
ಗದಗ, ನವೆಂವರ್ 20: ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಯುವತಿಯರನ್ನ ಬಲೆಗೆ ಬೀಳಿಸಿಕೊಂಡು ಲವ್ ಜಿಹಾದ್ ನಡೆಸಿದ ಆರೋಪಗಳು ರಾಜ್ಯದಲ್ಲಿ ಮೇಲಿಂದ ಮೇಲೆ ಕೇಳಿಬರುತ್ತಲೇ ಇರುತ್ತವೆ. ಹಿಂದೂ ಸಂಘಟನೆಗಳು ಈ ಬಗ್ಗೆ ಬಹಳ ಸಮಯದಿಂದ ಧ್ವನಿ ಎತ್ತುತ್ತಿವೆ. ಈ ನಡುವೆ ಹಿಂದೂ ಯುವಕನನ್ನು ತಲೆಕೆಡಿಸಿ ಇಸ್ಲಾಂಗೆ ಮತಾಂತರ ಮಾಡಿರುವ ಆರೋಪ ಗದಗದಲ್ಲಿ ಕೇಳಿಬಂದಿದೆ. ಆ ಮೂಲಕ ಹಿಂದೂ ಹುಡುಗಿಯರ ಬಳಿಕ ಯುವಕರೂ ಈಗ ಟಾರ್ಗೆಟ್ ಆದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಗವಿಸಿದ್ದಪ್ಪ ಅಲಿಯಾಸ್ ವಿನಾಯಕ ಗಣದಿನ್ನಿ ಎಂಬ 17 ವರ್ಷದ ಯುವಕನನ್ನು ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿದೆ ಎಂದು ಆತನ ಹೆತ್ತವರೇ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ ಸೋಹೆಲ್ ಮತ್ತು ಗಲ್ಲು ಎಂಬವರ ವಿರುದ್ಧ ಆರೋಪ ಕೇಳಿಬಂದಿದ್ದು, ಅವರ ಟೀ ಸ್ಟಾಲ್ಗೆ ಗವಿಸಿದ್ದಪ್ಪ ನಿತ್ಯ ಟೀ ಕುಡಿಯಲೆಂದು ತೆರಳುತ್ತಿದ್ದ. ಆ ವೇಳೆ ಸೋಹೆಲ್ ಮತ್ತು ಗಲ್ಲು ತಮ್ಮ ಮಗನ ತಲೆ ಕೆಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಗೋಕರ್ಣದಲ್ಲಿ ಮತಾಂತರ ಶಂಕೆ; ಬಡವರು, ರೋಗ ಪಿಡಿತರೇ ಟಾರ್ಗೆಟ್!
ಒಂದೂವರೆ ತಿಂಗಳಿಂದ ಲಕ್ಷ್ಮೇಶ್ವರ ಪಟ್ಟಣದಿಂದ ಯುವಕ ನಾಪತ್ತೆಯಾಗಿದ್ದು, ಕೈ ತುತ್ತು ತಿನ್ನಿಸಿ ಬೆಳೆಸಿದ ಮಗನ ವರ್ತನೆಯಿಂದ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಓದಿನಲ್ಲೂ ಮುಂದಿದ್ದ ಮಗ ಇತ್ತೀಚೆಗೆ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಈ ವಿಚಾರವನ್ನು ಆತನ ಬಳಿ ಪ್ರಶ್ನಿಸಿದರೆ ಉತ್ತರ ಸಿಗದ ಕಾರಣ, ಮಗನಿಗೆ ಏನಾಗಿದೆ ಎಂದು ಯೋಚಿಸುತ್ತಿದ್ದ ಪೋಷಕರಿಗೆ ಆತ ಸೋಹೆಲ್ ಮತ್ತು ಗಲ್ಲು ನಡೆಸುತ್ತಿದ್ದ ಟೀ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಾಗಿದೆ. ಆ ವೇಳೆ ಅಂಗಡಿಯವರ ಜೊತೆ ಜಗಳವಾಡಿ ಮಗನನ್ನು ಕರೆತಂದಿದ್ದೆವು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಆತ ಎಲ್ಲಿದ್ದಾನೆ ಎಂಬುದೇ ನಮಗೆ ಗೊತ್ತಿಲ್ಲ ಎಂಬುದು ಹೆತ್ತವರ ಅಳಲು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:20 am, Thu, 20 November 25