ಗದಗ, ಸೆ.25: ಈ ಬಾರಿ ಗದಗ ಜಿಲ್ಲೆಯ ಮುಂಡರಗಿ(Mundaragi) ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ವೈಭವಪೂರಿತವಾಗಿ ಶ್ರೀಗಳ ಜಯಂತೋತ್ಸವ ಕಾರ್ಯಕ್ರಮ ನೆರವೇರಿತು. ಕಳೆದ ಹತ್ತು ದಿನಗಳಿಂದ ನಾಡಿನ ನೂರಾರು ಮಠಾಧೀಶರು ಪ್ರತಿದಿನ ವಾರ್ಡಗಳಲ್ಲಿ ಮತ್ತು ತಾಲೂಕಿನ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಕೈಗೊಂಡರು. ಈ ವೇಳೆ ದುಶ್ಚಟಗಳಿಗೆ ದಾಸರಾದ ಯುವಕವರಿಗೆ, ಸದ್ಗುಣಗಳ ದೀಕ್ಷೆ, ದುಷ್ಚಟಗಳ ಭಿಕ್ಷೆ ಎನ್ನುವ ಜೋಳಿಗೆ ಹಿಡಿದು ವ್ಯಸನಮುಕ್ತ ಸಮಾಜದ ಜಾಗೃತಿ ಮೂಡಿಸಿ, ರುದ್ರಾಕ್ಷಿ ಧಾರಣೆಗೈದು, ಅವರಲ್ಲಿ ಧಾರ್ಮಿಕ ಅರಿವನ್ನ ಮೂಡಿಸಿದರು. ನಂತರ ಶ್ರೀಮಠದಲ್ಲಿ ಪ್ರತಿದಿನ ರಾತ್ರಿ ವೇಳೆ ಕುಮಾರೇಶ್ವರರ ಜೀವನ ದರ್ಶನ ಪ್ರವಚನದ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶಿವಯೋಗಮಂದಿರ ಸಂಸ್ಥೆ ಬೆಳೆದು ಬಂದ ಹಾದಿಯನ್ನ, ಪ್ರವಚನದ ಮೂಲಕ ಜನರಲ್ಲಿ ತಿಳಿಸಲಾಯಿತು ಎಂದು ಅನ್ನದಾನೀಶ್ವರ ಸಂಸ್ಥಾನಮಠ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ತಿಳಿಸಿದ್ದಾರೆ.
ಇನ್ನು ಕೊನೆಯ ದಿನವಾದ ಇಂದು ಅದ್ಧೂರಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕುಮಾರೇಶ್ವರರ ಜ್ಯೋತಿರಥಯಾತ್ರೆ ಹಾಗೂ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಗೆ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಚಾಲನೆ ನೀಡಿದರು. ಸುಮಂಗಲೆಯರ ಪೂರ್ಣಕುಂಭ, ಶರಣರ ವಚನ ಕಟ್ಟುಗಳ ಮೆರವಣಿಗೆ, ಕರಡಿ ಮಜಲು, ಚಂಡಿ ವಾದ್ಯ, ಸಮ್ಮೇಳ, ವೀರಗಾಸೆ, ಜಾಂಜ್ ಮೇಳ, ಭಜನಾ ಸಂಘಗಳು, ಗೊಂಬೆ ಕುಣಿತ ಮೆರವಣಿಗೆಗೆ ಸಾಕಷ್ಟು ಮೆರಗು ನೀಡಿದವು. ಮೆರವಣಿಗೆಯಲ್ಲಿ ನಾಡಿನ ನೂರಾರು ಮಠಾಧೀಶರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಶೃಂಗೇರಿ ಜಗದ್ಗುರುಗಳು ಸನ್ಯಾಸ ಸ್ವೀಕರಿಸಿ 50 ವರ್ಷ: ಅ.26 ರಂದು ಬೆಂಗಳೂರಿನಲ್ಲಿ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ
ಮುಸ್ಲಿಂ ಸಮುದಾಯ ಸೇರಿದಂತೆ ಸರ್ವ ಧರ್ಮದವರೂ ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು. ನಂತರ ನಡೆದ ವೇದಿಕೆ ಸಮಾರಂಭದಲ್ಲಿ, ಮುಂಡರಗಿ ಅನ್ನದಾನ ಶ್ರೀಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗಳು, ಗದಗನ ತೋಂಟದಾರ್ಯ ಮಠದ ಶ್ರೀ ಗಳು ಸೇರಿದಂತೆ ಅನೇಕ ಪೂಜ್ಯರು ಮತ್ತು ಗಣ್ಯರು ಭಾಗವಹಿಸಿದ್ದರು. ಇನ್ನು ಮುಂಡರಗಿ ತಾಲೂಕಿನ ಜನತೆಗೆ ಕುಮಾರೇಶ್ವರರ ಜಯಂತ್ಯೋತ್ಸವವು ನಾಡಹಬ್ಬವಾಗಿ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟನ್ನ ಹೆಚ್ಚಿಸಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್.ಎಲ್.ಪೊಲೀಸ್ ಪಾಟೀಲ್ ಹೇಳಿದರು.
ನಾಡಿನ ಮಠಗಳಿಗೆ ಸ್ವಾಮಿಜಿಗಳನ್ನ ನೀಡಿದ ಕೀರ್ತಿ ಹಾನಗಲ್ಲ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ. ಅಂತಹ ಯೋಗಿಯ ನೆನಪಿನಲ್ಲಿ, ಯುವ ಮಠಾಧೀಶರನ್ನೊಳಗೊಂಡ ಕುಮಾರೇಶ್ವರ ಜಯಂತಿ ಸಮಿತಿ, ಪ್ರತಿ ವರುಷ ಒಂದೊಂದು ಜಿಲ್ಲೆಯ ಜನರಲ್ಲಿ ಧಾರ್ಮಿಕತೆ, ಹಾಗೂ ನಾಡಿನ ಸಂಸ್ಕೃತಿ ಅರಿವನ್ನ ಮೂಡಿಸುತ್ತಿದೆ. ವಿಶೇಷವಾಗಿ ಇಂದಿನ ಯುವಕರಲ್ಲಿ ವ್ಯಸನಮುಕ್ತ ಸಮಾಜ ಕಟ್ಟುವ ಸಂಕಲ್ಪದೊಂದಿಗೆ ಸಧೃಡ ಸಮಾಜ ನಿರ್ಮಿಸಲು ಹೊರಟಿದ್ದು, ನಿಜಕ್ಕೂ ಶ್ಲಾಘನೀಯವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Wed, 25 September 24