ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಗೋಕಾಕ್ ಜಲಪಾತಕ್ಕೆ ಭೇಟಿ ನೀಡಿ

| Updated By: preethi shettigar

Updated on: Jun 22, 2021 | 1:44 PM

ಭಾರತದ ನಯಾಗರ ಎಂದೇ ಜನಪ್ರಿಯವಾಗಿರುವ ಈ ಜಲಪಾತ ವೀಕ್ಷಣೆಗೆ ಮೂರ್ನಾಲ್ಕು ವೀವ್ ಪಾಯಿಂಟ್​ಗಳಿವೆ. ಒಂದು ವೀವ್​ ಪಾಯಿಂಟ್​ನಲ್ಲಿ ಜಲಪಾತವನ್ನು ಸುಮಾರು 500 ಮೀಟರ್ ದೂರದಿಂದ ನೋಡಿ ಆನಂದಿಸಬಹುದು. ಹಾಗೆಯೇ ಜಲಪಾತದ ತಳಭಾಗಕ್ಕೂ ಹೋಗಿ ಆನಂದಿಸಬಹುದು.

ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಗೋಕಾಕ್ ಜಲಪಾತಕ್ಕೆ ಭೇಟಿ ನೀಡಿ
ಗೋಕಾಕ್ ಜಲಪಾತ
Follow us on

ಬೆಳಗಾವಿ: ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಗಳು, ಜಲಪಾತಗಳು, ನದಿಗಳು ಮೈತುಂಬಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತವೆ. ಅದರಲ್ಲೂ ಮುಂಗಾರು ಮಳೆಯ ಸಿಂಚನದಿಂದ ನಿಸರ್ಗ ಮಾತೆಯ ನೈಜ ಸೊಬಗು ಮತ್ತಷ್ಟು ಸೌಂದರ್ಯಯುತವಾಗಿ ಅನಾವರಣಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡುಗರನ್ನು ತಣಿಸಿದೆ. ಒಂದು ಕಡೆ ಲಾಕ್​ಡೌನ್​ ಸಡಿಲಿಕೆಯ ತೃಪ್ತಿ ಇದ್ದರೆ. ಮತ್ತೊಂದು ಕಡೆ ತಮ್ಮೂರಿನ ಜಲಪಾತ ತುಂಬಿ ಹರಿಯುತ್ತಿರುವ ಸಂತಸ. ಸದ್ಯ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಹೊಸದೊಂದು ಲೋಕವನ್ನೇ ಸೃಷ್ಟಿಮಾಡಿವೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವಾರ ವರುಣ ಅಬ್ಬರಿಸಿದ್ದರಿಂದ, ಘಟಪ್ರಭಾ ನದಿ ಉಕ್ಕಿ ಹರಿದಿದ್ದು, ಸಹಜವಾಗಿಯೇ ಗೋಕಾಕ್​ ಜಲಪಾತ ಕೂಡ ಮೈದುಂಬಿಕೊಂಡು ಮುಗಿಲೆತ್ತರದಿಂದ ಧುಮ್ಮಿಕ್ಕಲಾರಂಭಸಿದೆ. ಕಲ್ಲು, ಬಂಡೆಗಳ ಮಧ್ಯೆ ಬೋರ್ಗರೆಯುತ್ತಾ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತವನ್ನು ನೋಡಲು ಇದೀಗ ಸಹಸ್ರಾರು ಮಂದಿ ಆಗಮಿಸುತ್ತಿದ್ದಾರೆ. ಹೇಳಿ ಕೇಳಿ ಲಾಕ್​ಡೌನ್ ಬೇರೆ ಸಡಿಲವಾಗಿದೆ. ಹಾಗಾಗಿ ಜನರ ಖುಷಿಗೆ ಪಾರವೇ ಇಲ್ಲ. ನಾವು ಇಲ್ಲಿಗೆ ಬರುವುದಷ್ಟೇ ಅಲ್ಲ ಈ ಜಲಪಾತ ನೋಡಲು ನಮ್ಮ ಹತ್ತಿರದವನ್ನು ಕರೆ ತಂದಿದ್ದೇವೆ ಎಂದು ಬೆಳಗಾವಿ ನಿವಾಸಿ ಗೀತಾ ಹೇಳಿದ್ದಾರೆ.

ಭಾರತದ ನಯಾಗರ ಎಂದೇ ಜನಪ್ರಿಯವಾಗಿರುವ ಈ ಜಲಪಾತ ವೀಕ್ಷಣೆಗೆ ಮೂರ್ನಾಲ್ಕು ವೀವ್ ಪಾಯಿಂಟ್​ಗಳಿವೆ. ಒಂದು ವೀವ್​ ಪಾಯಿಂಟ್​ನಲ್ಲಿ ಜಲಪಾತವನ್ನು ಸುಮಾರು 500 ಮೀಟರ್ ದೂರದಿಂದ ನೋಡಿ ಆನಂದಿಸಬಹುದು. ಹಾಗೆಯೇ ಜಲಪಾತದ ತಳಭಾಗಕ್ಕೂ ಹೋಗಿ ಆನಂದಿಸಬಹುದು. ಹಾಗೆಯೇ ನದಿಗೆ ಮೇಲ್ಸೇತುವೆ ಇದ್ದು, ಇದರ ಮೇಲೆ ಹೋಗಿಯೂ ಜಲಪಾತದ ಸೊಬಗನ್ನು ಆನಂದಿಸಬಹುದು. ಆದರೆ ಇವೆಲ್ಲದ್ದಕ್ಕಿಂತ ಹೆಚ್ಚು ರೋಚಕ ಅನುಭವ ನೀಡುವುದು ಜಲಪಾತದ ಮೇಲ್ಭಾಗ. ಘಟಪ್ರಭೆ ಜಲಪಾತದ ತುತ್ತತುದಿಯಿಂದ ಹಾಲ್ನೊರೆಯಾಗಿ ಧುಮ್ಮಿಕ್ಕುವ ಸ್ಥಳದಲ್ಲೇ ಸಿಡಿದೇಳುವ ನೀರಿನ ಹನಿಗಳಿಗೆ ಮುಖವೊಡ್ಡುತ್ತಾ ರೋಚಕ ಅನುಭವ ಪಡೆಯಬಹುದಾಗಿದೆ.

ಈ ಜಲಪಾತ ಎಷ್ಟು ಮನೋಹರವೋ ಅಷ್ಟೇ ಅಪಾಯಕಾರಿಯೂ ಹೌದು. ಏಕೆಂದರೆ ಜಲಪಾತದ ಮೇಲ್ಭಾಗದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯವಾಗುವ ಸಾಧ್ಯತೆ ಇದೆ. ಈ ಹಿಂದೆ ಹಲವು ಮಂದಿ ಪ್ರಾಣವನ್ನು ಕೂಡ ಇಲ್ಲಿ ಕಳೆದುಕೊಂಡ ಉದಾಯಹರಣೆ ಇದೆ. ಅಲ್ಲದೆ ಇಲ್ಲಿ ಜನರನ್ನು ನಿಯಂತ್ರಿಸಲು ಸಿಬ್ಬಂದಿ ಕೂಡ ಇರುವುದಿಲ್ಲ. ಹಾಗಾಗಿ ಜನರು ತಮ್ಮ ಜಾಗೃತೆಯಲ್ಲಿಯೇ ಜಲಪಾತ ವೀಕ್ಷಿಸಬೇಕು.

ಇದನ್ನೂ ಓದಿ:

ಘಂಟೆ ಗಣಪತಿ, ಸಾತೊಡ್ಡಿ ಜಲಪಾತ.. ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

ಸ್ಯಾಂಕಿ ಕೆರೆ ಬಳಿ ಜಲಪಾತ ನಿರ್ಮಾಣ: ಸ್ಥಳ ಪರಿಶೀಲನೆ ಮಾಡಿದ ಡಿಸಿಎಂ