ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯಡವಟ್ಟು; ಸ್ವಾಮೀಜಿಗಳಿಗೆ ಅವಮಾನ

| Updated By: ಆಯೇಷಾ ಬಾನು

Updated on: Mar 30, 2022 | 10:00 PM

ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರಿಗೆ ಅವಮಾನಿಸಿದ ಘಟನೆಯೂ ನಡೆದಿದೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ವಿವಿ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ಬಂದಿದ್ದ ಶ್ರೀಗಳನ್ನ ಕಾರ್ಯಕ್ರಮದೊಳಗೆ ಬಿಡದೇ ವಾಪಸ್ ಕಳಿಸುವ ಮೂಲಕ ಅವಮಾನಿಸಿದ್ದಾರಂತೆ‌.

ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯಡವಟ್ಟು; ಸ್ವಾಮೀಜಿಗಳಿಗೆ ಅವಮಾನ
ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಘಟಿಕೋತ್ಸವ
Follow us on

ಗದಗ: ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ‌ ಇಂದು 2 ಘಟಿಕೋತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಗ್ರಾಮೀಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವ್ರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಮೂರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಆದ್ರೆ ಈ ಎಲ್ಲಾ ಸಂಭ್ರಮದ ನಡುವೆ ಇತ್ತ ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆಯೊಂದು ಕೂತುಬಿಟ್ಟಿದೆ. ಸಿಬ್ಬಂದಿ ಮಾಡಿರೋ ಯಡವಟ್ಟು ಕುಲಪತಿಗಳು ಕ್ಷಮೆ ಕೇಳುವಂತಾಗಿದೆ.

ಕಾರ್ಯಕ್ರಮದಲ್ಲಿ ನಿವೃತ್ತ ಐಎಸ್ ಅಧಿಕಾರಿ ಡಾ ಎಸ್ಎಸ್ ಮೀನಾಕ್ಷಿ ಸುಂದರಂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸೀತವ್ವ ಜೋಡಟ್ಟಿ ಅವ್ರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನೀಡಿದ್ರು. ಇನ್ನು ಇದೇ ವೇಳೆ 10 ಜನ ರ್ಯಾಂಕ್ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಯಿತು. ಜೊತೆಗೆ 139 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಿ ಗೌರವಿಸಲಾಯಿತು. ಜೊತೆಗೆ ಇಡೀ ವಿಶ್ವವಿದ್ಯಾಲಯ ಇಂದು ಹಳ್ಳಿ ಸೊಗಡಿನ ವಾತಾವರಣದಲ್ಲಿ ಮಿಂದೆದ್ದಿತ್ತು. ಒಂದು ಕಡೆ ಹಸಿರು ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ವಿದ್ಯಾರ್ಥಿಗಳು, ಪ್ರೊಫೆಸರ್ಸ್ ಎಲ್ಲರೂ ಖಾದಿಬಟ್ಟೆ ತೊಟ್ಟು ಫುಲ್ ಮಿಂಚಿದ್ರು. ಪದವಿ ಪ್ರಧಾನದ ಬಳಿಕ ಮಾತನಾಡಿದ ರಾಜ್ಯಪಾಲರು, ಯುವ ಸಮುದಾಯ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ಏಕ ಭಾರತ ಶ್ರೇಷ್ಠ ಭಾರತ ನಿರ್ಮಿಸುವ ಗುರಿ ನಾವು ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ. ಸ್ವಾಮಿ ವಿವೇಕಾನಂದರ ಕನಸಿನಂತೆ ಸೂಕ್ತ ಅವಕಾಶಗಳು ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರತವು ಸದೃಢವಾಗುವುದರ ಜೊತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ರಾಜ್ಯಪಾಲರು ವಿಶ್ವವಿದ್ಯಾಲಯದ ಆವರಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸ್ ಬ್ಯಾಂಡ್ ಮೂಲಕ ಘಟಿಕೋತ್ಸವದ ವೇದಿಕೆ ವರೆಗೆ ಮೆರವಣಿಗೆ ಮೂಲಕ ಕರೆದ್ಯೊಯಲಾಯಿತು. ಇನ್ನು ಇಷ್ಟೆಲ್ಲ ಸಂಭ್ರಮದ ನಡುವೆ ಸಿಬ್ಬಂದಿ ಯಡವಟ್ಟು ಮಾಡಿ ವಿವಿಗೆ ಕಪ್ಪುಚುಕ್ಕೆ ತಂದಿಟ್ಟಿದ್ದಾರೆ. ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರಿಗೆ ಅವಮಾನಿಸಿದ ಘಟನೆಯೂ ನಡೆದಿದೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ವಿವಿ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ಬಂದಿದ್ದ ಶ್ರೀಗಳನ್ನ ಕಾರ್ಯಕ್ರಮದೊಳಗೆ ಬಿಡದೇ ವಾಪಸ್ ಕಳಿಸುವ ಮೂಲಕ ಅವಮಾನಿಸಿದ್ದಾರಂತೆ‌. ಇದರಿಂದ ವಿಚಲಿತರಾದ ಸ್ವಾಮೀಜಿ ಕಲ್ಲಯ್ಯಜ್ಜನವರು ಮರಳಿ ಆಶ್ರಮಕ್ಕೆ ಬಂದಿದ್ದಾರೆ. ಇನ್ನು ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿರೋ ಸ್ವಾಮೀಜಿಗಳು ವಿವಿಯ ಸಿಬ್ಬಂದಿ ಮಾಡಿರೋ ಯಡವಟ್ಟನ್ನು ಕ್ಷಮಿಸಿದ್ದಾರೆ. ನನ್ನ ಕೆಲಸ ಬಹಳಷ್ಟು ಇದ್ದಿದ್ದರಿಂದ ನಾನೇ ಮರಳಿ ಬಂದಿದ್ದೇನೆ ಅಂತ ವಿವಿ ಸಿಬ್ಬಂದಿ ಯಡವಟ್ಟು ಮುಚ್ಚಿಕೊಂಡಿದ್ದಾರೆ. ಆದ್ರೆ ವಿವಿಯ ಕುಲಪತಿ ವಿಷ್ಣುಕಾಂತ ಚಟಪಲ್ಲಿಯವರು ಇದೊಂದು ಪ್ರಮಾದ ಆಗಬಾರದಿತ್ತು. ನಾನೇ ಸ್ವಾಮೀಜಿಗಳನ್ನ ಭೇಟಿ ಮಾಡಿ ಕ್ಷಮೆ ಕೇಳ್ತೇನೆ ಅಂತ ಆಗಿರೋ ತಪ್ಪನ್ನ ಒಪ್ಪಿಕೊಂಡಿದ್ದಾರೆ.

ಇನ್ನು ಕಾರ್ಯಕ್ರಮದ ಬಳಿಕ ರಾಜ್ಯಪಾಲರು ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದರು. ತಮ್ಮ ಬ್ಯೂಸಿ ಸೆಡ್ಯೂಲ್ ನಡುವೆಯೂ ವೀರೇಶ್ವರ ಪುಣ್ಯಾಶ್ರಮದಲ್ಲಿ 10 ನಿಮಿಷ ಶಾಂತಚಿತ್ತದಿಂದ ಸಂಗೀತ ಆಲಿಸಿದ್ರು. ಮಠದ ಪೀಠಾಧಿಪತಿಗಳಿ ರಾಜ್ಯಪಾಲರಿಗೆ ಸನ್ಮಾನಿಸಿ ಆಶೀರ್ವದಿಸಿದ್ರು. ಜೊತೆಗೆ ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನಕ್ಕೂ ಭೇಟಿ ನೀಡಿ ಭಕ್ತಿಗೆ ಪಾತ್ರರಾದರು.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: Shahbaz Sharif ಇಮ್ರಾನ್ ಖಾನ್ ರಾಜೀನಾಮೆ ನೀಡಿದ ನಂತರ ಪಾಕ್ ಪ್ರಧಾನಿಯಾಗಲಿರುವ ಶಹಬಾಜ್ ಷರೀಫ್ ಯಾರು? ಇಲ್ಲಿದೆ ಪರಿಚಯ