ಗದಗ: ಸರ್ವಧರ್ಮ ಸಮನ್ವಯದ ಸಂಕ್ರಾಂತಿ ಆಚರಣೆ; ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಇಸ್ಲಾಂ ಧರ್ಮದವರಿಂದ ದಾಸೋಹ
ಅಲ್ಲಮ, ಅಲ್ಲಾ ಎಲ್ಲ ಒಂದೇ ಎಂಬ ಮಂತ್ರವನ್ನು ಜಪಿಸಿದ ಸುವರ್ಣ ಕ್ಷಣಕ್ಕೆ ಗದಗನ ಹಾಲಕೆರೆಮಠದಂಗಳ ಸಾಕ್ಷಿಯಾಯಿತು.
ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥ ಬದಲಿಸುವ ಸುಸಮಯದಲ್ಲಿ ಹಾಲಕೆರೆ ಮಠ ಆನಂದಾಶ್ರಮದಲ್ಲಿ ಜರುಗಿದ ಸಾಮರಸ್ಯ ಸಾರುವ ಅಮೋಘ ಪ್ರಸಂಗಕ್ಕೆ ನೆರೆದಿದ್ದ ಸಾವಿರಾರು ಜನರು ಮೂಕವಿಸ್ಮಿತರಾದರು. ಬಸವ ಪುರಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಇಸ್ಲಾಂ ಧರ್ಮದವರು ನಾವೆಲ್ಲರೂ ಒಂದೇ ಎಂಬ ಭಾವನೆ, ಬದ್ಧತೆಯನ್ನು ಅಪ್ಪಿಕೊಂಡರು, ಒಪ್ಪಿಕೊಂಡರು. ಅಲ್ಲದೇ ಸೇರಿದ್ದ ಸಾವಿರಾರು ಸಂಖ್ಯೆಯ ಭಕ್ತಗಣಕ್ಕೆ ದಾಸೋಹ ಸೇವೆಗೈದದ್ದು ಅಚ್ಚರಿ ಮೂಡಿಸಿತು.
ಬಸವ ಪುರಾಣವು ಸಾರ್ಥಕ ಕಂಡ ಗಳಿಗೆ. ಅಲ್ಲಮ, ಅಲ್ಲಾ ಎಲ್ಲಾ ಒಂದೇ ಎಂಬ ಮಂತ್ರವನ್ನು ಜಪಿಸಿದ ಸುವರ್ಣ ಕ್ಷಣಕ್ಕೆ ಹಾಲಕೆರೆಮಠದಂಗಳ ಸಾಕ್ಷಿಯಾಯಿತು. ಹಾಲಕೆರೆ ಮಠದ ಲಿಂ. ಶ್ರೀ ಡಾ. ಅಭಿನವ ಅನ್ನದಾನ ಸ್ವಾಮೀಜಿ ಅವರ ಸಂಕಲ್ಪದಂತೆ ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ತಿಂಗಳು ಪರ್ಯಂತ ಬಸವ ಪುರಾಣ ಸಾರ್ಥಕ ಕಂಡ ಗಳಿಗೆ. ಅಲ್ಲಿ ಮೌನವೇ ಮಾತಾಗಿತ್ತು, ವೇದಿಕೆ ಮೇಲಿದ್ದ ಹರಗುರು ಚರಮೂರ್ತಿಗಳು ತಮ್ಮೊಳಗೆ ಅನುಭವಿಸುತ್ತಿರುವ ಸಂಭ್ರಮ ವರ್ಣಿಸಲಾಗದಷ್ಟು. ನಮಾಜ್ ಮಾಡುವ ಬಾಯಿಂದ ವಚನಗಳ ಮಂತ್ರಾಕ್ಷತೆ ಹೊರಹೊಮ್ಮಿದಾಗಲಂತೂ ಇರುವುದೊಂದೇ ಮನುಷ್ಯ ಜಾತಿ ಎಂಬ ಉದ್ಘೋಷ. ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ” ವಚನ ಅಕ್ಷರಶಃ ಅಲ್ಲಿ ಪಾಲನೆಯಾಗಿತ್ತು. ಹಾಲಕೆರೆಮಠ ಸಮಾಜಕ್ಕೊಂದು ದಿವ್ಯ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಮುಪ್ಪಿನ ಬಸವ ಲಿಂಗ ಮಹಾಸ್ವಾಮೀಜಿ ಅವರಿಗಂತೂ ತಮ್ಮ ಗುರುಗಳ ಆಶಯವನ್ನು ನೆರವೇರಿಸಿದ ಸಂತೃಪ್ತಿ ಭಾವ ಅವರಲ್ಲಿ ಕಾಣಿಸುತ್ತಿತ್ತು.
ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ನಾಡಿನಲ್ಲಿ ಬಸವಣ್ಣನವರು ಏನು ಮಾಡಿದರು ಎಂಬುದಕ್ಕೆ ಗದಗ ನಗರದ ಹಾಲಕೆರೆಮಠದಲ್ಲಿ ನಡೆದ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿದೆ. ಎಲ್ಲ ಸಮಾಜದ ಜನರನ್ನು ಒಂದು ಕಡೆಗೆ ಕೂಡಿಸಿಕೊಂಡು ಬಸವಣ್ಣನವರು ಅನುಭವ ಮಂಟಪ ಮಾಡಿದರು. ಅಂತಹ ಅನುಭವ ಮಂಟಪದ ತದ್ರೂಪ ಎನಿಸಿರುವ ಹಾಲಕೆರೆಮಠದ ಕಾರ್ಯ ಶ್ಲಾಘನೀಯ. ಇಂದು ಅಲ್ಲಮನ ಪ್ರಸಂಗವಿದೆ, ಅಲ್ಲಾನ ದಾಸೋಹವಿದೆ. ಇದಕ್ಕಿಂತ ಸಾಮರಸ್ಯ ಮತ್ತೊಂದಿಲ್ಲ. ಸಮಾಜಜಕ್ಕೆ ಇದಕ್ಕಿಂತ ದೊಡ್ಡ ಸಂದೇಶ ಬೇಕಿಲ್ಲ ಎಂಬ ಅಭಿಪ್ರಾಯ ನನ್ನದಾಗಿದೆ ಎಂದರು.
ಅರೇಬಿಕ್ ಶಿಕ್ಷಕ ಲಾಲ್ ಹುಸೇನ ಕಂದಗಲ್:-
ಅರೇಬಿಕ್ ಶಿಕ್ಷಕ ಲಾಲ್ ಹುಸೇನ ಕಂದಗಲ್, ಜಾತಿ, ಕುಲ, ಧರ್ಮ, ಗೋತ್ರಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ತಂದೆ ತಾಯಿ ಮಕ್ಕಳೆಂಬ ನೆಲೆಯಲ್ಲಿ ಬದುಕಬೇಕಿದೆ. ಸೌಹಾರ್ದತೆ ಸಂದೇಶ ಈ ಪುರಾಣದ ಮೂಲಕ ಪುಂಖಾನುಪುಂಖವಾಗಿ ಹರಿದು ಬರುತ್ತಿದೆ. ಮತ್ತೊಬ್ಬರನ್ನು ಪ್ರೀತಿಸುವಂತಹ ಹೃದಯ ವೈಶಾಲ್ಯತೆ ಕಲಿಯೋಣ. ಅಂತಹ ಶಿಕ್ಷಣ ಮಠಗಳು, ಮಸೀದಿಗಳ ಮೂಲಕ ಮೊಳಗುತ್ತಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು. ಇಂಥ ಪುಣ್ಯದ ಕೆಲಸ ಬೆಂಬಲಿಸಿ ನನ್ನ ಸಮುದಾಯದ ಪರವಾಗಿ ಮಾತನಾಡುತಿದ್ದೇನೆ ಎಂದು ಹೇಳಿದರು. ಇಸ್ಲಾಂ ಧರ್ಮದವರು ದಾಸೋಹಕ್ಕೆ ಸುರ್ಕೂರ್ಮ, ಪಲಾವ್ ಸೇವೆ ಮಾಡಿದರು.
ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಸ್ವಾಮೀಜಿ, ಕುರಗೋಡದ ನಿರಂಜನ ಪ್ರಭು ದೇವರು, ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡಿ ವಿರಕ್ತಮಠದ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ಧೇಶ್ವರ ದೇವರು, ವ್ಯಾಕರನಾಳು ವಿಶ್ವೇಶ್ವರ ದೇವರು, ವಾಗೀಶ ದೇವರು, ಪ್ರವಚನಕಾರ ಅಬ್ದುಲ್ ಖಾದಿರ್ ಅಣ್ಣಿಗೇರಿ ವೇದಿಕೆ ಮೇಲಿದ್ದರು. ಇಸ್ಲಾಂ ಧರ್ಮದವರನ್ನು ನಗರದ ಹಾತಲಗೇರಿ ನಾಕಾದಿಂದ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.
ಎಲ್ಲ ಧರ್ಮಗಳ ಸಾರ ಒಂದೇ
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಎಲ್ಲ ಧರ್ಮಗಳ ಸಾರ ಒಂದೇ, ಗುರು ಎಲ್ಲರಿಗೂ ಒಬ್ಬನೆ. ಯಾವ ಧರ್ಮವೂ ಕೆಟ್ಟದ್ದನ್ನ ಬೋಧಿಸಿಲ್ಲ, ಎಲ್ಲ ಧರ್ಮಗಳು ಶಾಂತಿಯನ್ನು ಪ್ರತಿಪಾದಿಸಿವೆ. ಇದಕ್ಕೆ ಇಸ್ಲಾಂ ಕೂಡಾ ಹೊರತಲ್ಲ. ಇಸ್ಲಾಂ ಧರ್ಮದವರು ಬಸವ ಪುರಾಣ ದಾಸೋಹ ಸೇವೆಗೂಡಿರುವುದು ಅತ್ಯಂತ ಶ್ಲಾಘನೀಯ. ಸಾಮರಸ್ಯ ಸಾರುವ ಈ ಕ್ಷಣ ಎಲ್ಲರಿಗೂ ಮಾದರಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ