ಹಾಸನ: ನಗರದ ಚಾಕೇನಹಳ್ಳಿ ಬಳಿ ಗೋದಾಮಿನಲ್ಲಿ ನಿನ್ನೆ (ಏಪ್ರಿಲ್ 4) ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ನಿನ್ನೆ ಜಿಲೆಟಿನ್ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಲಾಗಿತ್ತು. ಆದರೆ, ಗಾಯಗೊಂಡಿದ್ದ ರವಿ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಈ ಮೂಲಕ, ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಮತ್ತೊಬ್ಬ ನಟರಾಜ್ ಎಂಬವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಟಿವಿ9ಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ನಿನ್ನೆ ಸ್ಫೋಟಕವನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಸ್ಪೋಟವಾಗಿತ್ತು. ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಈ ಘಟನೆ ಹಾಸನ ತಾಲೂಕಿನ ಚಾಕೇನಹಳ್ಳಿಯಲ್ಲಿ ಸಂಭವಿಸಿತ್ತು. ಸ್ಪೋಟದಿಂದ 27 ವರ್ಷದ ಸಂಪತ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕವನ್ನು ಸಂಗ್ರಹಿಸಿದ್ದರು. ಸ್ಫೋಟಕ ವಿತರಣೆ ವೇಳೆ ಸ್ಪೋಟವಾಗಿದ್ದು, ಸ್ಪೋಟದ ತೀವ್ರತೆಗೆ ಚಾಕೇನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಪ್ರಕರಣ ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸ್ಫೋಟ ನಡೆದ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ, ಪರಿಶೀಲನೆ ಮಾಡಿದ್ದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸ್ಫೋಟ ಸಂಭವಿಸಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಐಜಿಪಿ ಪವಾರ್ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಆಗುಂಬೆ, ಹೊಸಗದ್ದೆ ಬಳಿ ಬಾಲಕಾರ್ಮಿಕ ಮೃತ್ಯು
ಶಿವಮೊಗ್ಗ: ಪಿಡಬ್ಲ್ಯುಡಿ ಇಂಜಿನಿಯರ್, ಗುತ್ತಿಗೆದಾರನ ಬೇಜವಾಬ್ದಾರಿಗೆ ಬಾಲಕ ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಸಂಭವಿಸಿದೆ. ಹೊಸಗದ್ದೆ ಬಳಿ ಸೇತುವೆಯ ಗೋಡೆ ಕುಸಿದು 17 ವರ್ಷದ ಬಾಲಕ, ಸುಲೇಮಾನ್ ಎಂಬಾತ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಸವಣೂರು ಮೂಲದ ಸುಲೇಮಾನ್, ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದಿದೆ. ಇದರಿಂದ ಬಾಲಕ ಮೃತಪಟ್ಟಿದ್ದಾನೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ಬಣವೆ, ಜಮೀನಿಗೆ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ
ಇದನ್ನೂ ಓದಿ: ಚಿತ್ರದುರ್ಗ: ಆ್ಯಕ್ಸಿಜನ್ ಖಾಲಿಯಾಗಿ ದಾರಿ ಮಧ್ಯ ಕೊರೊನಾ ಸೋಂಕು ತಗುಲಿದ್ದ ವೃದ್ಧೆ ಸಾವು
Published On - 11:31 pm, Mon, 5 April 21