ಗದಗ, ಮಾರ್ಚ್.06: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ (Health Department) ಭಾರಿ ಹಗರಣ ನಡೆದಿರುವುದು ಬಯಲಾಗಿದೆ. ಕಮಿಷನ್ಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ನಡುವೆ ಗುದ್ದಾಟ ಶುರುವಾಗಿರುವ ಆರೋಪ ಕೇಳಿ ಬಂದಿದೆ. ಈಗಿನ ಡಿಹೆಚ್ಓ ಡಾ. ಎಸ್.ಎಸ್. ನಿಲಗುಂದ ಹಾಗೂ ಹಿಂದಿನ ಡಿಹೆಚ್ಓ ಡಾ. ಜಗದೀಶ್ ನುಚ್ಚಿನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 2023ರ ವಿಧಾನ ಸಭೆ ಚುನಾವಣೆಯ ಮೆಡಿಕಲ್ ಕಿಟ್ (Medical Kit) ಖರೀದಿಯಲ್ಲಿ ಹಗರಣ ನಡೆದಿದ್ದು ಆರೋಗ್ಯ ಇಲಾಖೆಯ FDC ಆಗಿರುವ ಹೇಮನಗೌಡ ಪಾಟೀಲ ಅವರಿಂದಲೇ ಹಗರಣ ಬಯಲಾಗಿದೆ. ಈ ಸಂಬಂಧ DHO V/S FDC ನಡುವೆ ಲೆಟರ್ ಫೈಟ್ ಶುರುವಾಗಿದೆ.
DHOಗಳ ವಿರುದ್ಧ FDCಯಿಂದ ಭ್ರಷ್ಟಾಚಾರ ಹಾಗೂ ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಒಬ್ಬರಿಗೊಬ್ಬರ ಮೇಲೆ ಭ್ರಷ್ಟಾಚಾರದ ಬಗ್ಗೆ ಆರೋಪಿಸಿ ದೂರು ಸಲ್ಲಿಸಿದ್ದಾರೆ. ಗದಗ ಡಿಹೆಚ್ಓ ಡಾ ಎಸ್.ಎಸ್.ನಿಲಗುಂದ ಹಾಗೂ ಹಿಂದಿನ DHO ಜಗದೀಶ್ ನುಚ್ಚಿನ್ ವಿರುದ್ಧ ಹಗ್ಗಜಗ್ಗಾಟ ನಡೆಯುತ್ತಿದೆ. ಹಲವು ಆರೋಪಗಳನ್ನ ಮಾಡಿ ರಾಜ್ಯಪಾಲರಿಗೆ, ಆರೋಗ್ಯ ಇಲಾಖೆ ಕಾರ್ಯದರ್ಶಿ, ಗದಗ ಡಿಸಿ ಹಾಗೂ ಲೋಕಾಯುಕ್ತರಿಗೆ ಎಫ್ಡಿಸಿ ಹೇಮನಗೌಡ ಪಾಟೀಲರು ದೂರು ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿ ಬಂದಿದೆ. NHM, ARS, ABRK ಹಾಗೂ ಚುನಾವಣೆ ಔಷಧಿ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಚುನಾವಣಾ ಕಿಟ್ ಖರೀದಿಯಲ್ಲಿ 25 ಲಕ್ಷಕ್ಕೂ ಅಧಿಕ ಮೊತ್ತದ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಸಮಗ್ರವಾಗಿ ತನಿಖೆ ನಡೆಸಿ ಡಿಹೆಚ್ಓ ಡಾ. ಎಸ್ ಎಸ್ ನೀಲಗುಂದ ಹಾಗೂ ಹಿಂದಿನ ಡಿಎಚ್ ಓ ಡಾ.ಜಗದೀಶ್ ನುಚ್ಚಿನ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಎಫ್ಡಿಸಿ ಹೇಮನಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಂತೆ ಕಂತೆ ಹಣ ತೋರಿಸಿ, ಹಣ ಡಬಲ್ ಮಾಡುವ ಆಸೆ ಹುಟ್ಟಿಸಿ ವಂಚನೆ ಮಾಡ್ತಿದ್ದವ ಅರೆಸ್ಟ್
ಚುನಾವಣೆ ಕಿಟ್ ಕಮಿಷನ್ ವಿಚಾರಕ್ಕೆ ಹಾಲಿ, ಮಾಜಿ ಡಿಎಚ್ಓ ಗಳು ಜಗಳವಾಡಿದ್ದಾರೆ. ಈ ಹಗರಣ ನಾನೇ ಎಲ್ಲರಿಗೂ ಹೇಳಿದ್ದೇನೆ ಅಂತ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾನೂ ಏನೇ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ. ಡಿಎಚ್ಓಗಳು ಹಗರಣ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಬಾರಿ ಆರೋಗ್ಯ ಇಲಾಖೆ ಮೇಲೆ ಎಸಿಬಿ ದಾಳಿಯಾಗಿದೆ. ಇಲಾಖೆ ಮಾನ ಹರಾಜು ಮಾಡಿದ್ದು ಅಧಿಕಾರಿಗಳು. ಹೀಗಾಗಿ ಸರ್ಕಾರ ಹಗರಣಗಳ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.
ಇತ್ತ FDC ಹೇಮನಗೌಡನ ವಿರುದ್ಧವೂ ಡಿಸಿ ಹಾಗೂ ಸಚಿವರಿಗೆ ಡಿಹೆಚ್ಓ ಪ್ರತಿದೂರು ನೀಡಿದ್ದಾರೆ. ಜಿಲ್ಲಾ ವೈದ್ಯಕೀಯ ಸಂಘದಿಂದಲೂ FDC ಹೇಮನಗೌಡ ಪಾಟೀಲರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗಿದೆ. ಹೇಮನಗೌಡ ಪಾಟೀಲ್ ಬ್ಲಾಕ್ ಮೇಲರ್ ಆಗಿದ್ದಾರೆ. 25 ವರ್ಷಗಳಿಂದ ಗದಗನ ಡಿಹೆಚ್ಓ ಕಚೇರಿಯ ಬಜೆಟ್ ವಿಭಾಗವೊಂದರಲ್ಲೇ ಸೇವೆ ಮಾಡ್ತಿದ್ದಾರೆ. ಹಿಂದಿನ ಹಾಗೂ ಈಗಿನ ಡಿಹೆಚ್ಓ ಗಳಿಗೆ ಬ್ಲಾಕ್ ಮೇಲ್ ತಂತ್ರ ಅನುಸರಿಸಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದ್ದಾನೆ. ಹೀಗೆ ಹಲವು ಆರೋಪಗಳನ್ನ ಮಾಡಿ ಹೇಮನಗೌಡರನ್ನ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲು ಡಿಹೆಚ್ಓಗಳು ದೂರು ನೀಡಿದ್ದಾರೆ. ವೈದ್ಯಕೀಯ ಸಂಘದ ಮೂಲಕ ಸಚಿವ ಹೆಚ್.ಕೆ.ಪಾಟೀಲ್ ಗೆ ದೂರು ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ