ಗದಗ, ಜೂ.07: ವಾಟ್ಸಪ್ ಗ್ರೂಪ್‌ಗೆ ಬಂದ ಮೆಸೇಜ್ವೊಂದನ್ನು ಓಪನ್ ಮಾಡಿ ನೋಡಿದ್ದಕ್ಕೆ ಬ್ಯಾಂಕ್ ಖಾತೆಯಲ್ಲಿದ್ದ ಮೂರುವರೆ ಲಕ್ಷ ಹಣ ಮಾಯವಾಗಿರುವ ಘಟನೆ ಗದಗ(Gadag) ನಗರದ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಣ ಶಾಸಕ ಜಿಎಸ್ ಪಾಟೀಲ್ ಲೇಔಟ್‌ನಲ್ಲಿ ವಾಸವಾಗಿರುವ ಅನಿಲ್ ಮಲ್ಲಪ್ಪ ಚಿನ್ನಾಪುರ ಎಂಬ ವ್ಯಾಪಾರಿಯೊಬ್ಬರಿಗೆ ಮೊದಲು ವಾಟ್ಸಪ್ ಗ್ರೂಪ್ನಲ್ಲಿ ಯುನಿಯನ್ ಬ್ಯಾಂಕ್ ಹೆಸರಿನಲ್ಲಿ APK ಲಿಂಕ್ ಮೆಸೇಜ್ ಬಂದಿದೆ. ಅದನ್ನು ಒಂದು ಬಾರಿ ಅನಿಲ್ ನೋಡಿಬಿಟ್ಟಿದ್ದರು.
ಮರುದಿನವೇ ಯುನಿಯನ್ ಬ್ಯಾಂಕ್ ಹೆಡ್ ಎಂದು ಅನಿಲ್ಗೆ ಓರ್ವ ಫೋನ್ ಕರೆ ಮಾಡಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಖಾತೆ ಡಿವ್ ಆಗಿದೆ ಎಂದು ಕೆಲವು ನಿಮಿಷಗಳ ಮಾತುಕತೆ ನಡೆಸಿದ್ದಾರೆ. ನಂತರ ಅರ್ಧಗಂಟೆಯಲ್ಲಿ ಮೊದಲ ಹಂತದಲ್ಲಿ 50 ಸಾವಿರ, 2ನೇ ಹಂತದಲ್ಲಿ 2,25,000 ಹೀಗೆ ಒಟ್ಟು 3,74,998 ರೂಪಾಯಿಯನ್ನು ವಂಚಕರು ಅವರ ಬ್ಯಾಂಕ್ ಖಾತೆಯಿಂದ ಎಗರಿಸಿದ್ದಾರೆ. ಇದರಿಂದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮುಂದಾದಾಗ ತಾಂತ್ರಿಕ ತೊಂದರೆ ಅನುಭವಿಸಿ, ತಡವಾಗಿ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:Cyber Crime: ಸೈಬರ್ ವಂಚನೆಯಲ್ಲಿ 2 ಕೋಟಿ ರೂ. ಕಳೆದುಕೊಂಡ ಕಾಫಿ ಬೆಳಗಾರ
ಈ ಕುರಿತು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅನಿಲ್ ಅವರ ಖಾತೆಯಿಂದ ಎಗರಿಸಿದ ಮೊತ್ತ, ತಮಿಳುನಾಡು ಹಾಗೂ ಬಾಂಗ್ಲಾದೇಶದಲ್ಲಿರುವ ಖಾತೆಗಳಿಗೆ ಜಮೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಾಗರಿಕರು ಪದೇ ಪದೇ ಸೈಬರ್ ವಂಚನೆಗಳಿಗೆ ಮೋಸ ಹೋಗಿ, ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆ ಇದ್ದರೂ ಹಣ ಕಳೆದುಕೊಂಡವರಿಗೆ ನೋ ಯೂಸ್ ಎಂಬಂತಾಗಿದೆ. ಸಧ್ಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Fri, 7 June 24