ಬೆಂಗಳೂರು: ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದೆ. ಹೀಗಾಗಿ 2000 ರೂ. ಅತ್ತೆಗಾ? ಸೊಸೆಗಾ? ಎನ್ನುವುದೇ ಗೊಂದಲವಾಗಿದೆ. ಇನ್ನು ಈ ಬಗ್ಗೆ ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಪರೋಕ್ಷವಾಗಿ ಸೊಸೆಗೆ ಗೃಹಲಕ್ಷ್ಮೀ ಯೋಜನೆ ಇಲ್ಲ ಎಂದರು.
ಇದನ್ನೂ ಓದಿ: 2000 ರೂ. ಅತ್ತೆಗಾ? ಸೊಸೆಗಾ?: ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ
ಬೆಳಗಾವಿಯಲ್ಲಿ ಇಂದು(ಮೇ30) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ನಮ್ಮ ಸಂಪ್ರದಾಯದ ಪ್ರಕಾರ ಮನೆಯ ಒಡತಿ ಅತ್ತೆ ಆಗುತ್ತಾರೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಅತ್ತೆಗೆ ನೀಡುತ್ತೇವೆ. ಅತ್ತೆ ಪ್ರೀತಿಯಿಂದ ಬೇಕಾದರೆ ಸೊಸೆಗೆ ಯೋಜನೆಯ ಹಣ ನೀಡಲಿ. ನಾಳೆ ಅಧಿಕಾರಿಗಳ ಜತೆ ಸಭೆ ನಡೆಸಿ ಅನುಷ್ಠಾನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು. ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಗೃಹಲಕ್ಷ್ಮೀ ಯೋಜನೆ ಸೊಸೆಗೆ ಸಿಗುವುದಿಲ್ಲ ಎನ್ನುವ ಸುಳಿವು ನೀಡಿದರು.
ಇನ್ನೊಂದೆಡೆ ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದ್ದು, ಅತ್ತೆ ಸೊಸೆ ಇಬ್ಬರಿಗೂ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬೇಕು. ಒಬ್ಬರಿಗೆ ಕೊಟ್ಟು ಇಬ್ಬರ ನಡುವೆ ಭೇದಭಾವ ಮಾಡಬಾರದು ಎನ್ನುವ ಅಭಿಪ್ರಾಯಗಳ ವ್ಯಕ್ತವಾಗಿವೆ. ಹೀಗಾಗಿ ಅತ್ತೆಗಾ? ಸೊಸೆಗಾ? ಎನ್ನುವುದೇ ಗೊಂದಲವಾಗಿದ್ದು, ಇದೀಗ ಲಕ್ಷ್ಮೀ ಹೆಬ್ಬಾಳರ್ ಅತ್ತೆಯೇ ಗೃಹಲಕ್ಷ್ಮೀ ಯೋಜನೆ ಅರ್ಹರಾಗುತ್ತಾರೆ ಎಂದು ತಿಳಿಸಿದರು.