ಕೊಪ್ಪಳ: ನಾನು ಸರ್ಕಾರಿ ಅಧಿಕಾರಿ.. ಟೋಲ್ ಕಟ್ಟಲ್ಲ ಎಂದಿದ್ದಕ್ಕೆ ಸಾರ್ವಜನಿಕರು ಅಧಿಕಾರಿಗೆ ಥಳಿಸಿರುವ ಘಟನೆ ಜಿಲ್ಲೆಯ ಶಹಾಪುರ ಟೋಲ್ಗೇಟ್ ಬಳಿ ನಡೆದಿದೆ. ಸಹಾಯಕ ಇಂಜಿನಿಯರ್ ಚಿದಾನಂದ್ ಎಂಬುವವರನ್ನು ಜನರು ಥಳಿಸಿದ್ದಾರೆ. ಚಿದಾನಂದ್ ಜಿಲ್ಲೆಯ ಗಂಗಾವತಿ ವಿಭಾಗದ ಗ್ರಾಮೀಣಾಭಿವೃದ್ಧಿ ಕುಡಿವ ನೀರು ಸರಬರಾಜು ಇಲಾಖೆಯಲ್ಲಿ AE ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಟೋಲ್ ಕಟ್ಟಲ್ಲ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ನೆರೆದಿದ್ದ ಜನರು ಅಧಿಕಾರಿಯನ್ನು ಥಳಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭದ್ರಾ ಕಾಲುವೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ಭದ್ರಾ ಕಾಲುವೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟೋಪೆನಹಳ್ಳಿಯಲ್ಲಿ ನಡೆದಿದೆ. ಟೋಪೆನಹಳ್ಳಿ ಬಳಿ 16 ವರ್ಷದ ವಿದ್ಯಾರ್ಥಿ ದೀಪು ನೀರುಪಾಲಾಗಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಮತ್ತೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಂದ ಹಾಗೆ, ಮೃತ ಬಾಲಕ ದೀಪು ಜಿಲ್ಲೆಯ ಹುಚ್ಚವನಳ್ಳಿಯ ನಿವಾಸಿ.
ದೇವರ ಕಾರ್ಯಕ್ಕಾಗಿ ಕುಟುಂಬಸ್ಥರ ಜೊತೆ ತೆರಳಿದ್ದ ದೀಪು ಸ್ನೇಹಿತನ ಒಟ್ಟಿಗೆ ಈಜಲು ತೆರಳಿದ್ದ ವೇಳೆ ನೀರುಪಾಲಾಗಿದ್ದಾನೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈಜು ಬಾರದೇ ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು
ಈಜು ಬಾರದೇ ಈಜುಕೊಳದಲ್ಲಿ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ್ದಾನೆ. ಹಾವೇರಿಯ ಜಿ.ಹೆಚ್.ಕಾಲೇಜಿನ ಗುರುಕೃಪಾ ಈಜುಕೊಳದಲ್ಲಿ ಘಟನೆ ನಡೆದಿದೆ. ಈಜುಕೊಳದಲ್ಲಿ ಮುಳುಗಿ ಮಯೂರ್ ಶೆಟ್ಟಿ(17) ಅಸುನೀಗಿದ್ದಾನೆ.
ಸ್ನೇಹಿತರ ಜೊತೆ ಈಜಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಈಜುಕೊಳದಲ್ಲಿ ಯಾವುದೇ ಮುಂಜಾಗ್ರತಾ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಸಾವು
ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ತಾಲೂಕಿನ ಅವರಾದ್ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿತ್ತಾಪುರ ತಾಲೂಕಿನ ಸಾತನೂರು ನಿವಾಸಿ ಕನ್ಯಾಕುಮಾರಿ ಮಾಡಗಿ(27) ದುರ್ಮರಣ ಹೊಂದಿದ್ದಾರೆ.
ಕೆಲಸದ ಒತ್ತಡದಿಂದಲೇ ಕನ್ಯಾಕುಮಾರಿಗೆ ಅಪಘಾತವಾಗಿದೆ ಎಂದು ಆರೋಪಿಸಿ ಜಿಲ್ಲಾಸ್ಪತ್ರೆ ಮುಂದೆ ಶವವಿಟ್ಟು ಮೃತ ಮಹಿಳೆಯ ಕುಟುಂಬದವರು ಪ್ರತಿಭಟನೆ ನಡೆಸಿದರು. ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಧರಣಿ ನಡೆಸಿದರು. ಕನ್ಯಾಕುಮಾರಿ ಡೋಂಗರಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಸಿಕ್ತು ಒಪ್ಪಿಗೆ: ಕೇಂದ್ರ ಇನ್ವೆಸ್ಟ್ಮೆಂಟ್ ಸಮಿತಿ ಸಭೆಯಲ್ಲಿ ಸಿಕ್ತು ಅನುಮೋದನೆ