ರಾಜಕೀಯದಿಂದ ಕೃಷಿ ಕಡೆ ಮುಖ ಮಾಡಿ ಯಶಸ್ಸು ಕಂಡ ಎಂ.ಪಿ.ನಾಡಗೌಡ
ಎಂ.ಪಿ.ನಾಡಗೌಡ ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಅಲ್ಲಿ ಸಾಧಾರಣವಾಗಿ ಬೆಳೆಯುವ ದಾಳಿಂಬೆ ಹೊರತುಪಡಿಸಿ ಬೇರೆ ಏನಾನ್ನಾದರೂ ಬೆಳೆಯಬೇಕು ಎಂಬ ಹಂಬಲ ಅವರದು. ಹೀಗಾಗಿಯೇ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಸೀಮಿತವಾಗಿದ್ದ ಗೇರು (ಗೊಡಂಬಿ) ಬೆಳೆಯನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿದ್ದಾರೆ.
ಬಾಗಲಕೋಟೆ: ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಒಂದು ಬಾರಿ ರಾಜಕೀಯಕ್ಕೆ ಕಾಲಿಟ್ಟರೆ ಸಾಕು ಹೊಸದೊಂದು ಪ್ರಪಂಚವನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಬಹುತೇಕರು ತಮ್ಮ ಮೂಲ ಕಸುಬನ್ನು ಮರೆತು ಬಿಡುತ್ತಾರೆ. ಅದರಲ್ಲೂ ಕೃಷಿ ಕೆಲಸದಿಂದ ಆದಷ್ಟು ದೂರ ಉಳಿಯುವವರೇ ಹೆಚ್ಚು.
ಆದರೆ ಇಲ್ಲೋರ್ವ ರಾಜಕಾರಣಿ ರಾಜಕೀಯದ ಬದಲಿಗೆ ಕೃಷಿ ಕಡೆ ಒಲವು ಮೂಡಿಸಿಕೊಂಡು ಕೃಷಿಯಲ್ಲಿ ಯಶಸ್ಸಿನ ಹಾದಿ ಹುಡುಕುತ್ತಾ ಹೊರಟಿದ್ದಾರೆ. ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹೊಲದಲ್ಲಿ ಕೃಷಿ ಕಾಯಕ ಮಾಡುತ್ತಾ ರೈತರಾಗಿ ಬದಲಾಗುತ್ತಿದ್ದಾರೆ.
ನಾಲ್ಕು ಬಾರಿ MLC ಒಂದು ಬಾರಿ ಪಕ್ಷದ ರಾಜ್ಯಾಧ್ಯಕ್ಷ ಆಗಿರುವ ಆ ರೈತ-ರಾಜಕಾರಣಿ ಎಂ.ಪಿ.ನಾಡಗೌಡ. ಮಾಜಿ ಸಚಿವ ದಿ. ಪಿ.ಎಂ.ನಾಡಗೌಡ ಅವರ ಪುತ್ರ ಎಂ.ಪಿ.ನಾಡಗೌಡ ತಂದೆಯಿಂದ ರಾಜಕೀಯ ಪ್ರೇರಣೆ ಪಡೆದು ರಾಜಕಾರಣಕ್ಕೆ ಎಂಟ್ರಿ ಕೊಟ್ಟರು. 1984ರಿಂದ ಇದುವರೆಗೆ ಒಟ್ಟು 4 ಬಾರಿ ಪದವೀಧರ ಕ್ಷೇತ್ರದಿಂದ MLCಯಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಪಕ್ಕಾ ಅಭಿಮಾನಿ, ಜನತಾದಳದ ಮುಖಂಡ ಆದ ಎಂ.ಪಿ.ನಾಡಗೌಡ ಸರಳ ಮನುಷ್ಯ.
ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ನಾಡಗೌಡ ಓದಿದ್ದು ಮೆಡಿಕಲ್. ಬಳಿಕ ಇಳಕಲ್ ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಅಧಿಕಾರಿ ಆದರು. ನಂತರ ತಂದೆಯ ರಾಜಕಾರಣದಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಕಾಲಿಟ್ಟರು. ರಾಜಕಾರಣದಲ್ಲಿ ಪ್ರಾರಂಭಿಕ ಯಶಸ್ಸು ಸಿಕ್ಕರೂ ನಂತರದ ಹಾದಿ ತುಸು ಕಠಿಣವಾಯಿತು. ಹೀಗೆ ಡಾಕ್ಟರ್, ರಾಜಕಾರಣಿ ಎರಡೂ ಆದ ನಾಡಗೌಡ ಸದ್ಯ ರೈತನಾಗಿ ಬದಲಾಗಿದ್ದಾರೆ.
ಬೆಳೆ ಬಾರದ ಪ್ರದೇಶದಲ್ಲಿ ಹಣ್ಣು ಬೆಳೆದು ಮಾದರಿ ಎಂ.ಪಿ.ನಾಡಗೌಡ ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಅಲ್ಲಿ ಸಾಧಾರಣವಾಗಿ ಬೆಳೆಯುವ ದಾಳಿಂಬೆ ಹೊರತುಪಡಿಸಿ ಬೇರೆ ಏನಾನ್ನಾದರೂ ಬೆಳೆಯಬೇಕು ಎಂಬ ಹಂಬಲ ಅವರದು. ಹೀಗಾಗಿಯೇ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಸೀಮಿತವಾಗಿದ್ದ ಗೇರು (ಗೋಡಂಬಿ) ಬೆಳೆಯನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿದ್ದಾರೆ. ಆ ಮೂಲಕ ಗೇರು ಬೆಳೆ ಬಯಲು ಸೀಮೆಗೂ ವ್ಯಾಪಿಸುವಂತೆ ಮಾಡಿದ್ದಾರೆ. ಇದರೊಟ್ಟಿಗೆ, ವಿವಿಧ ತೆರನಾದ ಹಣ್ಣಿನ ಬೆಳೆಗಳನ್ನು ಬೆಳೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ತಮ್ಮ ಕುಟುಂಬಕ್ಕೆ ಸೇರಿದ 16 ಎಕರೆ ಪ್ರದೇಶದ ಕೆಂಪು ಮಣ್ಣಿನ ಬರಡು ಭೂಮಿಯನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದಾರೆ. ಅದಕ್ಕಾಗಿ ಡಿಸಿಸಿ ಬ್ಯಾಂಕ್ ಮತ್ತು ಇತರೆ ಖಾಸಗಿ ಬ್ಯಾಂಕುಗಳಿಂದ ಸುಮಾರು 40-50 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಬಂಜರು ಭೂಮಿಯನ್ನು ಅಭಿವೃದ್ಧಿಪಡಿಸಿ ತೋಟಗಾರಿಕೆ ಬೆಳೆ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗೇರು, ಅಂಜೂರ, ದಾಳಿಂಬೆ, ಹಲಸು, ಸೀತಾಫಲ ಸೇರಿದಂತೆ ತರಹೇವಾರಿ ಹಣ್ಣಿನ ಬೆಳೆಗಳನ್ನು ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಯುತ್ತಿದ್ದಾರೆ.
ಹೇಗಿದೆ ವ್ಯವಸಾಯ ಪದ್ಧತಿ? ವೆಂಗ್ರೂಲಾ ತಳಿಯ ಗೇರು(ಗೋಡಂಬಿ), ಡಯಾನ ತಳಿಯ ಅಂಜೂರ, ಸಿಂಧೂರ ತಳಿಯ ದಾಳಿಂಬೆ, ಎನ್.ಪಿ.ಕೆ ತಳಿಯ ಸೀತಾಫಲ ಬೆಳೆಯಲಾಗುತ್ತಿದ್ದು ಒಟ್ಟು 1200 ಗೇರು ಸಸಿಗಳನ್ನು 30*30 ಅಂತರದಲ್ಲಿ, 2000 ಅಂಜೂರ ಸಸಿಗಳನ್ನು 15*15 ಅಂತರದಲ್ಲಿ, 1500 ದಾಳಿಂಬೆ, 400 ಸೀತಾಫಲ ಸಸಿಗಳನ್ನು 15*15 ಅಂತರದಲ್ಲಿ ಬೆಳೆಯಲಾಗುತ್ತಿದೆ.
ಕೇವಲ ಒಂದೇ ಬೆಳೆ ಬೆಳೆಯದೆ ಮಿಶ್ರ ಬೇಸಾಯಕ್ಕೆ ಮುಂದಾಗಿರುವ ನಾಡಗೌಡ ಈ ತೋಟದಲ್ಲಿ ಒಂದೇ ಬೆಳೆಗೆ ಆದ್ಯತೆ ನೀಡದೆ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿದ್ದು ಒಂದೊಂದು ಕಾಲದಲ್ಲಿ ಒಂದೊಂದು ಬೆಳೆಯಿಂದ ಆದಾಯ ಪಡೆಯಬಹುದಾಗಿದೆ. ಈ ಬಗ್ಗೆ ಮಾತನಾಡಿದ ಮಲ್ಲನಗೌಡ ನಾಡಗೌಡ್ರ, ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಕೆಲವೊಂದು ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡುತ್ತಿದೆ. ಅಂತಹ ಸೌಲಭ್ಯಗಳನ್ನು ರೈತರಿಗೂ ನೀಡಬೇಕು. ಗೇರು, ಅಂಜೂರ ದೀರ್ಘಾವಧಿಯ ಬೆಳೆಗಳಾಗಿದ್ದು ಇಂತಹ ಬೆಳೆಗಳನ್ನು ಬೆಳೆಯಲು ರೈತರು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ಮತ್ತು ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ ರೈತರಿಗೂ ಪ್ರೋತ್ಸಾಹ ನೀಡಿದಂತಾಗುತದೆ. ಇಂತಹ ಬೆಳೆಗಳಿಂದ ರೈತರು ಆರ್ಥಿಕವಾಗಿ ಬಲಾಢ್ಯರಾಗಲೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ವೈದ್ಯಕೀಯದಿಂದ ರಾಜಕೀಯ ಕಡೆ ಹೋಗಿ ಈಗ ತಮ್ಮ ಕೌಟುಂಬಕ ಕಸುಬಿನ ಕಡೆ ಇವರು ಮುಖ ಮಾಡಿದ್ದಾರೆ. ಅದರಲ್ಲಿ ಯಶಸ್ಸಿನತ್ತ ಸಾಗುತ್ತಿದ್ದು ಇವರ ಕೃಷಿ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಅಪರೂಪದ ರಕ್ತ ಚಂದನ ಬೆಳೆದ ಯುವ ರೈತ; ಯೂಟ್ಯೂಬ್ ನೋಡಿಯೇ ಪ್ರೇರಣೆ ಪಡೆದಿದ್ದರು !