ಗದಗದಲ್ಲಿ ತಯಾರಾಗುವ ಶಿಗ್ಲಿ ಸೀರೆಗೆ ಮಾರು ಹೋದ ಮಹಿಳೆಯರು; ಬೇಸಿಗೆಗೆ ಹೇಳಿ ಮಾಡಿಸಿದ ಕಾಟನ್ ಸೀರೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಸೀರೆಗಳು ವಿಶೇಷವಾಗಿದ್ದು, ಬೇಸಿಗೆಯಲ್ಲಿ ಭಾರಿ ಬೇಡಿಕೆ ಇದೆ. ಇಲ್ಲಿ ತಯಾರಾಗುವ ಸೀರೆ ಶೇಕಡಾ ನೂರರಷ್ಟು ಕಾಟನ್ ಆಗಿದ್ದು, ಹೀಗಾಗಿ ಈ ಸೀರೆಗಳು ಬೇಸಿಗೆಯಲ್ಲಿ ತೊಟ್ಟರೆ ಹೆಚ್ಚು ತಂಪಾಗಿರುತ್ತದೆ.

  • ಸಂಜೀವ ಪಾಂಡ್ರೆ
  • Published On - 12:41 PM, 13 Apr 2021
ಗದಗದಲ್ಲಿ ತಯಾರಾಗುವ ಶಿಗ್ಲಿ ಸೀರೆಗೆ ಮಾರು ಹೋದ ಮಹಿಳೆಯರು; ಬೇಸಿಗೆಗೆ ಹೇಳಿ ಮಾಡಿಸಿದ ಕಾಟನ್ ಸೀರೆ
ಸೀರೆಯನ್ನು ತಯಾರಿಸುತ್ತಿರುವ ದೃಶ್ಯ

ಗದಗ: ಮಹಿಳೆಯರಿಗೆ ಸೀರೆ ಎಂದರೆ ಬಲು ಇಷ್ಟ. ಹೆಣ್ಣು ಸೀರೆ ಉಟ್ಟರೆ ಚೆಂದ ಎನ್ನುವ ಮಾತಿದೆ. ಅದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ. ಅದರಲ್ಲೂ ರೇಷ್ಮೆ ಸೀರೆ, ಸಿಲ್ಕ್ ಸೀರೆ ಎಂದು ಸಾಕಷ್ಟು ವೈವಿಧ್ಯತೆ ಕೂಡ ಇದೆ. ಆದರೆ ಬೇಸಿಗೆ ಬಂದರೆ ಸಾಕು ಬೇರೆ ಸೀರೆಗಳಿಗಿಂತ ಮಹಿಳೆಯರು ಶಿಗ್ಲಿ ಸೀರೆ್ಳನ್ನು ಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಕಾರಣ ಈ ಸೀರೆಗಳು ಬೇಸಿಗೆಗಾಲಕ್ಕೆ ಹೇಳಿ ಮಾಡಿಸಿದ ಸೀರೆಗಳು. ಹೀಗಾಗಿ ರಾಜ್ಯದಲ್ಲಿ ಮಾತ್ರವಲ್ಲ ಹೊರರಾಜ್ಯದಲ್ಲೂ ಈ ಸೀರೆಗಳಿಗೆ ಭಾರಿ ಬೇಡಿಕೆ ಇದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಸೀರೆಗಳು ವಿಶೇಷವಾಗಿದ್ದು, ಬೇಸಿಗೆಯಲ್ಲಿ ಭಾರಿ ಬೇಡಿಕೆ ಇದೆ. ಇಲ್ಲಿ ತಯಾರಾಗುವ ಸೀರೆ ಶೇಕಡಾ ನೂರರಷ್ಟು ಕಾಟನ್ ಸೀರೆಗಳು. ಹೀಗಾಗಿ ಈ ಸೀರೆಗಳು ಬೇಸಿಗೆಯಲ್ಲಿ ತೊಟ್ಟರೆ ಹೆಚ್ಚು ತಂಪಾಗಿರುತ್ತದೆ. ಜಕಾರ್ಡ್​ ಸಾರಿ, ಸಾದಾ ಸಾರಿ, ಖಣದ ಸೀರೆ ಹೀಗಾಗಿ ಹಲವಾರು ನಮೂನೆಯ ಸೀರೆಗಳು ಶಿಗ್ಲಿ ಗ್ರಾಮದಲ್ಲಿ ತಯಾರು ಮಾಡಲಾಗುತ್ತದೆ.

ಪಕ್ಕಾ ದೇಶಿಯ ಸೀರೆ ಇದಾಗಿದ್ದು, ಯಾವುದೇ ಕೆಮಿಕಲ್ ಬಳಸುವುದಿಲ್ಲ. ಸೀರೆ ಬಾರ್ಡರ್​ಗಳಿಗೆ ಮಾತ್ರ ಸ್ವಲ್ಪ ರೇಶ್ಮೆ ಬಳಸಲಾಗುತ್ತದೆ. ಉಟ್ಟರೆ ಹಗುರವೆನಿಸುತ್ತದೆ. ಹೀಗಾಗಿ ಬೇಸಿಗೆ ಬಂದರೆ ಶಿಗ್ಲಿ ಸೀರೆಯೇ ಹೆಚ್ಚು ಖರೀದಿ ಮಾಡುತ್ತೇವೆ ಎಂದು ಗ್ರಾಹಕರಾದ ಶೈಲಾ ಹೇಳಿದ್ದಾರೆ.

ಶಿಗ್ಲಿ ಗ್ರಾಮ ನೇಕಾರಿಕೆಗೆ ಹೆಸರುವಾಸಿಯಾಗಿದ್ದು, ಶಿಗ್ಲಿ ಗ್ರಾಮವೊಂದರಲ್ಲೇ 800 ಮಗ್ಗಗಳು ಇವೆ. ಹೀಗಾಗಿ 800 ಕುಟುಂಬಗಳು ಈ ಸೀರೆ ಉದ್ಯಮಕ್ಕೆ ಅವಲಂಬನೆಯಾಗಿವೆ. ಇಲ್ಲಿ ಪ್ರತಿನಿತ್ಯ ಸುಮಾರು 3,000 ಸೀರೆಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ. ಹೋಲ್ ಸೇಲ್ ದರಲ್ಲಿ 550 ರಿಂದ 1500 ವರೆಗೆ ಹಲವು ನಮೂನೆಯ ಸೀರೆಗಳು ಇಲ್ಲಿ ದೊರೆಯುತ್ತವೆ. ಆದರೆ ಮಾರುಕಟ್ಟೆಯಲ್ಲಿ ಇದೇ ಸೀರೆಗಳನ್ನು ಎರಡು ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ.

saree

ಕಾಟನ್ ಸೀರೆ ತಯಾರಿಕೆ

ಶಿಗ್ಲಿ ಗ್ರಾಮದಲ್ಲಿ ತಯಾರಾಗುವ ಸೀರೆಗಳನ್ನು ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಹಾಸನ ಸೇರಿ ಬಹುತೇಕ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ ಹಾಗೂ ಹೈದ್ರಾಬಾದ್​ಗೂ ಶಿಗ್ಲಿ ಸೀರೆ ಪೂರೈಕೆ ಆಗುತ್ತದೆ. ಇನ್ನು ಮಹಾರಾಷ್ಟ್ರ ಮುಂಬೈ, ಪುಣೆ ನಗರಗಳಲ್ಲಿ ಈ ಸೀರೆಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಕೊರೊನಾ ಹೆಮ್ಮಾರಿ ನೇಕಾರಿಕೆ ಉದ್ಯಮಕ್ಕೂ ಹೊಡೆತ ನೀಡಿದೆ. ಹೀಗಾಗಿ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಸೀರೆ ಮಾಲೀಕ ವಾಸುದೇವ ಹೇಳಿದ್ದಾರೆ.

ಒಟ್ಟಾರೆ ಈ ಶಿಗ್ಲಿ ಸೀರೆಗಳು ಬೇಸಿಗೆಯಲ್ಲಿ ತಂಪಾಗಿದ್ದರೆ. ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಹೀಗಾಗಿಯೇ ಮಹಿಳೆಯರು ಈಗ ಶೇಕಡಾ 100 ಕಾಟನ್ ಆಗರುವ ಶಿಗ್ಲಿ ಸೀರೆಗೆ ಮನಸೋತಿದ್ದಾರೆ. ಆದರೆ ಈ ನೇಕರಾರರ ಬದುಕು ಮಾತ್ರ ಸಂಕಷ್ಟದಲ್ಲಿದೆ. ಕಳೆದ ವರ್ಷ ಸರ್ಕಾರ ನೇಕಾರರ ನೇಯ್ದ ಸೀರೆ ಖರೀದಿ ಮಾಡುವುದಾಗಿ ಭರವಸೆ ನೀಡಿದ್ದು, ಅದನ್ನು ಇವರೆಗೂ ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಸರ್ಕಾರ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ನೇಕಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 

Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ

ಅಮ್ಮಂದಿರಿಗೆ ಹೆಣ್ಣುಮಕ್ಕಳು ಸೀರೆ ಖರೀದಿಸಿ ಕೊಡಬೇಕು.. ಬಳ್ಳಾರಿಯಲ್ಲಿ ಹರಡಿದೆ ಸಖತ್​ ವದಂತಿ

(Ladies rushing to buy summer friendly Shigli Sarees in Gadag)