ಉ. ಕ ಪ್ರವಾಹ: ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಸರ್ಕಾರದ ಪರಿಹಾರ

ಪದೇಪದೆ ಮಳೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಸಂಕಷ್ಟಗಳ ಸಂಕೋಲೆಯಲ್ಲಿ ಸಿಕ್ಕಕೊಂಡು ಒದ್ದಾಡುತ್ತಿದೆ. ಬೀದಿಗೆ ಬಿದ್ದರುವ ಸಾವಿರಾರು ಕುಟುಂಬಗಳಿಗೆ ಪರಿಹಾರ ಮರೀಚಿಕೆಯಾಗಿದೆ. ಒಂದಉ ವರ್ಷದ ಅವಧಿಯಲ್ಲಿ ಮೂರು ಬಾರಿ ಪ್ರವಾಹಕ್ಕೆ ತುತ್ತಾಗಿರುವ ಜನ ಮನೆ-ಬೆಳೆ-ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿ ಏನಾದರೂ ಸಹಾಯ ಸಿಕ್ಕೀತೇ ಎಂದು ದೈನೇಸಿಗಳಾಗಿ ಸರ್ಕಾರ ಕಡೆ ನೋಡುತ್ತಿದ್ದರೂ ಪರಿಹಾರದ ಸುಳಿವು ಸಹ ಅವರಿಗೆ ಸಿಗುತ್ತಿಲ್ಲ. ಎಂದಿನಂತೆ ಅವರಿಗೆ ಸಹಾಯ ಮರೀಚಿಕೆಯಾಗಿದೆ. ಕಲ್ಯಾಣ ಕರ್ನಾಟಕದ ಹಲವಾರು ಭಾಗಗಳಲ್ಲಿ ನೆರೆಗೆ ಇಡೀ ಊರುಗಳೇ ಕೊಚ್ಚಿಕೊಂಡುಹೋಗಿ ಜನರ […]

ಉ. ಕ ಪ್ರವಾಹ: ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಸರ್ಕಾರದ ಪರಿಹಾರ

Updated on: Oct 19, 2020 | 10:52 PM

ಪದೇಪದೆ ಮಳೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಸಂಕಷ್ಟಗಳ ಸಂಕೋಲೆಯಲ್ಲಿ ಸಿಕ್ಕಕೊಂಡು ಒದ್ದಾಡುತ್ತಿದೆ. ಬೀದಿಗೆ ಬಿದ್ದರುವ ಸಾವಿರಾರು ಕುಟುಂಬಗಳಿಗೆ ಪರಿಹಾರ ಮರೀಚಿಕೆಯಾಗಿದೆ. ಒಂದಉ ವರ್ಷದ ಅವಧಿಯಲ್ಲಿ ಮೂರು ಬಾರಿ ಪ್ರವಾಹಕ್ಕೆ ತುತ್ತಾಗಿರುವ ಜನ ಮನೆ-ಬೆಳೆ-ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿ ಏನಾದರೂ ಸಹಾಯ ಸಿಕ್ಕೀತೇ ಎಂದು ದೈನೇಸಿಗಳಾಗಿ ಸರ್ಕಾರ ಕಡೆ ನೋಡುತ್ತಿದ್ದರೂ ಪರಿಹಾರದ ಸುಳಿವು ಸಹ ಅವರಿಗೆ ಸಿಗುತ್ತಿಲ್ಲ. ಎಂದಿನಂತೆ ಅವರಿಗೆ ಸಹಾಯ ಮರೀಚಿಕೆಯಾಗಿದೆ.

ಕಲ್ಯಾಣ ಕರ್ನಾಟಕದ ಹಲವಾರು ಭಾಗಗಳಲ್ಲಿ ನೆರೆಗೆ ಇಡೀ ಊರುಗಳೇ ಕೊಚ್ಚಿಕೊಂಡುಹೋಗಿ ಜನರ ಬದುಕು ನರಕವಾಗಿದೆ. ಈಗಾಗಲೇ ಕೊವಿಡ್-19 ಸೋಂಕಿನಿಂದ ಭಯಭೀತರಾಗಿ ಕೈಯಲ್ಲಿ ಉಸಿರಿಡಿದುಕೊಂಡು ಬದುಕುತ್ತಿದ್ದ ಲಕ್ಷಾಂತರ ಜನರ ಬದುಕನ್ನು ಮಳೆ ಮತ್ತಷ್ಟು ಅಸಹನೀಯ ಮತ್ತು ನಿಕೃಷ್ಟಗೊಳಿಸಿದೆ. ನದಿಗಳು ಉಕ್ಕಿ ಹರಿಯುತ್ತಿವೆ, ಕೆರೆ, ಹಳ್ಳ-ಕೊಳ್ಳಗಳೊಂದಿಗೆ ಹಲವಾರು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಜನರಿಗೆ ಅನ್ನ ಒದಗಿಸುವ ಶ್ರಮಜೀವಿ ರೈತರ ತಲೆಮೇಲಿನ ಸೂರು ಕುಸಿದುಬಿದ್ದಿದೆ. ಗಂಜಿ ಕೇಂದ್ರಗಳಲ್ಲಿ ಅವರು ಒಂದ್ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೆಲವು ಕಡೆ ಕುಡಿಯುವ ನೀರು ಸಹ ಅವರಿಗೆ ಸಿಗುತ್ತಿಲ್ಲ 

ಬಿ ಎಸ್ ಯಡಿಯೂರಪ್ಪನವರ ಸರ್ಕಾರವೇನೋ ಇರುವ ಹಣದಲ್ಲಿ ತಕ್ಷಣಕ್ಕೆ ಪರಿಹಾರ ಒದಗಿಸುವುದಾಗಿ ಹೇಳುತ್ತಿದೆ. ಆದರೆ ಆ ಭಾಗದಲ್ಲಿ ಪ್ರವಾಹ ಸೃಷ್ಟಸಿರುವ ಅವಾಂತರ ಮತ್ತು ಗಂಡಾಂತರಗಳ ಬಗ್ಗೆ ಅದಕ್ಕೆ ಒಂದು ಚಿಕ್ಕ ಅಂದಾಜು ಕೂಡ ಸರ್ಕಾರಕ್ಕೆ ಇದ್ದಂತಿಲ್ಲ. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿನ ಜಮೀನುಗಳಲ್ಲಿ ಬೆಳೆಗಳು ನಾಶವಾಗಿವೆ. ಸಾವಿರಾರು ಮನೆಗಳು ಅನಾಮತ್ತಾಗಿ ಧರೆಗುರುಳಿವೆ. ರಸ್ತೆ, ಸೇತುವೆಗಳು ಸಂಪೂರ್ಣವಾಗಿ ಹಾಳಾಗಿವೆ.

ಶತಮಾನದಲ್ಲೇ ಕೇಳರಿಯದಂಥ ರಣಭೀಕರ ಮಳೆ ಮತ್ತು ಪ್ರವಾಹದ ಆರ್ಭಟಕ್ಕೆ ಕಲಬುರಗಿ ಜಿಲ್ಲೆ ನಲುಗಿ ಹೋಗಿದೆ. ಜಿಲ್ಲೆಯಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದ್ದು, 10 ಸಾವಿರಕ್ಕಿಂತ ಅಧಿಕ ಮನೆಗಳು ಕುಸಿದುಬಿದ್ದಿವೆ. ಜಿಲ್ಲೆಯಲ್ಲಿ ಅಂದಾಜು 1 ಸಾವಿರ ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ವಿಜಯಪುರದಲ್ಲಿ ಭೀಮಾ ನದಿ ಪ್ರವಾಹಕ್ಕೆ 2 ಲಕ್ಷಕ್ಕೂ ಅಧಿಕ ಹೆಕ್ಟೇರ್​ನಲ್ಲಿ ಬೆಳೆದ ಬೆಳೆಗಳು ನೆಲಕಚ್ಚಿವೆ. ಹಾಗೆಯೇ, ಜಿಲ್ಲೆಯಲ್ಲಿ 2,405ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.

ಯಾದಗಿರಿಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೀರುಪಾಲಾಗಿದ್ದು, 450 ಮನೆಗಳು ನೆಲಸಮವಾಗಿವೆ. ಈ ಜಿಲ್ಲೆಯಲ್ಲಿ ರೂ. 500 ಕೋಟಿಗಿಂತ ಜಾಸ್ತಿ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಉಕ್ಕಿದ ಪ್ರವಾಹದಿಂದ ಕಳೆದ ಬಾರಿ ಉಂಟಾದ ಹಾನಿ ಸೇರಿದಂತೆ ಇದುವರೆಗೆ ಒಟ್ಟು 35 ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದ್ದು, ಜಿಲ್ಲೆಯಲ್ಲಿ 270 ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಒಟ್ಟು ರೂ 1,400 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬಾಗಲಕೋಟೆಯಲ್ಲಿ ಕೃಷ್ಣೆ, ಮಲಪ್ರಭಾ ಪ್ರವಾಹಕ್ಕೆ ಹಾಗೂ ಮಳೆಗೆ 27 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದ್ದು, ಜಿಲ್ಲೆಯಲ್ಲಿ ಸುಮಾರು 2700 ಮನೆಗಳು ಹಾನಿಗೀಡಾಗಿವೆ. ಒಂದು ಅಂದಾಜಿನ ಪ್ರಕಾರ ಬಾಗಲಕೋಟೆ ನಗರವೊಂದರಲ್ಲೇ ಪ್ರವಾಹದಿಂದ ಹೆಚ್ಚು ಕಡಿಮೆ ರೂ 500 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ತಿಳಿದುಬಂದಿದೆ. 

ಇಷ್ಟೆಲ್ಲ ಹಾನಿಯಾಗಿದ್ದರೂ, ಸರ್ಕಾರ ಆಯಾ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್​ಗೆ ಹಾಕಿರುವ ಹಣ ಕೆಲವೇ ಕೆಲ ಕೋಟಿ ರೂಪಾಯಿಗಳು ಮಾತ್ರ. ಕಲಬುರಗಿ ಜಿಲ್ಲಾಧಿಕಾರಿಗಳ ಖಾತೆಗೆ ರೂ 29 ಕೋಟಿ, ಯಾದಗಿರಿ ರೂ 16 ಕೋಟಿ, ವಿಜಯಪುರ ರೂ 19 ಕೋಟಿ, ಬೆಳಗಾವಿ ರೂ. 88 ಕೋಟಿ, ಮತ್ತು ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ 33 ಕೋಟಿ ಹಣವಿದೆ.

ಪರಿಸ್ಥಿತಿ ಹೀಗಿರಬೇಕಾದರೆ ಕಂದಾಯ ಸಚಿವ ಆರ್ ಅಶೋಕ, ಎಲ್ಲ ಸಂತ್ರಸ್ತರಿಗೆ ನೆರವು ಒದಗಿಸಿದ್ದೇವೆ ಅಂತ ಬಡಾಯಿ ಕೊಚ್ಚಿಕೊಳ್ಳತ್ತಿದ್ದಾರೆ. ಸಚಿವರು ಹೇಳತ್ತಿರುವುದೆಲ್ಲ ಬರೀ ಬೊಗಳೆ ಅಂತ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಚಿವರನ್ನು ಮತ್ತು ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲ್ಲಿರುವ ಪ್ರಶ್ನೆ ಯಾರು ಸತ್ಯವಂತರು, ಯಾರು ಸುಳ್ಳುಗಾರರು ಅನ್ನುವುದಲ್ಲ. ನೊಂದು ಬೆಂದಿರುವ ಸಂತ್ರಸ್ತರಿಗೆ ಬೇಕಿರುವುದು ಪರಿಹಾರ. ಆದರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಮತ್ತು ಇದುವರೆಗೆ ಮಾಡಿರುವ ವ್ಯವಸ್ಥೆಗಳನ್ನು ಗಮನಿಸಿದರೆ ಆ ಜನರ ಕಷ್ಟಗಳಿಗೆ ಪರಿಹಾರ ಸಿಗುವುದು ಸಾಧ್ಯವಿಲ್ಲ ಅಂತ ಯಾರಿಗಾದರೂ ಅನಿಸಿಬಿಡುತ್ತದೆ.