ಹಾವು-ನಾಯಿ ತಮ್ಮ ಪ್ರಾಣ ಉಳಿಸಿಕೊಳ್ಳಲು ನಡೆಸಿದ ಕಾಳಗದಲ್ಲಿ ಎರಡೂ ಸೋತು ಸಾವನ್ನಪ್ಪಿದವು

| Updated By: ಸಾಧು ಶ್ರೀನಾಥ್​

Updated on: Jun 17, 2022 | 9:56 PM

gadag: ತಕ್ಷಣ ರೈತ ಶೇಖಪ್ಪ ಪಶು ವೈದ್ಯರನ್ನು ಜಮೀನಿಗೆ ಕರೆಯಿಸಿ, ತನ್ನ ನಾಯಿಯ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ಶ್ವಾನ ಶ್ವಾಸ ಕಳೆದುಕೊಂಡಿತ್ತು. ಸಾಕು ನಾಯಿ ಕಣ್ಮುಂದೆಯೇ ಉಸಿರು ಚೆಲ್ಲಿದ್ದು ರೈತ ಶೇಖಪ್ಪನಿಗೆ ತೀವ್ರ ನೋವು ತಂದಿದೆ.

ಹಾವು-ನಾಯಿ ತಮ್ಮ ಪ್ರಾಣ ಉಳಿಸಿಕೊಳ್ಳಲು ನಡೆಸಿದ ಕಾಳಗದಲ್ಲಿ ಎರಡೂ ಸೋತು ಸಾವನ್ನಪ್ಪಿದವು
ಹಾವು ನಾಯಿ ನಡುವಣ ಗುರ್ ಗುರ್-ಬುಸ್ ಬುಸ್ ಮಧ್ಯೆ ನಡೆದ ಕಾಳಗದಲ್ಲಿ ಎರಡೂ ಸೋತು ಸಾವನ್ನಪ್ಪಿದವು
Follow us on

ಗದಗ: ಹಾವು-ಮುಂಗುಸಿ ಬದ್ಧ ವೈರಿಗಳಾಗಿ ಕಾದಾಡುವುದನ್ನು ನೋಡಿದ್ದೇವೆ. ಆದ್ರೆ, ಜಮೀನಿನಲ್ಲಿ ಇಂದು ಶುಕ್ರವಾರ (ಜೂನ್ 17) ಹಾವು ಮತ್ತು ನಾಯಿಯ ಮಧ್ಯೆ ನಡೆದ ರಣಭೀಕರ ಕಾಳಗ ನೋಡಿ ಇಡೀ ಗ್ರಾಮಸ್ಥರೇ ದಂಗಾಗಿ ಹೋಗಿದ್ರು. ಇತ್ತ ಹಾವು ಬುಸುಗುಡುತ್ತಿದ್ರೆ.. ಅತ್ತ ನಾಯಿ ಒಂಚೂರು ಎದೆಗುಂದದೆ ಗುರ್ ಗುರ್ ಅಂತ ಅವಾಜ್ ಹಾಕಿದ್ದೇ ಹಾಕಿದ್ದು! ಪರಸ್ಪರ ನಾಗರ ಹಾವು- ನಾಯಿ ತಾನು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಜೀವದ ಹಂಗು ತೊರೆದು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಫೈಟ್ ಮಾಡಿದ್ವು. ಹೀಗಾಗಿ ಕೊನೆಗೆ ಹಾವು ನಾಯಿ ಸೆಣಸಾಟದಲ್ಲಿ ಆಗಿದ್ದಾದ್ರೂ ಏನ್ ಅಂತೀರಾ ಈ ಸ್ಟೋರಿ ಓದಿ…

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದ ಜಮೀನುವೊಂದರಲ್ಲಿ ನಡೆದ ಹಾವು-ನಾಯಿ ದಂಗಲ್ ನೋಡೋಕೆ ರೋಚಕವಾಗಿತ್ತು. ನಾಯಿ ಗುರ್ ಗುರ್ ಅಂತ ಹಾವಿನ ಮೇಲೆ ಅಟ್ಯಾಕ್ ಮಾಡಿದ್ರೆ, ಇತ್ತ ಹಾವು ಕೂಡ ನಾಯಿ ಮೇಲೆ ಬುಸ್ ಬುಸ್ ಅಟ್ಯಾಕ್ ಮಾಡ್ತಾಯಿತ್ತು. ಮುದ್ದಾಗಿ ಸಾಕಿದ ನಾಯಿಯನ್ನು ಹಾವಿನ ಬಾಯಿಂದ ಬಚಾವ್ ಮಾಡಲು ಜಮೀನು ಮಾಲೀಕ ಶೇಖಪ್ಪ ಚಲವಾದಿ ಹಾಗೂ ಗ್ರಾಮಸ್ಥರು ಬಿಡಿಸಲು ಸಮೀಪ ಹೋದ್ರೆ ಹಾವು ಬುಸ್ ಬುಸ್ ಎನ್ನುತ್ತಿತ್ತು. ಎಲ್ಲರಿಗೂ ಪ್ರಾಣ ಭಯವೇ… ಮೊದ್ಲೆ ಹಾವು ಮಾರುದ್ದದ್ದು.. ಅದ್ರಲ್ಲೂ ನಾಗರಹಾವು ಬುಸುಗುಡುತ್ತಿರೋದು ಮತ್ತು ಅದರ ರೋಷ ನೋಡಿ ಗ್ರಾಮಸ್ಥರು ದೂರ ಓಡಿ ಹೋಗಿದ್ದಾರೆ.

ಇದನ್ನೂ ಓದಿ:

ತಂದೆ ತಾಯಿಯನ್ನು ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ವಂಶೋದ್ಧಾರಕ ಮಗ! ಕುಡಿತದ ಚಟ ಬಿಡಿಸುವುದಾಗಿ ಗದರಿಸಿದ್ದಕ್ಕೆ ಮಗನ ವಿಕೃತ ವರ್ತನೆ

ಜಪ್ಪಯ್ಯ ಅಂದ್ರೂ ಸೋಲೊಪ್ಪದ ನಾಯಿ ಹಾವು…

ಇಂದು ಮಧ್ಯಾಹ್ನ ಎಂದಿನಂತೆ ಜಮೀನು ಮಾಲೀಕ ತನ್ನ ನಾಯಿಯ ಜೊತೆಗೂಡಿ ಊಟ ತೆಗೊಂಡು ಜಮೀನಿಗೆ ಆಗಮಿಸಿದ್ದಾನೆ. ನಾಯಿ ಕೂಡ ಹಿಂದೆಹಿಂದೆಯೇ ಓಡೋಡಿ ಬರ್ತಾಯಿತ್ತು. ಊಟಕ್ಕಾಗಿ ಓಡಿ ಬರ್ತಾಯಿದೆ ಅಂತ ಮಾಲೀಕ ಶೇಖಪ್ಪ ಅಂದ್ಕೊಂಡಿದ್ರಂತೆ. ಆದ್ರೆ, ಸಮೀಪ ಹೋಗಿ ನೋಡಿದ್ರೆ ಸಾಕು ನಾಯಿಯು ನಾಗರ ಹಾವನ್ನು ಬೆನ್ನಟ್ಟಿ ಬರ್ತಾಯಿತ್ತು! ಒಂದು ಮಾರು ಉದ್ದದ ನಾಗರ ಹಾವು ಮತ್ತು ತನ್ನ ನಾಯಿಯ ನಡುವೆ ಕಾಳಗ ಏರ್ಪಟ್ಟಿರುವುದನ್ನು ಕಂಡು ರೈತ ದಂಗಾಗಿ ಹೋಗಿದ್ದಾನೆ.

ಹದಲಿ ಗ್ರಾಮದ ಶೇಖಪ್ಪ ಚಲವಾದಿ ಎಂಬುವರ ಹೊಲದಲ್ಲಿ ಹಾವು ನಾಯಿ ಕಾಳಗದ ಈ ಘಟನೆ ನಡೆದಿದೆ. ನಾಯಿ ಕೂಡ ಹಾವಿನ ಬಾಲ ಕಚ್ಚಿ ಕಚ್ಚಿ ಗಾಯ ಮಾಡಿದೆ. ಇತ್ತ ಹಾವು ಕೂಡ ನಾಯಿಯ ಮೇಲೆ ನಿರಂತರವಾಗಿ ಅಟ್ಯಾಕ್ ಮಾಡಿ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಕಚ್ಚಿ ಗಾಯಗೊಳಿಸಿದೆ. ಇದರಿಂದ ಹಾವು-ನಾಯಿ ಪರಸ್ಪರ ಕಾಳಗ ನಡೆಸಿ ಗಾಯಗೊಂಡಿವೆ. ಬಿಡಿಸಲು ಪ್ರಯತ್ನಿಸಿದರೂ ಕೂಡ ಜಿದ್ದಿಗೆ ಬಿದ್ದಂತೆ ಕಾದಾಡಿದ ಉಭಯ ಪ್ರಾಣಿಗಳು ಕೊನೆಗೆ ಸಾವು ಕಂಡಿವೆ…

ತಕ್ಷಣ ರೈತ ಶೇಖಪ್ಪ ಪಶು ವೈದ್ಯರನ್ನು ಜಮೀನಿಗೆ ಕರೆಯಿಸಿ, ತನ್ನ ನಾಯಿಯ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ಶ್ವಾನ ಶ್ವಾಸ ಕಳೆದುಕೊಂಡಿತ್ತು. ಸಾಕು ನಾಯಿ ಕಣ್ಮುಂದೆಯೇ ಉಸಿರು ಚೆಲ್ಲಿದ್ದು ರೈತ ಶೇಖಪ್ಪನಿಗೆ ತೀವ್ರ ನೋವು ತಂದಿದೆ.
-ಸಂಜೀವ ಪಾಂಡ್ರೆ, ಟಿವಿ 9, ಗದಗ

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.