ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇಂದು ನಡೆಯಲ್ಲಿದ್ದು, ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
ಇಂದು 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲ್ಲಿದ್ದು, ಒಟ್ಟು 226 ತಾಲೂಕುಗಳ 5,728 ಗ್ರಾ.ಪಂ.ಗಳಿಗೆ ಎಲೆಕ್ಷನ್ ನಡೆದಿತ್ತು. ಒಟ್ಟಾರೆ 5,728 ಗ್ರಾ.ಪಂ.ಗಳಿಗೆ 2 ಹಂತಗಳಲ್ಲಿ ಮತದಾನ ನಡೆದಿತ್ತು. ಹಾಗೂ 5,728 ಗ್ರಾ.ಪಂ.ಗಳ 91,339 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ 8,074 ಸ್ಥಾನಕ್ಕೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿತ್ತು.
ಕೆಲವೆಡೆ ಮತದಾರರು ಗ್ರಾ.ಪಂ. ಚುನಾವಣೆ ಬಹಿಷ್ಕರಿಸಿದ್ದರು. ಹಾಗಾಗಿ ಉಳಿದ ಗ್ರಾ.ಪಂ. ಸ್ಥಾನಕ್ಕೆ 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದರು. ಮೊದಲ ಹಂತದಲ್ಲಿ 43,238 ಸ್ಥಾನಗಳಿಗೆ ಮತದಾನ ನಡೆದಿತ್ತು. ಹಾಗೂ ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು.
ವಿಶೇಷವೆಂದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ಇವಿಎಂ ಬಳಕೆ ಮಾಡಲಾಗಿತ್ತು. ಬೀದರ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಮತ ಪತ್ರ ಬಳಸಿ ಚುನಾವಣೆ ನಡೆಸಲಾಗಿತ್ತು.
ಬೆಂ. ನಗರ ಜಿಲ್ಲೆಯ 3,368 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ..
ಬೆಂಗಳೂರು ನಗರ ಜಿಲ್ಲೆಯ 80 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 1,376 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಸರ್ಕಾರಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯಲ್ಲಿದ್ದು, ದಾಸರಹಳ್ಳಿಯ ಕಾಳಹಸ್ತಿನಗರದ ಪದವಿಪೂರ್ವ ಕಾಲೇಜಿನಲ್ಲಿ ಬೆಂಗಳೂರು ಉತ್ತರ ತಾಲೂಕಿನ ಮತ ಎಣಿಕೆ ನಡೆಯಲಿದೆ.
ಯಲಹಂಕದ ಶೇಷಾದ್ರಿಪುರಂನ ಪ್ರಥಮದರ್ಜೆ ಕಾಲೇಜಿನಲ್ಲಿ ಯಲಹಂಕ ತಾಲೂಕಿನ ಮತಗಳ ಎಣಿಕೆ ನಡೆಯಲಿದೆ. ಹಾಗೂ ಕೆಂಗೇರಿಯ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಮತಗಳ ಎಣಿಕೆ ನಡೆಯಲಿದೆ. ಕೆ.ಆರ್.ಪುರದ ಐಟಿಐ ವಿದ್ಯಾಮಂದಿರದಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಮತಗಳ ಎಣಿಕೆ ನಡೆಯಲಿದೆ. ಜೊತೆಗೆ ಆನೇಕಲ್‌ನ ಎ.ಎಸ್.ಬಿ. ಜೂನಿಯರ್ ಕಾಲೇಜಿನಲ್ಲಿ ಆನೇಕಲ್ ತಾಲೂಕಿನ ಗ್ರಾ.ಪಂ.ಗಳ ಮತ ಎಣಿಕೆ ನಡೆಯಲಿದೆ.
ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ
Published On - 7:37 am, Wed, 30 December 20