ಗದಗ: ಬಡ್ಡಿ ಹಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೃತ್ಯುಂಜಯ ಭರಮಗೌಡರ ಹಲ್ಲೆಗೊಳಗಾದ ಯುವಕ. ಗದಗ ನಗರದ ಕೆಸಿ ರಾಣಿ ರಸ್ತೆಯ ಮನೆಯಿಂದ ಬೆಟಗೇರಿ ವ್ಯಾಪ್ತಿಯ ಜಮೀನಿಗೆ ಕರೆದೊಯ್ದು ಯುವಕನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಉಮೇಶ್ ಸುಂಕದ ಮತ್ತು ಉದಯ ಸುಂಕದ ಎಂಬ ಇಬ್ಬರು ಬಡ್ಡಿ ದಂಧೆಕೋರರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.
ಉಮೇಶ್ ಸುಂಕದ, ಉದಯ ಸುಂಕದ ಸೇರಿ ಮೂವರು ಮೃತ್ಯುಂಜಯ ಭರಮಗೌಡರನ್ನು ಜಮೀನಿಗೆ ಕರೆದೊಯ್ದು ಥಳಿಸಿ ಎರಡು ದಿನ ಕೂಡಿ ಹಾಕಿದ್ದರಂತೆ. ಎರಡು ಲಕ್ಷಕ್ಕೆ ಒಂದು ಲಕ್ಷ ಬಡ್ಡಿ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನಿಗೆ ಎದೆ, ಕಾಲಿನ ಮೂಳೆ ಮುರಿಯುವಂತೆ ಥಳಿಸಲಾಗಿದ್ದು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಪದೇ ಪದೇ ಮನೆಗೆ ಬಂದು ಮೃತ್ಯುಂಜಯ ತಾಯಿಗೆ ಬೆದರಿಕೆ ಹಾಕುತ್ತಿದ್ದಾರೆ. ಪುತ್ರನ ನರಳಾಟ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ. ಗದಗ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗ ನಗರದ ಕೆ.ಸಿ ರಾಣಿ ನಿವಾಸಿ, 28 ವರ್ಷದ ಮೃತ್ಯುಂಜಯ ವಿಡಿಯೋಗ್ರಫಿ ಮಾಡ್ಕೊಂಡು ಜೀವನ ನಡೆಸ್ತಿದ್ದ. ಆದ್ರೆ ಈಗ ಬಡ್ಡಿಯ ಕೂಪದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ಮಾಡ್ತಿದ್ದಾನೆ. ಕೊರೊನಾ ಬಳಿಕ ಮೃತ್ಯುಂಜಯನ ವ್ಯವಹಾರದಲ್ಲಿ ಲಾಸ್ ಆಗಿತ್ತಂತೆ. ಹೀಗಾಗಿ ಉಮೇಶ್ ಸುಂಕದ್ ಎಂಬಾತನಿಂದ ಒಂದೂವರೆ ವರ್ಷದ ಹಿಂದೆ 2 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಅದರಲ್ಲಿ ಒಂದು ಲಕ್ಷ ವಾಪಸ್ ಕೂಡ ಮಾಡಿದ್ನಂತೆ. ಆದ್ರೆ ಇದು ಬಡ್ಡಿಗೆ ಸರಿಹೋಯ್ತು ಇನ್ನೂ ಎರಡು ಲಕ್ಷ ಹಣ ಕೊಡ್ಲೇಬೇಕು ಅಂತ ಉಮೇಶ್ ಪಟ್ಟು ಹಿಡಿದಿದ್ನಂತೆ. ಆದ್ರೆ ಇದಕ್ಕೊಪ್ಪದ ಮೃತ್ಯುಂಜಯ ಇನ್ನೊಂದು ಲಕ್ಷ ಕೊಡೋದಾಗಿ ಹೇಳಿದ್ದಾನೆ. ಇದೇ ವಿಚಾರವಾಗಿ ಹಲವು ಬಾರಿ ಮೃತ್ಯುಂಜಯ-ಉಮೇಶ್ ಮಧ್ಯೆ ಗಲಾಟೆಗಳು ನಡೆದಿವೆ.
ಮಾರ್ಚ್ 23ರಂದು ರೊಚ್ಚಿಗೆದ್ದಿದ್ದ ಉಮೇಶ ರಾತ್ರೋರಾತ್ರಿ ಮೃತ್ಯುಂಜಯನ ಮನೆಗೆ ಬಂದು ಎತ್ತಾಕ್ಕೊಂಡು ಹೋಗಿದ್ದ. ಉಮೇಶ್ ಸಹೋದರ ಉದಯ್ ಹಾಗೂ ಇನ್ನೊಬ್ಬ ಸ್ನೇಹಿತನ ಜೊತೆ ಸೇರ್ಕೊಂಡು ಮೃತ್ಯುಂಜಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಜಮೀನಿನಲ್ಲಿ ಬಿದ್ದಿದ್ದವನನ್ನು ಉದಯ್ ಮನೆಗೆ ಕರ್ಕೊಂಡ್ ಹೋಗಿ ಕೂಡಿ ಹಾಕಿದ್ನಂತೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮೃತ್ಯುಂಜಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲು, ಎದೆ ಭಾಗದ ಮೂಳೆಗಳಿಗೆ ಭಾರಿ ಪೆಟ್ಟು ಬಿದ್ದಿದ್ದು, ಮೇಲೇಳಲಾಗದಂತೆ ಗಂಭೀರ ಗಾಯಗಳಾಗಿವೆ. ಸದ್ಯ ಬೆಟಗೇರಿ ಪೊಲೀಸರು ಯುವಕನಿಂದ ಹೇಳಿಕೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಮಗನ ಪರಿಸ್ಥಿತಿ ಕಂಡು ತಾಯಿ ಕಣ್ಣೀರಾಕಿದ್ದಾರೆ.
ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಹತ್ಯೆ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ಬಳಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಹತ್ಯೆ ಮಾಡಲಾಗಿದೆ. ಗದ್ದೆಯೊಂದರಲ್ಲಿ ಅನಿಲ್ ಬಾಳು ಸವಳೆ(30) ಎಂಬುವವರ ಬರ್ಬರ ಕೊಲೆಯಾಗಿದೆ. ಕೊಲೆ ಮಾಡಿ ಗದ್ದೆಯೊಂದರಲ್ಲಿ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಂಕಲಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.
ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ಆನೇಕಲ್: ಸರ್ಜಾಪುರದ ದೊಡ್ಡಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ಸಂತೋಷ್(13) ಮೃತಪಟ್ಟ ಘಟನೆ ನಡೆದಿದೆ. ಶನಿವಾರ ಮನೆಯಿಂದ ತೆರಳಿದ್ದ ಸಂತೋಷ್, ರಾತ್ರಿ ಕಳೆದ್ರೂ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಈ ವೇಳೆ ದೊಡ್ಡ ಕೆರೆ ಬಳಿ ಹುಡುಕುವಾಗ ಶವವೊಂದು ನೀರಲ್ಲಿ ತೇಲುವುದನ್ನು ಕಂಡು ಪೋಷಕರು ನೋಡಿದಾಗ ಮಗ ಮೃತಪಟ್ಟಿರುವುದ ತಿಳಿದು ಬಂದಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜಮೌಳಿ ಸಿನಿಮಾಗಳ ಬಜೆಟ್- ಕಲೆಕ್ಷನ್ ವಿವರ ಇಲ್ಲಿದೆ ನೋಡಿ
ಪರೀಕ್ಷೆ ಬರೀರಿ, ಕೆಲಸ ಸಿಗದಿದ್ರೆ ಯಾರೂ ಸಹಾಯಕ್ಕೆ ಬರಲ್ಲ: ವಿದ್ಯಾರ್ಥಿನಿಯರಿಗೆ ತೇಜಸ್ವಿ ಸೂರ್ಯ ಕಿವಿಮಾತು
Published On - 4:19 pm, Sun, 27 March 22