಷ್ಟು ಚಿನ್ನದ ನಿಧಿಪತ್ತೆಯಾಗಿತ್ತು. ಆ ಸಮಯದಲ್ಲಿ ನಿಧಿಯನ್ನು ಇಟ್ಟುಕೊಂಡು ಕುಟುಂಬಗಳು ಸರ್ವನಾಶವಾಗಿವೆ. ಗ್ರಾಮದಲ್ಲಿ ಸಿಕ್ಕ ನಿಧಿ ಉಪಯೋಗಿಸಿದ ಕುಟುಂಬಗಳು ಸರ್ವನಾಶವಾಗಿವೆ ಎನ್ನುವುದು ಗ್ರಾಮದ ಕೆಲ ಜನರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿಗೆ ಜನ ಆತಂಕಗೊಂಡಿದ್ದು, ಯಾವಾಗ ಏನೇನು ಆಗುತ್ತೆ ಎನ್ನುವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ.
ಒಟ್ಟಿನಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಲಕ್ಕುಂಡಿ ಗ್ರಾಮದಲ್ಲಿ ನಾನಾ ರೀತಿಯ ಮಾತುಗಳು, ಚರ್ಚೆಗಳು ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದಂತೂ ಸತ್ಯ. ಇನ್ನೊಂದೆಡೆ ಉತ್ಖನನ ವೇಳೆ ಏನೆಲ್ಲಾ ಸಿಗಬಹುದು ಎನ್ನುವ ಕಾತರದಲ್ಲಿ ಜನ ಇದ್ದಾರೆ.