
ಗದಗ, (ಜನವರಿ 13): ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ (Lakkundi Gold treasure) ಚರ್ಚೆ. ದಿನಬೆಳಗಾದ್ರೆ ನಿಧಿ ನಿಧಿ ಎಂಬ ಮಾತು ಗಲ್ಲಿ ಗಲ್ಲಿಯಲ್ಲೂ ಚರ್ಚೆ ನಡೆಯುತ್ತಿದೆ. ಹೌದು.. ಗದಗದ (Gadag) ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಆದ್ರೆ. ನಿಧಿಯಲ್ಲ, ನಿಧಿ ಅಂತಾ ಅಧಿಕಾರಿಗಳು ಧ್ವಂದ್ವ ಹೇಳಿಕೆ ನೀಡಿದ ಬಳಿಕ ಕುಟುಂಬಕ್ಕೆ ಮತ್ತಷ್ಟು ಗೊಂದಲ ಉಂಟಾಗಿದೆ. ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬ, ಬಳಿಕ ನಿಧಿ ಬೇಡ ನಮಗೆ ಮನೆ ಕೊಡಿ ಎಂದಿತ್ತು. ಆದ್ರೆ ಇದೀಗ ಅರ್ಧ ಕೆ.ಜಿಯಷ್ಟು ಜಿನ್ನ ಸಿಕ್ಕರೂ ಕುಟುಂಬಕ್ಕ ನೆಮ್ಮದಿಯೇ ಇಲ್ಲದಂತಾಗಿದೆ. ಕುಟುಂಬ ಗೊಂದಲಕ್ಕೆ ಸಿಲುಕುವುದಕ್ಕೂ ಕಾರಣವಿದೆ. ಅದೇನಂದ್ರೆ, ಈವರೆಗೂ ಲಕ್ಕುಂಡಿಯಲ್ಲಿ ನಿಧಿ ಸಿಕ್ಕವರಿಗೆ ಒಳ್ಳೆಯದೇ ಆಗಿಲ್ಲ. ಹೀಗಾಗಿ ಕುಟುಂಬ ಆತಂಕಕ್ಕಿಡಾಗಿದೆ. ಲಕ್ಕುಂಡಿ ಗ್ರಾಮದ ಹಿರಿಯರು ಈ ಹಿಂದೆ ನಿಧಿ ಪತ್ತೆ ಬಳಿಕ ಗ್ರಾಮದಲ್ಲಿ ಏನೇಲ್ಲಾ ಆಯ್ತು ಎಂಬ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.
ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾಗಿದ್ದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದೆ. ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್ ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್‌ಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಪಿಯುಸಿ ಓದಿದ ಬಳಿಕ ಪೊಲೀಸ್ ಇಲಾಖೆ ಸೇರ್ತೀನಿ ಎಂದಿರೋ ಪ್ರಜ್ವಲ್, ಪೊಲೀಸ್ ಕಾನ್ಸ್‌ಸ್ಟೇಬಲ್ ಆಗುವ ಕನಸು ಬಿಚ್ವಿಟ್ಟಿದ್ದಾನೆ.
ಸದ್ಯ ನಿಧಿಯನ್ನ ಏನು ಮಾಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡುತ್ತಿದೆ.ಜಾಗ ವಶಕ್ಕೆ ಪುರಾತತ್ವ ಇಲಾಖೆ ಅಭಿಪ್ರಾಯ ಪಡೆದ ಬಳಿಕ ಮುಂದಿನ ನಿರ್ಧಾರವನ್ನ ಜಿಲ್ಲಾಡಳಿತ ಕೈಗೊಳ್ಳಲಿದೆ. ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ.ಬಳಿಕ ಮನೆ ಮಾಲೀಕರಾದ ಕಸ್ತೂರೆವ್ವ ರಿತ್ತಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿರುವ ಎಚ್ಕೆ ಪಾಟೀಲ್, ಲಕ್ಕುಂಡಿ ಗ್ರಾಮದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಲಕ್ಕುಂಡಿಯಲ್ಲಿ ಮಳೆಗಾಲದಲ್ಲಿ ಮುತ್ತು ರತ್ನ ಹವಳಗಳು ಸಿಗುತ್ತವೆ. ಈ ಸ್ಥಳದಲ್ಲಿ ಅನೇಕ ಅದ್ಭುತ ಘಟನೆಗಳು ನಡೆದಿವೆ. ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನ ನಡೆದಿದೆ. 2 ದಿನದ ಹಿಂದೆ 466 ಗ್ರಾಂ ಚಿನ್ನ, 634 ಗ್ರಾಂ ತಾಮ್ರ ತಂಬಿಗೆ ಸಿಕ್ಕಿದೆ. ಲಕ್ಕುಂಡಿಯಲ್ಲಿ ಸಿಕ್ಕಿದ ಚಿನ್ನವನ್ನು ಗದಗ ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ. ಕಾನೂನು ಪ್ರಕಾರ ಈ ನಿಧಿಯನ್ನು ಎಲ್ಲಿ ಇಡಬೇಕೆಂದು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲವೂ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿಮಾರಾಟ ಮಾಡಿದಾಗ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ನೀಡಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ತಮ್ಮ ಮನೆ ಪಾಯಾ ಅಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮರೆದಿರುವ ಕುಟುಂಬಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಮತ್ತೊಂದೆಡೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವ ಭರವಸೆಯಲ್ಲಿ ಕುಟುಂಬ ಇದೆ. ಆದ್ರೆ, ಊರಿನ ಹಿರಿಯ ಮಾತುಗಳಿಂದಾಗಿ ಆತಂಕಗೊಂಡಿರುವ ಕುಟುಂಬಸ್ಥರು, ಯಾಕಾದರೂ ನಿಧಿ ಸಿಕ್ಕಿತೋ ಎನ್ನುವಂತಾಗಿದೆ.