ಇಬ್ಬರು ರೈತರ ನಡುವಿನ ಜಗಳದಲ್ಲಿ ದ್ರಾಕ್ಷಿ ಗಿಡ ನಾಶ; ಕಳೆನಾಶಕ ಸಿಂಪಡಿಸಿ ಬೆಳೆಗೆ ಹಾನಿ ಮಾಡಿರುವ ಆರೋಪ
ಸೀಮೆ ಜಗಳದ ದ್ವೇಷದಿಂದ ಮಲ್ಲಪ್ಪ ಮಾಳಿ ದ್ರಾಕ್ಷಿ ಗಿಡಗಳಿಗೆ ಕಸಕ್ಕೆ ಸಿಂಪಡಿಸುವ ಕಳೆನಾಶಕ ಸಿಂಪಡಿಸಿ ದ್ರಾಕ್ಷಿ ಹಾಳು ಮಾಡಿದ್ದಾರೆ. ಜತೆಗೆ ಪಂಪ್ನಿಂದ ನೇರವಾಗಿ ಕೆಲವೊಂದಿಷ್ಟು ಗಿಡಗಳಿಗೆ ಕಳೆನಾಶಕ ಹೊಡೆದಿದ್ದಾರೆ. 1400 ಗಿಡಗಳ ನಾಶದಿಂದ ಹತ್ತು ಲಕ್ಷಕ್ಕೂ ಅಧಿಕ ನಷ್ಟವಾಗುತ್ತಿದೆ ಎಂದು ದ್ರಾಕ್ಷಿ ಬೆಳೆದ ರೈತ ಕೃಷ್ಣಗೌಡ ಪಾಟಿಲ್ ಆರೋಪ ಮಾಡಿದ್ದಾರೆ.
ಬಾಗಲಕೋಟೆ: ಪ್ರಗತಿಪರ ರೈತರೊಬ್ಬರು ನಾಲ್ಕು ಎಕರೆಯಲ್ಲಿ ಬೆಳೆದ ಬೆಳೆಯ ನಷ್ಟದಿಂದ ಸದ್ಯ ಕಂಗಾಲಾಗಿದ್ದಾರೆ. ಅಷ್ಟಕ್ಕೂ ರೈತ ಬೆಳೆದ ಬೆಳೆಯ ನಷ್ಟಕ್ಕೆ ಲಾಕ್ಡೌನ್ ಕಾರಣ ಅಲ್ಲ. ಬದಲಿಗೆ ಇನ್ನೋರ್ವ ರೈತನ ಜತೆಗಿನ ಕಲಹವೇ ಆಗಿದೆ. ಬಾಗಲಕೋಟೆ ತಾಲ್ಲೂಕಿನ ಶಿರೂರು ವ್ಯಾಪ್ತಿಯ ನಾಲ್ಕು ಎಕರೆ ಹೊಲದಲ್ಲಿ ಕೃಷ್ಣಗೌಡ ಪಾಟಿಲ್ ಎನ್ನುವ ರೈತ ದ್ರಾಕ್ಷಿ ಗಿಡಗಳನ್ನು ನೆಟ್ಟಿದ್ದರು. ದ್ರಾಕ್ಷಿ ಬೆಳೆ ಕೂಡ ಸಮೃದ್ಧವಾಗಿ ಬೆಳೆದು ನಿಂತಿದೆ. ಆದರೆ ಸೊಂಪಾಗಿ ಬೆಳೆದ ದ್ರಾಕ್ಷಿ ತೋಟದಲ್ಲಿ ಬರೊಬ್ಬರಿ 1400 ನೂರು ಗಿಡಗಳ ಚಿತ್ರಣವೆ ಬೇರೆ ರೀತಿಯಾಗಿದೆ. ಎಲೆಗಳು ಬಾಡಿದ ರೀತಿ ಮುದುಡಿದ್ದು, ಒಣಗಿದ ಲಕ್ಷಣ ಹೊಂದಿವೆ. ಇದಕ್ಕೆ ಕಾರಣ ಕೃಷ್ಣಗೌಡ ಪಾಟಿಲ್ ಹಾಗೂ ಪಕ್ಕದ ಹೊಲದ ಮಾಲೀಕ ಮಲ್ಲಪ್ಪ ಮಾಳಿ ಮಧ್ಯೆ ಇರುವ ಹೊಲದ ಸೀಮೆ ವಿವಾದ. ಇದರಿಂದ ಪರಸ್ಪರ ಜಗಳ ನಡೆದು ಕೇಸ್ ಕೂಡ ದಾಖಲಾಗಿವೆ.
ಸೀಮೆ ಜಗಳದ ದ್ವೇಷದಿಂದ ಮಲ್ಲಪ್ಪ ಮಾಳಿ ದ್ರಾಕ್ಷಿ ಗಿಡಗಳಿಗೆ ಕಸಕ್ಕೆ ಸಿಂಪಡಿಸುವ ಕಳೆನಾಶಕ ಸಿಂಪಡಿಸಿ ದ್ರಾಕ್ಷಿ ಹಾಳು ಮಾಡಿದ್ದಾರೆ. ಜತೆಗೆ ಪಂಪ್ನಿಂದ ನೇರವಾಗಿ ಕೆಲವೊಂದಿಷ್ಟು ಗಿಡಗಳಿಗೆ ಕಳೆನಾಶಕ ಹೊಡೆದಿದ್ದಾರೆ. 1400 ಗಿಡಗಳ ನಾಶದಿಂದ ಹತ್ತು ಲಕ್ಷಕ್ಕೂ ಅಧಿಕ ನಷ್ಟವಾಗುತ್ತಿದೆ ಎಂದು ದ್ರಾಕ್ಷಿ ಬೆಳೆದ ರೈತ ಕೃಷ್ಣಗೌಡ ಪಾಟಿಲ್ ಆರೋಪ ಮಾಡಿದ್ದಾರೆ.
ಕೃಷ್ಣಗೌಡ ಪಾಟಿಲ್ ಅವರು ಕಳೆದ ವರ್ಷವೂ ದ್ರಾಕ್ಷಿ ಬೆಳೆದಿದ್ದರು. ಉತ್ತಮ ಫಸಲು ಬಂದು ಲಾಕ್ಡೌನ್ಗೂ ಮುನ್ನ ದ್ರಾಕ್ಷಿ ಮಾರಾಟ ಮಾಡಿದ್ದರು. ಎಲ್ಲ ಖರ್ಚು ವೆಚ್ಚ ತೆಗೆದು ಮೂರು ಎಕರೆಯಲ್ಲಿ ಹದಿನಾಲ್ಕು ಲಕ್ಷ ರೂಪಾಯಿ ಲಾಭ ಪಡೆದಿದ್ದರು. ಈ ವರ್ಷ ಅದೇ ಹುಮ್ಮಸ್ಸಿನಲ್ಲಿ ನಾಲ್ಕು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಹೊಲದ ಸೀಮೆ ಜಗಳದ ಹಿನ್ನೆಲೆ ದ್ರಾಕ್ಷಿ ಬೆಳೆ ಹಾಳಾಗಿದೆ.
ಈ ಬಗ್ಗೆ ದೂರು ನೀಡಲಾಗಿದ್ದರಿಂದ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರು ಭೇಟಿ ನೀಡಿದ್ದು, ದ್ರಾಕ್ಷಿ ಗಿಡಗಳನ್ನು ಪರಿಶೀಲನೆ ಮಾಡಿ ಎಲೆಗಳ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ಕಳೆನಾಶಕದಿಂದ ಹಾನಿಗೀಡಾದ ದ್ರಾಕ್ಷಿ ಗಿಡಗಳು ಪುನಃ ಗೊನೆ ಹಿಡಿಯೋದು ಅಸಾಧ್ಯ. ಇದರಿಂದ ರೈತರಿಗೆ 1400 ಗಿಡಗಳಿಂದ ಬರಬೇಕಾದ ಲಾಭಕ್ಕೆ ಕತ್ತರಿ ಬಿದ್ದಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಬಸವರಾಜ ತಿಳಿಸಿದ್ದಾರೆ.
ಇದನ್ನೂ ಓದಿ:
ಹಳೇ ವೈಷಮ್ಯ: ಟೊಮ್ಯಾಟೊ ಬೆಳೆಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು
ಕೀಟನಾಶಕ ಬದಲು ಕಳೆನಾಶಕ ಸಿಂಪಡಣೆ, ಕಾಫಿ ತೋಟ ಭಸ್ಮ: ಬೇಸತ್ತು ವಿಷ ಸೇವಿಸಿದ ರೈಟರ್