ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಗದಗದ ಇಬ್ಬರು ಮಾಜಿ ಶಾಸಕರು
ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಡಿ.ಆರ್.ಪಾಟೀಲ ಮತ್ತು ಜಿ.ಎಸ್.ಗಡ್ಡದೇವರಮಠ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದರು.
ಗದಗ: ಜಿಲ್ಲೆಯ ಇಬ್ಬರು ಪ್ರಭಾವಿ ಮಾಜಿ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧರ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಡಿ.ಆರ್.ಪಾಟೀಲ ಮತ್ತು ಜಿ.ಎಸ್.ಗಡ್ಡದೇವರಮಠ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದರು.
ಕೆ.ಎಚ್.ಪಾಟೀಲರ ಅಕಾಲಿಕ ನಿಧನದ ನಂತರ ಗದಗ ಕ್ಷೇತ್ರದಿಂದ ಸ್ಪರ್ಧಿಸಿ ಡಿ ಆರ್ ಪಾಟೀಲ್ ಜಯ ಗಳಿಸಿದ್ದರು. ಅವರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಗದಗ ಕ್ಷೇತ್ರವನ್ನು ಎಚ್.ಕೆ.ಪಾಟೀಲರಿಗೆ ಬಿಟ್ಟು ಕೊಟ್ಟಿದ್ದರು. 2019ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಿವಕುಮಾರ್ ಉದಾಸಿ ವಿರುದ್ಧ ಸೋಲುಂಡಿದ್ದರು. ನಂತರ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ಸ್ವಲ್ಪಮಟ್ಟಿನ ಅಂತರ ಕಾಯ್ದುಕೊಂಡಿದ್ದ ಡಿ.ಆರ್.ಪಾಟೀಲ, ಸದ್ಯ ಚುನಾವಣಾ ರಾಜಕೀಯದಿಂದ ದೂರ ಇದ್ದು ಪಕ್ಷ ಸಂಘಟನೆಗೆ ಗಮನ ಕೊಡುವುದಾಗಿ ಹೇಳಿದ್ದಾರೆ.
ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಎರಡು ಬಾರಿ ಶಿರಹಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ನ ಹಿರಿಯ ನಾಯಕರು ತೆಗೆದುಕೊಂಡಿರುವ ಈ ನಿರ್ಧಾರವು ಅಚ್ಚರಿಯುಂಟು ಮಾಡಿದೆ.
(Two Ex MLAs of Gadag DR Patil GS Gaddadevaramutt Announces They wont contest in Upcoming Elections)
Published On - 4:26 pm, Sat, 14 August 21