ಕೀಟನಾಶಕ ಬದಲು ಕಳೆನಾಶಕ ಸಿಂಪಡಣೆ, ಕಾಫಿ ತೋಟ ಭಸ್ಮ: ಬೇಸತ್ತು ವಿಷ ಸೇವಿಸಿದ ರೈಟರ್

ಕೀಟನಾಶಕ ಬದಲು ಕಳೆನಾಶಕ ಸಿಂಪಡಣೆ, ಕಾಫಿ ತೋಟ ಭಸ್ಮ: ಬೇಸತ್ತು ವಿಷ ಸೇವಿಸಿದ ರೈಟರ್

ಕಾಫಿ ತೋಟಕ್ಕೆ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿ ಗಿಡಗಳು ನಾಶವಾದ ಪರಿಣಾಮ ತೋಟದ ರೈಟರ್ ವಿಷ ಸೇವಿಸಿದ ಘಟನೆ ಚಿಕ್ಕಮಗಳೂರಿನ ಮಾಕೋಡಿನಲ್ಲಿ ನಡೆದಿದೆ. ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಕೋಡಿನ ಕಲ್ಲೇಗೌಡ ಎಂಬುವವರಿಗೆ ಸೇರಿದ 12 ಎಕರೆ ಕಾಫಿತೋಟದಲ್ಲಿ ಕಾಂಟಾಪ್ ಔಷಧಿ ಸಿಂಪಡಿಸುವ ಬದಲು ರೌಂಡಪ್ ಕಳೆನಾಶಕ ಹೊಡೆದಿದ್ದರಿಂದ ಇಡೀ 12 ಎಕರೆಯಲ್ಲಿನ ಕಾಫಿಗಿಡ ಹಾಗೂ ಕರಿಮೆಣಸಿನ ಬಳ್ಳಿ ಸಂಪೂರ್ಣ ನಾಶವಾಗಿದೆ. ಕಲ್ಲೇಗೌಡ ಅವರ ಪುತ್ರ ಅಶೋಕ್​ ಗೌಡ ಕೆಲಸದ ನಿಮಿತ್ತ ಶಿವಮೊಗ್ಗದ ಬಳಿ ನೆಲೆಸಿದ್ದು ವೀರಭದ್ರ […]

sadhu srinath

| Edited By: pruthvi Shankar

Nov 20, 2020 | 12:22 PM

ಕಾಫಿ ತೋಟಕ್ಕೆ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿ ಗಿಡಗಳು ನಾಶವಾದ ಪರಿಣಾಮ ತೋಟದ ರೈಟರ್ ವಿಷ ಸೇವಿಸಿದ ಘಟನೆ ಚಿಕ್ಕಮಗಳೂರಿನ ಮಾಕೋಡಿನಲ್ಲಿ ನಡೆದಿದೆ. ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಕೋಡಿನ ಕಲ್ಲೇಗೌಡ ಎಂಬುವವರಿಗೆ ಸೇರಿದ 12 ಎಕರೆ ಕಾಫಿತೋಟದಲ್ಲಿ ಕಾಂಟಾಪ್ ಔಷಧಿ ಸಿಂಪಡಿಸುವ ಬದಲು ರೌಂಡಪ್ ಕಳೆನಾಶಕ ಹೊಡೆದಿದ್ದರಿಂದ ಇಡೀ 12 ಎಕರೆಯಲ್ಲಿನ ಕಾಫಿಗಿಡ ಹಾಗೂ ಕರಿಮೆಣಸಿನ ಬಳ್ಳಿ ಸಂಪೂರ್ಣ ನಾಶವಾಗಿದೆ.

ಕಲ್ಲೇಗೌಡ ಅವರ ಪುತ್ರ ಅಶೋಕ್​ ಗೌಡ ಕೆಲಸದ ನಿಮಿತ್ತ ಶಿವಮೊಗ್ಗದ ಬಳಿ ನೆಲೆಸಿದ್ದು ವೀರಭದ್ರ ಎಂಬುವವರನ್ನು ಕಾಫಿತೋಟದ ರೈಟರನ್ನಾಗಿ ನೇಮಿಸಿದ್ದರು. ವೀರಭದ್ರ ಅವರೇ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಕಳೆದ ವಾರ ಕಾಫಿ ಗಿಡಗಳಿಗೆ ಔಷಧಿ ಹೊಡೆಸಲು ಕಾರ್ಮಿಕರನ್ನು ಕರೆಸಿದ್ದಾರೆ.

ಆದರೆ, ಗಡಿಬಿಡಿಯಲ್ಲಿ ಕಾಫಿಗೆ ಸಿಂಪಡಿಸಬೇಕಿದ್ದ ಕಾಂಟಾಪ್ ಔಷಧಿಯ ಬದಲು ರೌಂಡಪ್ ಕಳೆನಾಶಕವನ್ನು ಕಾರ್ಮಿಕರಿಗೆ ನೀಡಿದ್ದಾರೆ. ಕಳೆನಾಶಕ ಸಿಂಪಡಿಸಿದ ಎರಡು ಮೂರು ದಿನಗಳ ನಂತರ ಫಸಲು ಹೊತ್ತು ನಳನಳಿಸುತ್ತಿದ್ದ ಗಿಡಗಳು ಏಕಾಏಕಿ ಬಾಡಲು ಶುರುವಾದಾಗ ಆದ ಅನಾಹುತ ಅರಿವಿಗೆ ಬಂದಿದೆ. ಇದರಿಂದ ಭಯಗೊಂಡ ವೀರಭದ್ರ ಅದೇ ಕಳೆನಾಶಕವನ್ನು ಕುಡಿದಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ತಿಂಗಳು ಶಿರಸಿ ಸಮೀಪದ ರೈತನೊಬ್ಬ ಎರಡೂವರೆ ಎಕರೆ ಪ್ರದೇಶದ ಭತ್ತದ ಹೊಲಕ್ಕೆ ಇದೇ ರೀತಿ ಕಣ್ತಪ್ಪಿನಿಂದ ಕಳೆನಾಶಕ ಹೊಡೆದು ಇಡೀ ಹೊಲವೇ ನಾಶವಾದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ವೀರಭದ್ರ ಅವರು ನೀಡಿದ ಹೇಳಿಕೆಯ ಪ್ರಕಾರ ಇದು ಅಚಾತುರ್ಯದಿಂದ ಆದ ಘಟನೆ. ಆದರೆ, ತನ್ನ ತಪ್ಪಿನಿಂದ ಯಜಮಾನರ ತೋಟ ನಾಶವಾಯಿತು. ಅವರಿಗೆ ಮುಖ ತೋರಿಸುವುದು ಹೇಗೆ? ಎಂದು ಬೇಸತ್ತು ತೋಟಕ್ಕೆ ಸಿಂಪಡಿಸಿದ್ದ ರೌಂಡಪ್ ಕಳೆನಾಶಕವನ್ನು ಸೇವಿಸಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಈಗ ನಿಧಾನವಾಗಿ ಚೇತರಿಸಿಕೊಳ್ತಾ ಇದ್ದು ಮಾಲೀಕ ಅಶೋಕ್ ಗೌಡ ಅವರೇ ಚಿಕಿತ್ಸೆ ಕೊಡಿಸ್ತಾ ಇದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. -ನಂದಿನಿ ಶೆಟ್ಟಿ, ಪಿಎಸ್​ಐ ಮಲ್ಲಂದೂರು ಪೊಲೀಸ್​ ಸ್ಟೇಶನ್

Follow us on

Related Stories

Most Read Stories

Click on your DTH Provider to Add TV9 Kannada