ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ವಿಚಾರವಾಗಿ ಹೇಳಿಕೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ದೃಷ್ಟಿಯಿಂದ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, 7 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ ಎಂದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಕೊಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ರಾಜ್ಯದ ಬಗ್ಗೆ ಮೋದಿಯವರಿಗೆ ವಿಶೇಷ ಆಸಕ್ತಿ ಇದೆ. ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಚುನಾವಣೆಗೆ ನಾವು ಸಿದ್ದರಾಗಿದ್ದೇವೆ. ಈ ಹಿಂದೆ ತಾತ್ಕಾಲಿಕವಾಗಿ ರದ್ದುಗೊಂಡಿದ್ದ ಜನೋತ್ಸವ ಕಾರ್ಯಕ್ರಮವೂ ಸೆ.8ರಂದು ನಡೆಯಲಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರಿಗೆ ಸ್ಥಾನಮಾನ ವಿಚಾರವಾಗಿ ಮಾತನಾಡಿದ ಆರಗ ಜ್ಞಾನೇಂದ್ರ, ಯಡಿಯೂರಪ್ಪ ಅವರಿಗೆ ಪಕ್ಷವು ಗೌರವ ಸಲ್ಲಿಸಿದೆ, ಮುಂದಿನ ಚುನಾವಣೆ ದೃಷ್ಟಿಯಲ್ಲಿ ರಾಜ್ಯಾದ್ಯಂತ ಪ್ರವಾಸಕ್ಕೆ ಅವರು ಸಿದ್ದರಾಗಿದ್ದಾರೆ. ಇದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದರು.
ಆರೋಪಿಯ ಹಿಸ್ಟ್ರಿ ಭಯಾನಕ
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಪ್ರಮುಖ ಆರೋಪಿ ಜಬೀ ಲಿಂಕ್ ಭಯಾನಕವಾಗಿದೆ. ಭಯೋತ್ಪಾದಕರ ಜೊತೆ ಸಂಬಂಧ ಇರುವುದು ಬಹಿರಂಗವಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರ ಮಾಡುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಶಾಂತಿಗಾಗಿ ಕಡಿಗೆ ಜಾಥಾ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಸಚಿವರು, ಸದ್ಯ ಜಿಲ್ಲೆ ಸಂಪೂರ್ಣವಾಗಿ ಶಾಂತಿಯುತವಾಗಿದೆ. ಆಗಾಗ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೇ ಎಂದರು. ಕಾಂಗ್ರೆಸ್ನ ನಡಿಗೆ ಕಾರ್ಯಕ್ರಮವನ್ನು ಟೀಕಿಸಿದ ಸಚಿವರು, ಉಗ್ರರ ಜೊತೆ ಲಿಂಕ್ ಇದ್ದವರೊಂದಿಗೆ ಶಾಂತಿ ನಡಿಗೆ ನಡೆಸಲಿ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ