ಗದಗ: ಸರ್ಕಾರಿ ಶಾಲೆ ಶಿಕ್ಷಕನೊಬ್ಬ (Teacher) ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ (Sand Mafia) ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಗದಗ (Gadag) ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್ ಕೆ ಪಾಟೀಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಶಿಕ್ಷಕನ ವಿರುದ್ಧ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ನಂತರ ಶಾಲೆಯಿಂದ ಹೋಗುತ್ತಿದ್ದಾರಂತೆ. ಸರ್ಕಾರಿ ಸಂಬಳ ಪಡೆದರೂ ಮಕ್ಕಳಿಗೆ ಪಾಠ ಮಾಡುತ್ತಿರಲಿಲ್ಲ. ಪಾಠ ಮಾಡುವ ಬದಲು ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಗಣಿತ ಪಾಠ ಕೇಳದ ಮಕ್ಕಳು:
ಎಸ್ ಕೆ ಪಾಟೀಲ್ ಶಿರಹಟ್ಟಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದಾರೆ. ಆದರೆ 3 ತಿಂಗಳಿಂದ ಶಾಲೆ ಕಡೆ ತಿರುಗಿ ನೋಡಿಲ್ಲ. ನವೆಂಬರ್, ಡಿಸೆಂಬರ್ನಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲ. ಬಳಿಕ 2 ತಿಂಗಳು ಹಾಜರಾದಂತೆ ಸಹಿ ಹಾಕಿದ್ದಾರೆ. ಒಂದೇ ದಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ. 2 ತಿಂಗಳಿಗೆ ಒಟ್ಟಿಗೆ ಸಹಿ ಮಾಡಿ ಮತ್ತೆ ಶಾಲೆಗೆ ರಜೆ ಹಾಕಿದ್ದಾರಂತೆ. ಎಸ್ ಕೆ ಪಾಟೀಲ್ ಗಣಿತ ಪಾಠ ಮಾಡುವ ಶಿಕ್ಷಕನಾಗಿದ್ದು, ಶಾಲೆಗೆ ಗೈರಾದ ಹಿನ್ನೆಲೆ ಗಣಿತ ಪಾಠ ಹಿಂದುಳಿದಿದೆ.
ಇನ್ನು ಶಿಕ್ಷಕ ಎಸ್ ಕೆ ಪಾಟೀಲ್ರನ್ನು ನಾವು ನೋಡೇ ಇಲ್ಲ ಅಂತ ಮಕ್ಕಳು ಹೇಳುತ್ತಿದ್ದಾರೆ. ಶಿಕ್ಷಕನ ವಿರುದ್ಧ ಕ್ರಮಕ್ಕೆ ಮುಖ್ಯ ಶಿಕ್ಷಕ ಮುಂದಾಗಿದ್ದಾರೆ. ಮರಳು ದಂಧೆ ಮಾಡುವ ಶಿಕ್ಷಕನಿಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 3 ತಿಂಗಳಿಂದ ಶಾಲೆಗೆ ಬರದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಗ್ರಾಮಸ್ಥರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಟಿವಿ9 ಜೊತೆ ಮಾತನಾಡಿದ ಬಿಇಓ ಆರ್ ಎಸ್ ಬುರಡಿ, ಶಿಕ್ಷಕನ ಕಳ್ಳಾಟಕ್ಕೆ ನಾನು ಸಾಥ್ ನೀಡಿಲ್ಲ. ಶಿಕ್ಷಕನ ಎಸ್ಕೆ ಪಾಟೀಲ್ ಕಳ್ಳಾಟದ ಬಗ್ಗೆ ಟಿವಿ9 ವರದಿ ಬಳಿಕ ಗೊತ್ತಾಗಿದೆ. ನನಗೆ ಈ ಬಗ್ಗೆ ಯಾರೂ ದೂರು ನೀಡಿಲ್ಲ. ಮುಖ್ಯ ಶಿಕ್ಷಕ, ಸಿಆರ್ಸಿಗಳು ನನಗೆ ಯಾರೂ ಮಾಹಿತಿ ನೀಡಿಲ್ಲ. ತಕ್ಷಣ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಅಂತ ತಿಳಿಸಿದರು.
ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್:
ಬೆಂಗಳೂರು: ಬೈಕ್ ಕದಿಯುತ್ತಿದ್ದ ಮೂವರು ಆರೋಪಿಗಳನ್ನ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ಮೌಲ್ಯದ 6 ಬೈಕ್ಗಳು ಮತ್ತು 6 ಮೊಬೈಲ್ಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳು ಅನ್ನಪೂರ್ಣೇಶ್ವರಿ ನಗರ, ವಿಜಯನಗರ, ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
ನಿರ್ಬಂಧಿತ ಬದುಕಿಗೆ ಕಡೆಗೂ ಸಿಕ್ತು ಬಿಗ್ ರಿಲೀಫ್; ಕೆಲವೆಡೆ ಆಕ್ರೋಶ, ಶಾಲೆಗಳತ್ತ ವಿದ್ಯಾರ್ಥಿಗಳು
Ganesh Jayanti: ಇಂದು ಗಣೇಶ ಜಯಂತಿ! ಉತ್ತರ ಕರ್ನಾಟಕದಲ್ಲಿ ಶ್ರದ್ಧಾ ಭಕ್ತಿ ಸಡಗರದ ಮಾಘ ಶುಕ್ಲ ಗಣೇಶ ಚತುರ್ಥಿ
Published On - 8:56 am, Mon, 31 January 22