ರಾಮನಗರ, (ಅಕ್ಟೋಬರ್ 01): ಬಿಜೆಪಿ ಜೊತೆಗೆ ಮೈತ್ರಿಯಾಗಿದ್ದು(BJP And JDS alliance ), ಲೋಕಸಭೆಯಲ್ಲಿ (Loksabha Elections 2024) ಜಂಟಿ ಹೋರಾಟ ಖಾತ್ರಿಯಾಗಿದೆ. ಆದ್ರೆ, ಇದೇ ಮೈತ್ರಿ ಈಗ ಜೆಡಿಎಸ್ನಲ್ಲಿ ಕಲಹ ಸೃಷ್ಟಿಸಿದೆ. ಇಷ್ಟು ದಿನ ದಳಮನೆಯಲ್ಲಿದ್ದ ಮುಸ್ಲಿಂ ಮುಖಂಡರು ತೆನೆ ಇಳಿಸಿ ಹೊರಡಲು ನಿರ್ಧರಿಸಿದ್ದಾರೆ. ರಾಜ್ಯ ಉಪಾಧ್ಯಕ್ಷ ಶಫೀವುಲ್ಲಾ ರಾಜೀನಾಮೆ ಬಳಿಕ ಇತರೆ ಮುಖಂಡರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೇ ಇನ್ನುಳಿದ ಸಮುದಾಯದ ನಾಯಕರು ಸಹ ಬಿಜೆಪಿಯೊಂದಿಗೆ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ್ದು, ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಜೆಡಿಎಸ್ ವರಿಷ್ಠರು ಇಂದು(ಅ.01) ಅಸಮಧಾನಿತ ನಾಯಕರ ಸಭೆ ಕರೆದು ಮನವೊಲಿಸು ಕಸರತ್ತು ಮಾಡಿದ್ದು, ಪಕ್ಷ ಬಿಟ್ಟು ಹೋಗದಂತೆ ಪ್ರತಿಜ್ಞೆ ಭೋದನೆ ಮಾಡಲಾಗಿದೆ.
ಹೌದು…ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಅಸಮಧಾನಿತ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಮೈತ್ರಿಗೆ ಅಸಮಧಾನಗೊಂಡಿರುವ ನಾಯಕರ ಮುನಿಸು ಶಮನಕ್ಕೆ ಕಸರತ್ತು ನಡೆಸಿದ್ದಾರೆ. ಮುನಿಸಿಕೊಂಡಿದ್ದ ಶಾಸಕರಾದ ಶರಣಗೌಡ ಕಂದಕೂರು ಹಾಗೂ ಕರೆಮ್ಮ ನಾಯಕ ಸೇರಿದಂತೆ ಇತರೆ ನಾಯಕರ ಜೊತೆ ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರು ಮಾತುಕತೆ ಮಾಡಿದ್ದು, ಯಾವುದೇ ಕಾರಣಕ್ಕೆ ಪಕ್ಷ ತೊರೆದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಭೆಯ ಕೊನೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರು ಜೆಡಿಎಸ್ ಬಿಟ್ಟು ಹೋಗದಂತೆ ಶಾಸಕರಿಗೆ ಹಾಗೂ ನಾಯಕರಿಗೆ ಪ್ರತಿಜ್ಞೆ ಭೋದನೆ ಮಾಡಿದ್ದಾರೆ.
ಇದನ್ನೂ ಓದಿ: ತತ್ವ ಸಿದ್ಧಾಂತ ಬದಿಗಿಟ್ಟು ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಿಕೊಂಡ ವೈಎಸ್ವಿ ದತ್ತಾ..!
ಪಕ್ಷ ನಮ್ಮ ತಾಯಿ ಇದ್ದಂಗೆ, ಪಕ್ಷದ ಪರವಾಗಿ ವಿಧೇಯರಾಗಿರುತ್ತೇವೆ. ಪಕ್ಷ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ತೀರ್ಮಾನ ವೇ ಅಂತಿಮ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ವಿಧೇಯರಾಗಿರುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಆದ್ರೆ, ಅಸಮಾಧಾನಿತರು ಪ್ರತಿಜ್ಞಾವಿಧಿಗೆ ಬದ್ಧರಾಗಿರುತ್ತಾರಾ ಎನ್ನುವುದೇ ಕುತೂಹಲ.
ಒಟ್ಟಿನಲ್ಲಿ ಇಂದಿನ ಅಸಮಾಧಾನಿತ ಶಾಸಕರು ಹಾಗೂ ನಾಯಕರ ಮನವೊಲಿಸಲು ದಳಪತಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದು, ಮುಂದೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರಾ? ಅಥವಾ ಪಕ್ಷಾಂತರ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ