AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಲಿತ ಕುಟುಂಬಕ್ಕೆ ಕೊಟ್ಟಿರುವ ಸರ್ಕಾರಿ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿಗಳ ಉದ್ಧಟತನ, ರೈತ ಹೈರಾಣ

Illegal Solar plants in Gadag: ಗದಗ ಜಿಲ್ಲೆಯಲ್ಲಿ ರೈತರ ಮೇಲೆ ಸೋಲಾರ್ ಕಂಪನಿಯ ದಬ್ಬಾಳಿಕೆ...! ಅನ್ನದಾತರ ಪರವಾನಗಿ ಪಡೆಯದೆ ಅಕ್ರಮವಾಗಿ ಸೋಲಾರ್ ಪ್ಲಾಂಟ್ ಅಳವಡಿಕೆ ಆರೋಪ..! ಖಾಸಗಿ ಸೋಲಾರ್ ಕಂಪನಿಯ ದಬ್ಬಾಳಿಕೆಗೆ ಅನ್ನದಾತರ ಆಕ್ರೋಶ..! ರೈತರ ಜಮೀನಿನಲ್ಲಿ ಬೃಹತ್ ವಾಹನ ಸಂಚಾರ, ಜಮೀನಿಗೆ ಹಾನಿ..! ಸೋಲಾರ್ ಪ್ಲಾಂಟ್ ತೆರವು ಮಾಡದಿದ್ದರೆ, ಡಿಸಿ ಕಚೇರಿ ವರೆಗೆ ಪಾದಯಾತ್ರೆ ಎಚ್ಚರಿಕೆ..!

ದಲಿತ ಕುಟುಂಬಕ್ಕೆ ಕೊಟ್ಟಿರುವ ಸರ್ಕಾರಿ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿಗಳ ಉದ್ಧಟತನ, ರೈತ ಹೈರಾಣ
ದಲಿತರ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿಗಳ ಉದ್ಧಟತನ, ರೈತ ಹೈರಾಣ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​|

Updated on: Feb 05, 2024 | 2:26 PM

Share

ಆ ಜಿಲ್ಲೆಯಲ್ಲಿ ಗಾಳಿ ವೇಗವಾಗಿ ಬಿಸುತ್ತದೆ, ಹಾಗೆಯೇ ಬಿಸಿಲು ಕೂಡಾ ಹೆಚ್ಚಾಗಿರುತ್ತೆ. ಹಾಗಾಗಿಯೇ ಈ ಭಾಗದಲ್ಲಿ ವಿಂಡ್ ಪ್ಯಾನ್ ಹಾಗೂ ಸೋಲಾರ್ ಘಟಕಗಳು ತಲೆ ಎತ್ತುತ್ತಿವೆ. ಆದ್ರೆ, ಈ ಸೋಲಾರ್ ಕಂಪನಿಗಳು ಬಡ ರೈತರ ರಕ್ತವನ್ನು ಹೀರುತ್ತಿವೆ. ಹೌದು ರೈತರ ಮೇಲೆ ದಬ್ಬಾಳಿಕೆ ಮಾಡ್ತಾ, ಅಕ್ರಮವಾಗಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿದ್ದಾರೆ. ಹೀಗಾಗಿ ಸೋಲಾರ್ ಕಂಪನಿಗಳ ಅಂಧಾದರ್ಬಾರ್​​ಗೆ ಅನ್ನದಾತರು ವಿಲವಿಲ ಅಂತಿದ್ದಾರೆ. ಇದು ಗದಗ ಜಿಲ್ಲೆಯಲ್ಲಿ ರೈತರ ಮೇಲೆ ಸೋಲಾರ್ ಕಂಪನಿಗಳು ನಡೆಸುತ್ತಿರುವ ದಬ್ಬಾಳಿಕೆಯ ಝಲಕ್​​.

ರೈತರ ಜಮೀನುಗಳಲ್ಲಿ ಅಕ್ರಮ ಸೋಲಾರ್ ಪ್ಲಾಂಟ್ ಅಳವಡಿಸಿ ಕಂಪನಿಗಳು ದಬ್ಬಾಳಿಕೆ ನಡೆಸುತ್ತಿವೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಕುಟುಂಬಕ್ಕೆ ಸರ್ಕಾರ ಕೊಟ್ಟಿರೋ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿ ಉದ್ಧಟತನ ತೋರಿದೆ. ವರ್ಷವಾದ್ರೂ ತೆರವು ಮಾಡದ ಕಂಪನಿ ವಿರುದ್ಧ ಅನ್ನದಾತರ ಕೆಂಡಾಮಂಡಲ. ಎಸ್ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ವ್ಯಾಪ್ತಿಯಲ್ಲಿ. ಇಲ್ಲಿನ ಗಾಳಿ ಸಂಪತ್ತು ಹಾಗೂ ಬಿಸಿಲಿನ ಪ್ರಕರತೆಯಿತೆಯಿಂದ ವಿಂಡ್ ಪ್ಯಾನ್ ಹಾಗೂ ಸೋಲಾರ್ ಕಂಪನಿಗಳು ನಾಯಿ ಕೊಡೆಗಳಂತೆ ತಲೆಎತ್ತಿವೆ.

ಗದಗ ಜಿಲ್ಲೆಯತ್ತ ಸಾಕಷ್ಟು ಸೋಲಾರ್, ವಿಂಡ್ ಫ್ಯಾನ್ ಗಳು ಲಗ್ಗೆ ಇಡ್ತಾಯಿವೆ. ಕೆಲವು ರೈತರಿಗೆ ಇವು ವರದಾನ ಆದ್ರೆ ಇನ್ನು ಕೆಲವು ರೈತರ ಜೀವ ಹಿಂಡುತ್ತಿವೆ. ನರೇಗಲ್ ಪಟ್ಟಣದಲ್ಲಿ ಖಾಸಗಿ ಕಂಪನಿಯಾದ ರೀನ್ಯೂವ್ ಸೋಲಾರ್ ಕಂಪನಿಯ ದಬ್ಬಾಳಿಕೆಗೆ ಅನ್ನದಾತರು ಬೇಸತ್ತು ಹೋಗಿದ್ದಾರೆ. ಅಂದಹಾಗೆ ನರೇಗಲ್ ಪಟ್ಟಣದ ಸರ್ವೇ ನಂಬರ್ 774 ರ ಅಕ್ಕಪಕ್ಕದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡ್ತಾಯಿದ್ದಾರೆ.

ಆ ರೈತರಿಂದ ಜಮೀನನ್ನು ಲೀಸ್ ಪಡೆದು ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡ್ತಾಯಿದ್ದಾರೆ. ಆದ್ರೆ ಅದರ ಪಕ್ಕದಲ್ಲಿನ ಜಮೀನಿನ ಮಾಲೀಕರ ಪರವಾನಿಗೆ ಪಡೆಯದೆ ಅಕ್ರಮವಾಗಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿದ್ದಾರೆ. ಮೈಲಾರಿ ಎನ್ನುವ ರೈತನಿಗೆ ಸರ್ಕಾರ ದಲಿತರ ಕುಟುಂಬಕ್ಕೆ 1 ಎಕರೆ, 30 ಗುಂಟೆ ಅಂಬೇಡ್ಕರ್ ನಿಗಮದಿಂದ ಜಮೀನು ನೀಡಿದೆ.

ಆ ಜಮೀನಿನಲ್ಲಿ ಅಕ್ರಮವಾಗಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿದ್ದಾರೆ ಅಂತ ರೈತ ಆರೋಪಿಸಿದ್ದಾನೆ. ಮೈಲಾರಿ, ರಹೆಮಾನ್ ಸಾಬ್ ಸೇರಿ ಇನ್ನೂ ಎರಡು ಮೂರು ರೈತರ ಜಮೀನಿನಲ್ಲಿ ಅಕ್ರಮವಾಗಿ ಸೋಲಾರ್ ಪ್ಲಾಂಟ್ ಹಾಕಿದ್ದಾರೆ. ಸೋಲಾರ್ ಅಳವಡಿಸುವಾಗ ವಿರೋಧ ಮಾಡಿದ್ರು ಕ್ಯಾರೇ ಎನ್ನದೆ ನಮ್ಮ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಹೀಗಾಗಿ ರೈತರು ಖಾಸಗಿ ಕಂಪನಿಯ ದಬ್ಬಾಳಿಕೆಯಿಂದ ಬೇಸತ್ತು ಹೋಗಿದ್ದು, ನಮ್ಮ‌ ಜಮೀನಿನಲ್ಲಿ ಅಳವಡಿಕೆ ಮಾಡಿರೋ ಸೋಲಾರ್ ಪ್ಲಾಂಟ್ ತೆರವು ಮಾಡ್ಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇನ್ನು ಗಜೇಂದ್ರಗಡ ತಾಲೂಕಿನಲ್ಲಿ ಸೋಲಾರ್ ಕಂಪನಿಗಳು ಅಂಧಾ ದರ್ಬಾರ್ ನಡೆಸಿದ್ದಾರೆ. ರೈತರ ಜಮೀನಿನಲ್ಲಿ ಅನಧಿಕೃತವಾಗಿ ಬೃಹತ್ ವಾಹನಗಳನ್ನು ಓಡಿಸಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆಗಳು ಕೂಡಾ ಹಾಳಾಗಿವೆ‌‌. ಹಾಗೇ ಅನಧಿಕೃತವಾಗಿ ಕೆಲವು ರೈತರ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ, ಮ್ಯಾನೇಜರ್ ಬಂದಿಲ್ಲಾ, ಆ ಅಧಿಕಾರಿ ಬಂದಿಲ್ಲಾ, ಈ ಅಧಿಕಾರಿ ಬಂದಿಲ್ಲಾ ಅಂತಾ ಎಂಟು ತಿಂಗಳಿಂದ ರೈತರನ್ನು ಯಾಮಾರಿಸುತ್ತಿದ್ದಾರೆ.

ಹೀಗಾಗಿ ಸರ್ವೆ ಮಾಡಿ, ಅವರ ಜಾಗದಲ್ಲಿ ಸೋಲಾರ್ ಪ್ಯಾಂಟ್ ಹಾಕಿಕೊಳ್ಳಲಿ. ನಮ್ಮ ಜಮೀನಿನಲ್ಲಿ ಅಕ್ರಮವಾಗಿ ಸೋಲಾರ್ ಅಳವಡಿಕೆ ಮಾಡಲು ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ತಹಶೀಲ್ದಾರ ಅಧಿಕಾರಿಗಳ ಗಮನಕ್ಕೆ ತಂದ್ರೆ, ಯಾರೂ ಸ್ಪಂದನೆ ಮಾಡ್ತಾಯಿಲ್ವಂತೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಉಡುಪಿ ಕೃಷ್ಣಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್

ಅಧಿಕಾರಿ ವರ್ಗ ಸೋಲಾರ್ ಕಂಪನಿಗಳ ಪರವಾಗಿಯೇ ಕೆಲಸ ಮಾಡ್ತಾಯಿದ್ದಾರೆ ಅಂತ ಆರೋಪಿಸಿದ್ದಾರ. ಹೀಗಾಗಿ ನರೇಗಲ್ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿಗೆಯವರಿಗೆ ಪಾದಯಾತ್ರೆ ಮಾಡೋ ಮೂಲಕ ಖಾಸಗಿ ಸೋಲಾರ್ ಕಂಪನಿಯ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಲು ಒತ್ತಾಯ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ರೀನ್ಯೂವ್ ಕಂಪನಿ ಅಧಿಕಾರಿಗಳನ್ನು ಕೇಳಿದ್ರೆ, ಆ ರೀತಿ ಅಕ್ರಮವಾಗಿ ಹಾಕಿಲ್ಲ. ಎರಡ್ಮೂರು ದಿನಗಳಲ್ಲಿ ಸರ್ವೇ ಮಾಡಿ ರೈತರಿಗೆ ಅನ್ಯಾಯವಾಗಿದ್ರೆ ಸಮಸ್ಯೆ ಸರಿಪಡಿಸ್ತೀವಿ ಅಂತ ಹೇಳಿದ್ದಾರೆ.

ಖಾಸಗಿ ಸೋಲಾರ್ ಕಂಪನಿಯ ದಬ್ಬಾಳಿಕೆಯಿಂದ ಬಡ ರೈತರು ಹಾಗೂ ಸಣ್ಣ ಹಿಡುವಳಿದಾರರು ರೋಸಿ ಹೋಗಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ವರ್ಗ ರೈತರ ಪರವಾಗಿ ನಿಲ್ಲುವ ಬದಲು, ಖಾಸಗಿ ಕಂಪನಿಯ ಪರವಾಗಿ ಕೆಲಸ ಮಾಡ್ತಾಯಿವೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ರೈತರ ಮೇಲೆ ಆಗ್ತಾಯಿರೋ ದಬ್ಬಾಳಿಕೆಗೆ ಕಡಿವಾಣ ಹಾಕಿ, ರೈತರ ಹಿತವನ್ನು ಕಾಪಾಡಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ