ಗದಗ ಜಿಲ್ಲೆಯಾದ್ಯಂತ ಉಲ್ಬಣಗೊಂಡ ಚರ್ಮ ಗಂಟು ರೋಗ, ಜಾನುವಾರಗಳ ಪಾಲಿಗೆ ಆಪತ್ಭಾಂದವರಾದ ನಿವೃತ ಪಶುವೈದ್ಯ
ಗದಗ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ನಿವೃತ್ತ ಪಶುವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ರೈತರು
ಭಯಾನಕವಾದ ಚರ್ಮ ಗಂಟು ರೋಗ ಉಲ್ಬಣಗೊಂಡಿದ್ದು, ನಾಡಿನ ಜಾನುವಾರಗಳ ಜೀವ ಹಿಂಡುತ್ತಿದೆ. ಸಾಕಿ ಸಲುಹಿದ ಮೂಕ ಪ್ರಾಣಿಗಳ ರೋಧನ ನೋಡಿ ಅನ್ನದಾತರು ಗೋಳಾಡುತ್ತಿದ್ದಾರೆ. ಈ ನಡುವೆ ರೋಗಕ್ಕೆ ಮದ್ದು ಕೊಡಬೇಕಾದ ಪಶು ವೈದ್ಯರ ಕೊರತೆ ಗದಗ ಜಿಲ್ಲೆಯನ್ನು ಕಾಡುತ್ತಿದೆ. ಇಂತಹ ವೇಳೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ರಾಸುಗಳು ರೈತನ ಕಣ್ಮುಂದೆ ಸಾವಿನ ಮನೆ ಸೇರುತ್ತಿವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅನ್ನದಾತರು ಹಾಗೂ ಮೂಕ ಪ್ರಾಣಿಗಳ ಪಾಲಿಗೆ ಆಪತ್ಭಾಂದವರಾಗಿ, ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುವ ಮೂಲಕ ಅನ್ನದಾತರಿಗೆ ಆಸರೆಯಾಗಿದ್ದಾರೆ ಈ ಪಶುವೈದ್ಯರು.
ಗದಗ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ರೋಗ ವೀಪರತವಾಗಿ ಹರಡುತ್ತಿದ್ದು, ಪಶು ವೈದ್ಯರ ಕೊರತೆಯಿಂದ ರಾಸುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿವೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಪಶು ವೈದ್ಯರ ಕೊರತೆಯನ್ನು ಗದಗ ಜಿಲ್ಲೆ ಎದುರಿಸುತ್ತಿದೆ. ಹೀಗಾಗಿ ರಾಸುಗಗಳು ನಿತ್ಯವೂ ನರಳಿ ನರಳಿ ಸಾಯುವತ್ತಿವೆ. ಇಂತಹ ಸಂದರ್ಭದಲ್ಲಿ ಓರ್ವ ಪಶು ವೈದ್ಯಯೋರ್ವ ಆಪತ್ಭಾಂಧವರಾಗಿ ಬಂದಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿಯಾದ ನಿವೃತ್ತ ಪಶು ಅಧಿಕಾರಿ ಡಾ. ಎಸ್ ಟಿ ಬಾಬಣ್ಣವರ ಎಂಬುವರು ಉಚಿತವಾಗಿ ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೂಲತಃ ಜಾನುವಾರು ಅಧಿಕಾರಿಯಾಗಿ ರಾಜ್ಯದ ನಾನಾ ಕಡೆ ಸೇವೆ ಸಲ್ಲಿಸಿದ ಇವರು ಒಂದುವರೆ ವರ್ಷದ ಹಿಂದೆ ನಿವೃತ್ತಿಯಾಗಿದ್ದಾರೆ. ಇವರು ಮುಂಜಾನೆಯಿಂದ ಸಂಜೆಯವರಿಗೆ ಹತ್ತಾರು ಗ್ರಾಮಗಳಿಗೆ ತೆರಳಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ನಿಸ್ವಾರ್ಥ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾ. ಎಸ್ ಟಿ ಬಾಬಣ್ಣವರ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರೂ, ಗದಗ ಜಿಲ್ಲೆಯ ರೈತರಿಗೆ ಅಪರಿಚಿತರು. ಆದರೂ ಕೂಡ, ಭಯಾನಕ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿರುವುದನ್ನು ಕಂಡು ಸ್ವಯಂ ಪ್ರೇರಿತರಾಗಿ ಉಚಿತವಾಗಿ ಚಿಕಿತ್ಸೆ ನೀಡಲು ಆರಂಭ ಮಾಡಿದ್ದಾರೆ. ಈವಾಗ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ರೈತರ ಮನೆಗೆ ಹೋಗಿ ಚಿಕಿತ್ಸೆ ನೀಡಿ, ಚರ್ಮ ಗಂಟು ರೋಗ ಲಕ್ಷಣಗಳು ಹಾಗೂ ಜಾಗೃತಿ ವಹಿಸುವ ಕ್ರಮಗಳನ್ನು ರೈತರಿಗೆ ತಿಳಿಹೇಳಿ ಬರುವ ಮೂಲಕ ರೈತರಿಗೆ ಅಚ್ಚುಮೆಚ್ಚಿನವರಾಗಿದ್ದಾರೆ.
“ನನಗೆ ಮೊದಲಿನಿಂದಲೂ ಜಾನುವಾರುಗಳ ಮೇಲೆ ಬಹಳ ಪ್ರೀತಿ. ಈಗ ಚರ್ಮ ಗಂಡು ರೋಗ ಹರಡುತ್ತಿದ್ದು, ನಾನು ರೈತರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತೇನೆ. ಯಾವ ರೈತರಿಂದಲೂ ಹಣ ಪಡೆಯುವದಿಲ್ಲ, ಇಂತಹ ಸ್ಥಿತಿಯಲ್ಲಿ ನಾನು ಕೂಡಾ ಅಳಿಲು ಸೇವೆ ಮಾಡುತ್ತಿದ್ದೇನೆ ” ಎಂದು ನಿವೃತ್ತ ಪಶು ಅಧಿಕಾರಿ ಎಸ್ ಟಿ ಬಾಬಣ್ಣವರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೋಗದಿಂದ ಬಳಲಿ ಸಾವನ್ನಪ್ಪುತ್ತಿರುವ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡಿ, ರೈತರ ಪಾಲಿಗೆ ದೇವರಾದ ಡಾ. ಎಸ್ ಟಿ ಬಾಬಣ್ಣವರ ಅವರಿಗೆ ನಮ್ಮದೊಂದು ಸಲಾಂ
ವರದಿ- ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 9:24 pm, Sun, 23 October 22