AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ಪಂಡಿತ ಪುಟ್ಟರಾಜ ಗವಾಯಿ ಸ್ಮಾರಕ ಭವನ 6-9 ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ಬದ್ಧ: ಸಚಿವ ಎಚ್​ಕೆ ಪಾಟೀಲ್

ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿ 6-9 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದಾರೆ.

ಡಾ ಪಂಡಿತ ಪುಟ್ಟರಾಜ ಗವಾಯಿ ಸ್ಮಾರಕ ಭವನ 6-9 ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ಬದ್ಧ: ಸಚಿವ ಎಚ್​ಕೆ ಪಾಟೀಲ್
ಸ್ಮಾರಕ ಭವನ ವೀಕ್ಷಣೆ ಮಾಡಿದ ಸಚಿವ ಎಚ್ ಕೆ ಪಾಟೀಲ್
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 30, 2023 | 9:39 PM

Share

ಗದಗ: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿ 6-9 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ್ (H K Patil)​ ಹೇಳಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿರುವ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಸಚಿವ ಎಚ್ ಕೆ ಪಾಟೀಲ್ ಅವಧಿಯಲ್ಲೇ ಚಾಲನೆಯಾಗಿದ್ದ ಸ್ಮಾರಕ ಭವನಕ್ಕೆ ಈಗ ಮತ್ತೆ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಇಂದು ಸ್ಮಾರಕ ಭವನದ ಕಾಮಗಾರಿ ಪರಿಶೀಲನೆ ಮಾಡಿ ಅವ್ಯವಸ್ಥೆ, ಕಾಮಗಾರಿ ವಿಳಂಬ ಬಗ್ಗೆ ಅಸಮಾಧನ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸುತ್ತಾ ಸ್ಮಾರಕ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ 5 ಕೋಟಿ ಅನುದಾನ ಒದಗಿಸಲಾಗಿತ್ತು. ಅದರಂತೆ ಕಾಮಗಾರಿ ಆರಂಭಿಸಿ ನೀಡಿದ ಅನುದಾನವನ್ನು ಬಳಸಲಾಗಿದೆ. ಹೆಚ್ಚುವರಿಯಾಗಿ 1.25 ಕೋಟಿ ರೂ. ವೆಚ್ಚವನ್ನು ಮಾಡಲಾಗಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ ಹೆಚ್ಚುವರಿಯಾಗಿ 7 ಕೋಟಿಗಳ ಅನುದಾನ ಅಗತ್ಯವಿದೆ ಎಂದರು.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ 2 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ

ಈಗಾಗಲೇ ರಂಗಮಂದಿರದ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರೊಂದಿಗೆ ಸ್ಮಾರಕ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆ ಚರ್ಚಿಸಲಾಗಿದೆ. ಅವರು ಸಹ ಸರ್ಕಾರಾತ್ಮಕವಾಗಿ ಸ್ಪಂದಿಸಿದ್ದು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ ಅನುದಾನ ಪಡೆಯಲಾಗುವುದು ಎಂದು ಹೇಳಿದರು.

ಅನುದಾನ ಬಿಡುಗಡೆಯಾದ ತಕ್ಷಣ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಟೆಂಡರ್ ಕರೆದು ಕಾಮಗಾರಿಯನ್ನು ಮುಂದಿನ 6-9 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಸಹಿಸಲಾಗದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ.

ಆಗಸ್ಟ 15 ರೊಳಗಾಗಿ ಕಾಮಗಾರಿಯನ್ನು ಪುನ: ಆರಂಭಿಸಿ ಪೂರ್ಣಗೊಳಿಸಬೇಕು. ಯೋಜನೆಯಂತೆ ಕಾಮಗಾರಿ ಪೂರ್ಣಗೊಂಡಲ್ಲಿ ಸ್ಮಾರಕ ಭವನದ ಮೇಲ್ಗಡೆಯಿಂದ ವೀಕ್ಷಿಸಿದಾಗ ವೀಣೆಯಾಕಾರದ ಕಟ್ಟಡ ಸ್ವರೂಪ ಸರಿಯಾಗಿ ಗೋಚರಿಸವಂತೆ ಕಟ್ಟಡ ನಿರ್ಮಿಸಬೇಕು ಎಂದರು.

ಇದನ್ನೂ ಓದಿ: ಗದಗ: ವರುಣ ದೇವನನ್ನು ಮೆಚ್ಚಿಸಲು ಗೊಂಬೆಗಳ ಮದುವೆ; ಮಳೆಗಾಗಿ ರೈತರ ಪ್ರಾರ್ಥನೆ

ಪುಟ್ಟರಾಜ ಗವಾಯಿಗಳ ಸ್ಮಾರಕ ಭವನವನ್ನು ಸಿದ್ಧರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಆರಂಭಿಸಲಾಗಿತ್ತು. ಅದರ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಯನ್ನು ಸಹ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಿಂದಲೇ ಮಾಡಲಾಗುವುದು. ಅಭಿವೃದ್ಧಿಯಲ್ಲಿ ಸರ್ಕಾರ ಸದಾ ಮುಂದಿರಲಿದೆ ಎಂದು ತಿಳಿಸಿದರು.

ವಿಳಂಬಕ್ಕೆ ಬಿಜೆಪಿ ಸರ್ಕಾರ ಕಾರಣ

ಕಾಮಗಾರಿ ವಿಳಂಬಕ್ಕೆ ಹಿಂದಿನ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ.‌ ಹೀಗಾಗಿ ಕಾಮಗಾರಿ ವಿಳಂಬಕ್ಕೆ ಕಾರಣ ಅಂತ ಸಚಿವ ಎಚ್ ಕೆ ಪಾಟೀಲ್ ಬಿಜೆಪಿ ನಿರ್ಲಕ್ಷ್ಯ ಬಗ್ಗೆ ಕಿಡಿಕಾರಿದ್ದಾರೆ. ನಮ್ಮ ಸರ್ಕಾರದಲ್ಲಿ ಉದ್ಘಾಟನೆ ಆಗಿದೆ ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಮಗಾರಿ ಬೇಗ ಮುಗಿಸಿ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಶ್ರೀಗಳಾದ ಕಲ್ಲಯ್ಯಜ್ಜನವರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಹಿರೇಮಠ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಎಸ್. ಪಾಟೀಲ್ ಸೇರಿದಂತೆ ಇತರರು ಇದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:38 pm, Fri, 30 June 23