TV9 Kannada Karnataka Kannada New | Girish Karnad Profile, Wiki, Career, Biography, Movies, and other details in Kannada
Girish Karnad: ಸಾಹಿತಿ, ನಾಟಕಗಾರ, ನಿರ್ದೇಶಕ ಗಿರೀಶ್ ಕಾರ್ನಾಡ್ ಕುರಿತು ನೀವು ತಿಳಿಯ ಸಂಗತಿಗಳು
ಗಿರೀಶ್ ಕಾರ್ನಾಡ್ ಅವರದು ತಮ್ಮ ಬಹುಮುಖಿ ಜೀವನಕ್ಕೆ ಹೆಸರುವಾಸಿಯಾದ ವ್ಯಕ್ತಿತ್ವ. ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್ ಕಾರ್ನಾಡ್ ಅವರ ಸಾಧನೆ ಅಪಾರ. ತಮ್ಮ ನಾಟಕಗಳ ಮೂಲಕ ಅವರು ಮಹತ್ವದ ಚಿಂತನೆಗಳನ್ನು ಓದುಗರ ಹೃದಯದಲ್ಲಿ ಬಿತ್ತಿದರು. ಅವರ ಜನ್ಮ ವಾರ್ಷಿಕೋತ್ಸವದಂದು, ಅವರ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಸಾಹಿತಿ ಗಿರೀಶ್ ಕಾರ್ನಾಡ್
ವಿವೇಕ ಬಿರಾದಾರ
Updated on:
May 19, 2023 | 7:23 AM
ಗಿರೀಶ್ ಕಾರ್ನಾಡ್ (Girish Karnad) ಎಂದು ಕರೆಯಲ್ಪಡುವ ಗಿರೀಶ್ ರಘುನಾಥ್ ಕಾರ್ನಾಡ್ ಅವರು ತಮ್ಮ ಬಹುಮುಖಿ ಜೀವನಕ್ಕೆ ಹೆಸರುವಾಸಿಯಾದ ವ್ಯಕ್ತಿತ್ವ. ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್ ಕಾರ್ನಾಡ್ ಅವರ ಸಾಧನೆ ಅಪಾರ. ತಮ್ಮ ನಾಟಕಗಳ ಮೂಲಕ ಅವರು ಮಹತ್ವದ ಚಿಂತನೆಗಳನ್ನು ಓದುಗರ ಹೃದಯದಲ್ಲಿ ಬಿತ್ತಿದರು. ಇಂದಿಗೂ ಅವರ ನಾಟಕಗಳು ಗಮನಾರ್ಹ ಕೃತಿಗಳಾಗಿ, ಪ್ರಸ್ತುತತೆ ಉಳಿಸಿಕೊಂಡಿವೆ. ಗಿರೀಶ್ ಕಾರ್ನಾಡ್ ಅವರ ಪ್ರತಿಭೆ ಕೇವಲ ನಾಟಕಗಳ ಬರವಣಿಗೆಗೆ ಮಾತ್ರ ಸೀಮಿತವಲ್ಲ. ಕನ್ನಡ ಚಿತ್ರರಂಗದ ಜನಪ್ರಿಯ ಮುಖ, ಅವರು ಹಲವಾರು ಸಾಧನೆಗಳು ಮತ್ತು ಆಸಕ್ತಿಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದರು. ಅವರು ನಟ, ಬರಹಗಾರ, ನಾಟಕಕಾರ, ನಟ, ವಿದ್ವಾಂಸ, ನಿರ್ದೇಶಕ, ಶಿಕ್ಷಣ ತಜ್ಞ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಜನ್ಮ ವಾರ್ಷಿಕೋತ್ಸವದಂದು, ಇವರ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ತಿಳಿಯೋಣ.
ಗಿರೀಶ್ ಕಾರ್ನಾಡ್ ಅವರು ಮೇ 19, 1938 ರಂದು ಮಹಾರಾಷ್ಟ್ರದ ಮಾಥೆರಾನ್‌ನಲ್ಲಿ ಜನಿಸಿದರು.
ಅವರು ಕೊಂಕಣಿ ಮಾತನಾಡುವ ಕುಟುಂಬದಲ್ಲಿ ಬೆಳೆದರು. ಅವರ ತಂದೆ ವೈದ್ಯ ಮತ್ತು ತಾಯಿ, ನರ್ಸ್. ಅವರ ತಂದೆ ವೈದ್ಯ ಮತ್ತು ರಂಗಭೂಮಿ ಅಭಿಮಾನಿಯಾಗಿದ್ದರು. ಹೀಗಾಗಿ ಗಿರೀಶ್ ಕರ್ನಾಡ ಅವರಿಗೆ ರಂಗಭೂಮಿ ಮೇಲಿನ ಆಸಕ್ತಿ ರಕ್ತಗತವಾಗಿಯೇ ಬಂದಿದೆ.
ರೋಡ್ಸ್ ವಿದ್ವಾಂಸರಾಗಿ ಆಕ್ಸ್‌ಫರ್ಡ್‌ನ ಲಿಂಕನ್ ಮತ್ತು ಮ್ಯಾಗ್ಡಲೆನ್ ಕಾಲೇಜುಗಳಿಂದ ಪದವಿ ಪಡೆದರು. ಅವರು ತತ್ವಶಾಸ್ತ್ರ, ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದರು.
ಗಿರೀಶ್ ಕಾರ್ನಾಡ್ ಅವರು 22 ನೇ ವಯಸ್ಸಿನಲ್ಲಿ ಯಯಾತಿ ನಾಟಕ ಬರೆದರು.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ಇವರೂ ಒಬ್ಬರು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಯನ್ನು ಗಿರೀಶ್ ಕಾರ್ನಾಡ್ ಬೆಳ್ಳಿತೆರೆಗೆ ತಂದರು.
ಕನ್ನಡ ಚಿತ್ರರಂಗದ ಮೇರು ನಟರಾದ ಶಂಕರ್ನಾಗ್ ಮತ್ತು ವಿಷ್ಣುವರ್ಧನ್ ಅವರಿಗೆ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದೇ ಗಿರೀಶ್ ಕಾರ್ನಾಡ್. ಅವರ ನಿರ್ದೇಶನದಲ್ಲಿ ಮೂಡಿಬಂದ ‘ವಂಶ ವೃಕ್ಷ’ ಸಿನಿಮಾ ಮೂಲಕ ವಿಷ್ಣುವರ್ಧನ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರು. ಶಂಕರ್ನಾಗ್ ಮೊದಲು ನಟಿಸಿದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾಗೆ ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದರು. ಮಾಲ್ಗುಡಿ ಡೇಸ್ ಎಂಬ ದೂರದರ್ಶನ ಸರಣಿಯನ್ನು ರಚಿಸಿದರು. ಮಾಲ್ಗುಡಿ ಡೇಸ್‌ನ ಮೊದಲ ಎಂಟು ಸಂಚಿಕೆಗಳಿಗೆ ಅವರು ಸ್ವಾಮಿಯ ತಂದೆಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.
ಟೈಗರ್ ಜಿಂದಾ ಹೈ, ಶಿವಾಯ್ ಮುಂತಾದ ಇತ್ತೀಚಿನ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯ ಜೊತೆಗೆ, ಅವರಿಗೆ ಪದ್ಮಶ್ರೀ (1974), ಪದ್ಮಭೂಷಣ (1992) ಸಹ ಲಭಿಸಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಜೂನ್ 10, 2019 ರಂದು ಬೆಂಗಳೂರಿನಲ್ಲಿ ತಮ್ಮ 81 ನೇ ವಯಸ್ಸಿನಲ್ಲಿ ನಿಧನರಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Fri, 19 May 23
Vivek Biradar
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.